ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾ ದೇವಿ ಅವರು ಇಂದು (ಜುಲೈ 14) ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲವು ಸಮಯದಿಂದ ಸರೋಜಾ ದೇವಿ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಆರೂವರೆ ದಶಕಗಳ ಕಾಲ ಅವರು ಚಿತ್ರರಂಗದಲ್ಲಿ ಇದ್ದರು. 2019ರಲ್ಲಿ ರಿಲೀಸ್ ಆದ ಪುನೀತ್ ರಾಜ್ಕುಮಾರ್ ನಟನೆಯ ‘ನಟಸಾರ್ವಭೌಮ’ ಅವರು ನಟಿಸಿದ ಕೊನೆಯ ಚಿತ್ರ.
ಸರೋಜಾ ದೇವಿ ಜನಿಸಿದ್ದು 1938ರ ಜನವರಿ 7ರಂದು. ಅವರು ಬೆಂಗಳೂರಿನಲ್ಲಿ ಹುಟ್ಟಿದರು. ಅವರ ತಂದೆ ಬೈರಪ್ಪ ಅವರು ಪೊಲೀಸ್ ಅಧಿಕಾರಿಯಾಗಿದ್ದರು. ತಾಯಿ ರುದ್ರಮ್ಮಾ ಅವರು ಹೌಸ್ವೈಫ್ ಆಗಿದ್ದರು. ಸರೋಜಾ ಬಳಿ ಭೈರಪ್ಪ ಅವರು ಡ್ಯಾನ್ಸ್ ಕಲಿಯುವಂತೆ ಪ್ರೋತ್ಸಾಹಿಸಿದರು. ಅವರು ಚಿತ್ರರಂಗಕ್ಕೆ ಬರಲು ತಂದೆಯಿಂದಲೇ ಬೆಂಬಲ ಸಿಕ್ಕಿತ್ತು.