ಧಾರವಾಡ : ನಮ್ಮ ಹಳ್ಳಿಗಳಲ್ಲಿ, ನಮ್ಮ ಹೊಲಗಳಲ್ಲಿ ಬೆಳೆದ ಉತ್ಪನ್ನಗಳಿಗೆ ಸಕಾಲಕ್ಕೆ ಸರಿಯಾದ ಬೆಲೆ ಸಿಗದೇ, ಎಷ್ಟೋ ರೈತರು ಮತ್ತು ಸಣ್ಣ ಉದ್ದಿಮೆದಾರರು ಕಷ್ಟಪಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಹಣ್ಣು, ತರಕಾರಿ, ಧಾನ್ಯಗಳು ಕಾಲಕ್ಕೆ ಸರಿಯಾಗಿ ಮಾರಾಟವಾಗದೆ ವ್ಯರ್ಥವಾಗುತ್ತವೆ. ಈ ಎಲ್ಲಾ ಸಮಸ್ಯೆಗಳಿಗೆ ಒಂದು ಉತ್ತಮ ಪರಿಹಾರವೇ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆಯ ಯೋಜನೆಯಾಗಿದೆ. ಇದನ್ನು ಸದುಪಯೋಗ ಪಡೆದುಕೊಂಡು ರೈತರು, ರೈತ ಗುಂಪುಗಳು, ಇತರರು ಉದ್ಯಮಿದಾರರಾಗಿ, ಯುವ ಜನತೆಗೆ ಸ್ಪೂರ್ತಿದಾಯಕರಾಗಬೇಕೆಂದು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್ ಶಿವಪ್ರಕಾಶ ಅವರು ಹೇಳಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕೃಷಿ ಇಲಾಖೆ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮವು ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವ (ಪಿಎಂಎಫ್‍ಎಂಇ) ಯೋಜನೆಯ ಕುರಿತು ಜಿಲ್ಲಾ ಮಟ್ಟದಲ್ಲಿ ವಿವಿಧ ಪಾಲುದಾರರಿಗೆ ಆಯೋಜಿಸಿದ್ದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವ ಯೋಜನೆಯು ಕೇವಲ ಸರಕಾರಿ ಸೌಲಭ್ಯವಲ್ಲ; ಇದು ನಮ್ಮ ಗ್ರಾಮೀಣ ಆರ್ಥಿಕತೆಗೆ ಚೈತನ್ಯ ನೀಡುವ, ರೈತರನ್ನು ಹಾಗೂ ಸಣ್ಣ ಉದ್ಯಮಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಒಂದು ಸುವರ್ಣಾವಕಾಶವಾಗಿದೆ. ಈ ಯೋಜನೆಯ ಮೂಲಕ ಲಾಭಗಳನ್ನು ಪಡೆದುಕೊಂಡು ಸ್ವಾಲಂಬಿ ಬದುಕು ರೂಪಿಸಿಕೊಳ್ಳಲು ಇದು ಒಂದು ಮಹತ್ವದ ಯೋಜನೆಯಾಗಿದೆ ಎಂದು ತಿಳಿಸಿದರು.
ಈ ಯೋಜನೆಯಲ್ಲಿ ಆಹಾರ ಸಂಸ್ಕರಣಾ ಉದ್ದಿಮೆಗಳು ಸಿರಿಧಾನ್ಯಗಳ ಮತ್ತು ಇತರೆ ಧಾನ್ಯಗಳ ಸಂಸ್ಕರಣೆಗಳಾದ ಬೆಲ್ಲ, ನಿಂಬೆ ಉತ್ಪನ್ನಗಳು, ಬೇಕರಿ ಉತ್ಪನ್ನಗಳು, ಕೋಲ್ಡ್ ಪ್ರೆಸ್ಡ್ ಆಯಿಲ್, ಮೆಣಸಿನ ಪುಡಿ ಘಟಕಗಳು, ಅನಾನಸ್ ಸಂಸ್ಕರಣಾ ಘಟಕಗಳು, ಮಸಾಲಾ ಉತ್ಪನ್ನಗಳ ಘಟಕಗಳು, ತೆಂಗಿನ ಉತ್ಪನ್ನಗಳು, ಕುಕ್ಕುಟ ಉತ್ಪನ್ನಗಳು, ಸಾಗರ ಉತ್ಪನ್ನಗಳ ಹಾಗೂ ವಿವಿಧ ಹಣ್ಣು ಮತ್ತು ತರಕಾರಿಗಳ ಉತ್ಪನ್ನಗಳು ಸೇರಿದಂತೆ ವಿವಿಧ ರೀತಿಯ ಆಹಾರ ಸಂಸ್ಕರಣಾ ಘಟಕಗಳನ್ನು ಆರಂಭಿಸಲು ಸರ್ಕಾರದಿಂದ ಸಹಾಯಧನದ ಮೂಲಕ ನೆರವು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಪಿಎಂಎಫ್‍ಎಂಇ ಯೋಜನೆಯಲ್ಲಿ ಪ್ರತಿ ಯೋಜನಾ ಘಟಕಕ್ಕೆ ಕೇಂದ್ರ ಸರ್ಕಾರವು ಶೇ.35 ರಷ್ಟು ಮತ್ತು ರಾಜ್ಯ ಸರ್ಕಾರವು ಶೇ. 15 ರಷ್ಟು ಸೇರಿ ಒಟ್ಟು ಶೇ. 50 ರಷ್ಟು ಸಹಾಯಧನವನ್ನು ಅಥವಾ ಗರಿಷ್ಠ ರೂ. 15 ಲಕ್ಷ ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯು 2020-21 ರಿಂದ 2024-25 (5 ವರ್ಷಗಳು) ರವರೆಗೆ ಜಾರಿಯಲ್ಲಿತ್ತು. ಈಗ ಪ್ರಸ್ತುತ ಮಾರ್ಚ್ 2026 ವರೆಗೆ ಯೋಜನೆಯ ಅವಧಿ ವಿಸ್ತರಿಸಲಾಗಿದೆ. ಇದರ ಸದುಪಯೋಗವನ್ನು ಪಲಾನುಭವಿಗಳು ಪಡೆದುಕೊಳ್ಳಬೇಕೆಂದು ಹೇಳಿದರು.
ಕೇಂದ್ರ ಸರ್ಕಾರದಿಂದ 10 ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ರಾಷ್ಟ್ರವ್ಯಾಪಿಯಾಗಿ ವಿವಿಧ ರಾಜ್ಯಗಳಿಗೆ ಕಳೆದ 5 ವರ್ಷಗಳಲ್ಲಿ ಒದಗಿಸಲಾಗಿದೆ. ಮತ್ತು ಕರ್ನಾಟಕ ರಾಜ್ಯಕ್ಕೆ ರೂ. 493.65 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಈಗಾಗಲೇ 2 ಲಕ್ಷ ಘಟಕಗಳು ಈ ಯೋಜನೆಯಲ್ಲಿ ಭಾಗಿಯಾಗಿವೆ ಎಂದು ಅವರು ತಿಳಿಸಿದರು.
ಧಾರವಾಡ ಜಿಲ್ಲೆಯಲ್ಲಿ ಯೋಜನೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ಬ್ಯಾಂಕ್ ಸಾಲಕ್ಕಾಗಿ 600 ಅರ್ಜಿಗಳು ಬಂದಿದ್ದು, ಜಿಲ್ಲಾ ಮಟ್ಟದ ಸಮಿತಿಯಲ್ಲಿ 592ನ್ನು ಪರಿಶೀಲನೆ ಮಾಡಲಾಗಿದೆ. 564 ಪ್ರಸ್ತಾವನೆಗಳನ್ನು ವಿವಿಧ ಬ್ಯಾಂಕುಗಳಿಗೆ ಕಳಿಸಿದ್ದು, 400 ಫಲಾನುಭವಿಗಳಿಗೆ ಸಾಲ ಮಂಜೂರಾಗಿದೆ. 53 ಅರ್ಜಿಗಳು ವಿವಿಧ ಬ್ಯಾಂಕುಗಳಲ್ಲಿ ಪರಿಶೀಲನೆ ಹಂತದಲ್ಲಿವೆ. ರೂ 30 ಕೋಟಿ ಯೋಜನಾ ವೆಚ್ಚದ ಆಹಾರ ಸಂಸ್ಕರಣಾ ಘಟಕಗಳಿಗೆ ಇದುವರೆಗೆ 7.5 ಕೋಟಿ ಸಹಾಯಧನವನ್ನು ಬಿಡುಗಡೆ ಮಾಡಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಸಿ.ಎನ್ ಶಿವಪ್ರಕಾಶ ಅವರು ಹೇಳಿದರು.
ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ ಕುರಿತು ಜಿಲ್ಲೆಯಲ್ಲಿ ಆಸಕ್ತರಿಗೆ ಮಾಹಿತಿ ನೀಡಿ, ಬ್ಯಾಂಕ್ ಲಿಂಕ್ ಮಾಡಿಕೊಡಲು 15 ಜನ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಲಾಗಿದೆ. ಇವರು ಆಸಕ್ತರಿಗೆ ಅಗತ್ಯ ಮಾಹಿತಿ, ದಾಖಲೆಗಳ ಸಂಗ್ರಹಕ್ಕೆ ಸಹಾಯ ಮತ್ತು ಬ್ಯಾಂಕ್ ಲಿಂಕ್ ಮಾಡಿ, ಸಾಲ ಸೌಲಭ್ಯ ಮತ್ತು ಸಹಾಯಧನ ಲಭಿಸುವಂತೆ ನೆರವಾಗುತ್ತಾರೆ. ಇವರ ನೆರವು ಆಸಕ್ತರು ಪಡೆಯಬಹುದೆಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್ ಶಿವಪ್ರಕಾಶ ಅವರು ಹೇಳಿದರು.
*ಜಿಲ್ಲಾ ಉಸ್ತುವಾರಿ ಸಚಿವರ ಸಂದೇಶ:* ಸಭೆಯ ಆರಂಭದಲ್ಲಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಕಳುಹಿಸಿದ್ದ ಸಂದೇಶವನ್ನು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಅವರು ಪ್ರಸ್ತಾಪಿಸಿ, ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆಯ (ಪಿ.ಎಂ.ಎಫ್.ಎಂ) ಯೋಜನೆಯು ಜನ ಕಲ್ಯಾಣದ ಕಾರ್ಯಕ್ರಮವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷೆಯ ಯೋಜನೆ ಆಗಿದೆ.
ಕಾರ್ಯಕ್ರಮವು ನಿರುದ್ಯೋಗ ನಿವಾರಣೆ ಜೊತೆಗೆ, ಸ್ಥಾನಿಕ ಅಥವಾ ಪ್ರಾದೇಶಿಕ ವಿಶೇಷತೆಗಳಿರುವ ಆಹಾರವನ್ನು ಜಗತ್ತಿಗೆ ಪರಿಚಯಿಸುವ ತನ್ಮೂಲಕ ರಾಜ್ಯದ ಆಹಾರ ಸಂಪ್ರದಾಯವನ್ನು ಎತ್ತಿ ಹಿಡಿಯುವ ಉತ್ತಮ ಕಾರ್ಯಕ್ರಮವಾಗಿದೆ. ಸ್ವಾವಲಂಬನೆ ಮತ್ತು ಆರ್ಥಿಕ ಸದೃಢತೆ ಸಾಧಿಸಲು ಪೂರಕವಾದ ಸರಕಾರದ ಈ ಯೋಜನೆಯನ್ನು ಉದ್ಯೋಗಾಕಾಂಕ್ಷಿಗಳು, ಉದ್ದಿಮೆ ಸ್ಥಾಪಿಸುವ ಮತ್ತು ಬಲಪಡಿಸುವ ಮತ್ತು ಉದ್ಯೋಗ ನೀಡುವ ಹಂಬಲವಿರುವ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ ಎಂದು ಅವರು ಓದಿ ಹೇಳಿದರು.
ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕ ಶಿವಕುಮಾರ ಎಚ್.ಕೆ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಯೋಜನೆಯ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ಬೆಂಗಳೂರ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ನಿರ್ದೇಶಕ ನಾರಾಯಣಸ್ವಾಮಿ, ಧಾರವಾಡ ಲೀಡ್ ಬ್ಯಾಂಕ್‍ನ ಮ್ಯಾನೇಜರ್ ಬಸವರಾಜ ಗಡದವರ, ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಮಯೂರ ಕಾಂಬಳೆ ಅವರು ಇದ್ದರು.
ಕಾರ್ಯಕ್ರಮದಲ್ಲಿ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಶ್ರೀಪಾದ.ವಿ.ಕುಲಕರ್ಣಿ, ರೇಷ್ಮೆ ಇಲಾಖೆಯ ಉಪನಿರ್ದೇಶಕ ಮಹದೇವ ಎಮ್., ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಡಾ. ಸದಾಶಿವ ಉಪ್ಪಾರ ಹಾಗೂ ಯೋಜನೆಯ ಫಲಾನುಭವಿಗಳು, ಆಸಕ್ತ ರೈತರು, ರೈತ ಗುಂಪುಗಳ ಪ್ರತಿನಿಧಿಗಳು, ಯುವ ಉದ್ಯಮಿದಾರರು, ಸಾರ್ವಜನಿಕರು ಭಾಗವಹಿಸಿದ್ದರು.
*ಪಿಎಂಎಫ್‍ಎಂಇ ಯೋಜನೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳು:* ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ ಕುರಿತು ಜಿಲ್ಲೆಯಲ್ಲಿ ಹೆಚ್ಚಿನ ಪ್ರಚಾರ ನೀಡಿ, ಆಸಕ್ತರಿಗೆ ನೆರವಾಗಲು ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳನ್ನಾಗಿ ವಿಟ್ಟಲ.ಬಿ.ಸೂರ್ಯವಂಶಿ (9880640615), ಬಸಪ್ಪ ಮುಧೋಳ (8217682195), ಬಂಡೇರಾವ್ ಪಟವಾರಿ (9448487357), ಪ್ರಿಯಾ ಕಿವಡದಾಸನ್ನವರ (9060202709), ಶಿಲ್ಪಾ ಕೊಪ್ಪದ (8088552040), ಗಿರೀಶ್ ಕುಮಾರ್ ಸಿ. ಬುಡರಕಟ್ಟಿಮಠ (9686762766), ಮೋಹನ್.ಬಿ.ಎಸ್. (8553756203), ಅನಿಲ್ ಕುಮಾರ ಮಾಂಜರೆ (6362123820), ಸುರೇಶ ಕಮ್ಮಾರ (7259412877), ರಾಜೇಶ ಅರ್ಜುನರಾವ್ ಶಿಂಧೆ (9620521058), ಸುರೇಶ ಎನ್. ಸಾವಳಗಿ (9663971865), ಗೋಪಾಲಕೃಷ್ಣ ನಾಯಕ್ (9448358676), ಸಂತೋಷ ಸವದತ್ತಿ (9620902750), ಚಂದ್ರಕಾಂತ ವಿ. ಮರಡಿ (7019970764), ನಾಗಲಿಂಗಯ್ಯ ಹಿರೇಮಠ (7406635606) ಅವರನ್ನು ನೇಮಿಸಲಾಗಿದೆ.