ಬೆಳಗಾವಿ: ದಿನದಿಂದ ದಿನಕ್ಕೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಬಹಳಷ್ಟು ದೊಡ್ಡದಿದೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಹೇಳಿದರು.
ನಗರದ ಕನ್ನಡ ಭವನದಲ್ಲಿ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮಿಡಿಯಾ ಜರ್ನಾಲಿಸ್ಟ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಹಿರಿಯ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಚಿಕ್ಕ ವಯಸ್ಸಿನಿಂದ ನನಗೆ ಮಾಧ್ಯಮ ರಂಗ ಪರಿಚಯವಿದೆ. ಇದಕ್ಕೆ ತಂದೆಯವರೆ ಕಾರಣ. ತಂತ್ರಜ್ಞಾನ ಅಭಿವೃದ್ಧಿಯ ಪರಿಣಾಮ ಇಂದು ಸ್ಥಳದಲ್ಲಿಯೇ ನಾವು ದಿನನಿತ್ಯ ನಡೆಯುತ್ತಿರುವ ಬೆಳವಣಿಗೆಗಳ ಮಾಹಿತಿ ಪಡೆಯುತ್ತಿದ್ದೇವೆ ಎಂದರು.
ಪ್ರಸ್ತುತ ದಿನಗಳಲ್ಲಿ ಸಮೂಹ ಮಾಧ್ಯಮಗಳು ಸಾಮಾಜಿಕ ಬದಲಾವಣೆಯಲ್ಲಿ ಮಹತ್ವದ ಪಾತ್ರವಹಿಸಬೇಕು. ಜನರ ದೃಷ್ಟಿಕೋನ, ನಂಬಿಕೆ, ಕೌಶಲಗಳ ಬದಲಾವಣೆ ಆಗಬೇಕು. ಈ ಬದಲಾವಣೆ ತರಲು ಶಿಕ್ಷಣ, ತಿಳಿವಳಿಕೆ ಮೂಡಿಸುವ ಕೆಲಸ ಸಮೂಹ ಮಾಧ್ಯಮಗಳ ಮೇಲಿದೆ ಎಂದು ತಿಳಿಸಿದರು.
ಇದೇ ವೇಳೆ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮಿಡಿಯಾ ಜರ್ನಾಲಿಸ್ಟ್ ಅಸೋಸಿಯೇಷನ್ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಹಿರಿಯ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ನಿಮಿತ್ಯ ಹಮ್ಮಿಕೊಂಡಿದ್ದ ಕ್ರೀಡೆಗಳಲ್ಲಿ ಪಾಲ್ಗೊಂಡು ಜಯ ಸಾಧಿಸಿದ ತಂಡಗಳಿಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಶುಭ ಕೋರಿದರು.
ಈ ಸಂದರ್ಭದಲ್ಲಿ ಸಂಸದ ಈರಣ್ಣ ಕಡಾಡಿ, ಬೆಳಗಾವಿ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋಸರೆ, ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮಿಡಿಯಾ ಜರ್ನಾಲಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಮಂಜುನಾಥ ಪಾಟೀಲ್, ಪತ್ರಕರ್ತರಾದ ರಿಷಕೇಶಿ ಬಹದ್ದೂರ್ ದೇಸಾಯಿ, ಹಿರಿಯ ಪತ್ರಕರ್ತರಾದ ವಿಲಾಸ ಜೋಷಿ, ಅನಿಲ ಕಾಜಗಾರ, ಸಿದ್ದನಗೌಡ ಪಾಟೀಲ್ ಸೇರಿದಂತೆ ಅನೇಕ ಪತ್ರಕರ್ತರಿದ್ದರು.