ವಡೋದರಾ(ಗುಜರಾತ್): ಇಂದು ಬೆಳಗ್ಗೆ ಗುಜರಾತ್ನ ವಡೋದರಾ ಜಿಲ್ಲೆಯಲ್ಲಿ 40 ವರ್ಷಗಳಷ್ಟು ಹಳೆಯದಾದ ಸೇತುವೆಯ ಒಂದು ಭಾಗ ಕುಸಿದು ಹಲವಾರು ವಾಹನಗಳು ನದಿಗೆ ಬಿದ್ದಿವೆ. ಈ ಘಟನೆಯಲ್ಲಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ.
ವಾಹನಗಳು ಸಂಚರಿಸುತ್ತಿದ್ದಾಗಲೇ ದಿಢೀರ್ ಎಂದು ಕುಸಿದ ಸೇತುವೆ: ಬೆಳಗ್ಗೆ 7:30ರ ಸುಮಾರಿಗೆ ‘ಗಂಭೀರಾ ಸೇತುವೆ’ಯ ಸ್ಲ್ಯಾಬ್ಬ್ ಕುಸಿದಿದೆ. ಪರಿಣಾಮ ಈ ಬ್ರಿಡ್ಜ್ ಮೇಲೆ ಸಂಚರಿಸುತ್ತಿದ್ದ ಎರಡು ಟ್ರಕ್, ವ್ಯಾನ್‌ಗಳು ಸೇರಿದಂತೆ ಐದರಿಂದ ಆರು ವಾಹನಗಳು ಮಹಿಸಾಗರ್ ನದಿಗೆ ಬಿದ್ದಿವೆ. ಘಟನೆಯಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.
ಮುಕ್ಕಾಲು ಕಿಮೀಗಿಂತಲೂ ಹೆಚ್ಚು ಉದ್ದದ ಸೇತುವೆ: 1986ರಲ್ಲಿ ನಿರ್ಮಿಸಲಾದ ಗಂಭೀರಾ ಸೇತುವೆಯು ಮಧ್ಯ ಗುಜರಾತ್ ಮತ್ತು ಸೌರಾಷ್ಟ್ರ ಪ್ರದೇಶಗಳನ್ನು ಸಂಪರ್ಕಿಸುತ್ತದೆ. 832 ಮೀಟರ್ ಉದ್ದ ಮತ್ತು 7.5 ಮೀಟರ್ ಅಗಲವಿರುವ ಈ ಸೇತುವೆಗೆ 23 ಪಿಲ್ಲರ್ಗಳಿವೆ. ಒಂದು ತುದಿಯಲ್ಲಿ ವಡೋದರಾ ಜಿಲ್ಲೆ ಮತ್ತು ಇನ್ನೊಂದು ತುದಿಯಲ್ಲಿ ಆನಂದ್ ಜಿಲ್ಲೆಗಳಿವೆ.