ಬಳ್ಳಾರಿ ಜುಲೈ 07 : ನಮ್ಮ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಪೇದೆ ರಮೇಶ್ ಮತ್ತು ಅವರ ಇತರೆ ಮೂರು ಜನ ಗೆಳೆಯರೊಂದಿಗೆ ಸುಮಾರು 5300 ಕಿಲೋಮೀಟರ್ಗಳ ಬೈಕ್ ರೈಡಿಂಗ್ ನಿಂದ ಇಡೀ ದೇಶಾದ್ಯಂತ ಸಂಚರಿಸಿ ಹೆಲ್ಮೆಟ್ ಜಾಗೃತಿ ಅಭಿಯಾನವನ್ನು ಮೂಡಿಸಿದ ಕಾರ್ಯ ಶ್ಲಾಘನೀಯ ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಶೋಭಾರಾಣಿ ವಿ ಜೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಳ್ಳಾರಿಯಿಂದ ಜೂನ್ 17ಕ್ಕೆ ತಮ್ಮ ಸ್ನೇಹಿತರಾದ ವಿಕ್ರಾಂತ್ ರೆಡ್ಡಿ ಸತೀಶ್ ಬೊಮ್ಮರೆಡ್ಡಿ ಆಡಿಟರ್ ರಘು ಇವರುಗಳೊಂದಿಗೆ ಬಿಟ್ಟ ಡೆಲ್ಲಿಯ ಪ್ರವೀಣ್ ರಾಮಕೃಷ್ಣ ಅವರನ್ನು ಒಳಗೊಂಡು ಶ್ರೀನಗರ ಜಮ್ಮು ಕಾಶ್ಮೀರ, ಲೇ ಲಡಾಕ್, ಕುಲು ಮನಾಲಿ, ಡೆಲ್ಲಿ ಉತ್ತರ ಪ್ರದೇಶ ಮಧ್ಯಪ್ರದೇಶ ಪಂಜಾಬ್ ಸೇರಿದಂತೆ ಸುಮಾರು 12 ರಾಜ್ಯಗಳ ಮೂಲಕ ತಮ್ಮ ಸುದೀರ್ಘ ಪಯಣವನ್ನು ನಡೆಸಿದ ಅವರು ಎಲ್ಲ ರಾಜ್ಯಗಳಲ್ಲಿ ಹೆಲ್ಮೆಟ್ ಕುರಿತು ಜಾಗೃತಿ ಅಭಿಯಾನವನ್ನು ನಡೆಸಿ, ಹೆಲ್ಮೆಟ್ ನಿಂದ ತಮ್ಮ ಮತ್ತು ತಮ್ಮ ಕುಟುಂಬಗಳನ್ನು ರಕ್ಷಿಸಿಕೊಳ್ಳಿ ಹೆಲ್ಮೆಟ್ ಕೇವಲ ಪೋಲೀಸರ ಭಯದಿಂದ ಹಾಕಿಕೊಳ್ಳಬೇಡಿ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಕೊಳ್ಳಲು ತಪ್ಪದೇ ಹೆಲ್ಮೆಟನ್ನು ಹಾಕಿಕೊಳ್ಳಿ ಎಂದು ನೇರದ ಸಾರ್ವಜನಿಕರಿಗೆ ಹೆಲ್ಮೆಟ್ ಬಗ್ಗೆ ತಿಳಿಸಿ ಜಾಗೃತಿ ಮೂಡಿಸುವಂತಹ ಕೆಲಸ ಮಾಡಿದ್ದಾರೆ.
ತಮ್ಮ 5,300 ಕಿ.ಮೀಗಳ ಸುದೀರ್ಘ ಪಯಣವನ್ನು ಅಂತ್ಯಗೊಳಿಸಿ ಬಳ್ಳಾರಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಗೆ ನೇರವಾಗಿ ಬಂದು ಅಧಿಕ್ಷಕರಾದ ಶೋಭರಾಣಿ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ರಮೇಶ್ ಅವರನ್ನು ಬರಮಾಡಿಕೊಂಡ ಅಧಿಕ್ಷಕರು ಅವರನ್ನು ಸನ್ಮಾನಿಸಿ ಮಾತನಾಡಿ, ನಮ್ಮ ಬಳ್ಳಾರಿ ಜಿಲ್ಲೆಯಲ್ಲಿ ಇಲಾಖೆಯಿಂದ ಹೆಲ್ಮೆಟ್ ಜಾಗೃತಿ ಅಭಿಯಾನವನ್ನು ಕಳೆದ ಒಂದು ತಿಂಗಳಿನಿಂದ ನಡೆಸಲಾಗುತ್ತಿದೆ, ಇದರ ಪ್ರೇರಣೆಯಿಂದಾಗಿ ರಮೇಶ ಅವರು ಇಡೀ ದೇಶಾದ್ಯಂತ ಹೆಲ್ಮೆಟ್ ಜಾಗೃತಿ ಅಭಿಯಾನವನ್ನು ಕೊಂಡೊಯ್ಯಬೇಕೆಂದು ನಮ್ಮಿಂದ ಅನುಮತಿಯನ್ನು ಪಡೆದುಕೊಂಡು ದೇಶಾದ್ಯಂತ ಸುಮಾರು 5300 ಕಿಲೋಮೀಟರುಗಳನ್ನು ತಿರುಗಿ ಹೆಲ್ಮೆಟ್ ಜಾಗೃತಿ ಮೂಡಿಸಿದ್ದಾರೆ ಅವರ ಈ ಸಾರ್ವಜನಿಕರ ಕಳಕಳಿ ಮೆಚ್ಚುವಂಥದ್ದು ಎಂದು ಅವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್, ನನಗೆ ಬೈಕ್ ರೈಡಿಂಗ್ ಹವ್ಯಾಸ ಮೊದಲಿಂದಲೂ ಇತ್ತು ಅದನ್ನು ಅರ್ಥಪೂರ್ಣವಾಗಿ ನಡೆಸಬೇಕೆಂಬ ಉದ್ದೇಶದಿಂದ ನಮ್ಮ ಎಸ್ಪಿ ಅವರು ಹಮ್ಮಿಕೊಂಡ ಹೆಲ್ಮೆಟ್ ಜಾಗೃತಿ ಅಭಿಯಾನವನ್ನು ನನ್ನ ಬೈಕ್ ರೈಡಿಂಗ್ ಜೊತೆ ಕೊಂಡೊಯ್ದು ಇಡೀ ನನ್ನ ಪ್ರಯಾಣದುದ್ದಕ್ಕೂ ಹೆಲ್ಮೆಟ್ ಕುರಿತು ಜಾಗೃತಿ ಮೂಡಿಸಲು ಪ್ರಯತ್ನಪಟ್ಟಿದ್ದೇನೆ, ಬೈಕ್ ರೇಡ್ಡಿಂಗ್ ಅಭ್ಯಾಸ ಇರುವ ಎಲ್ಲರೂ ಕೂಡ ಹೀಗೆ ಒಂದು ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಬೈಕ್ ರೈಡಿಂಗ್ ಮಾಡಿದ್ದಲ್ಲಿ ತಮಗೂ ಮತ್ತು ಸಮಾಜಕ್ಕೂ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಜೆ ವಿ ಮಂಜುನಾಥ್ ವಿರುಪಾಕ್ಷಯ್ಯ, ರಮೇಶ್ ಧರ್ಮ ಪತ್ನಿ ಸುಮಾ ರಮೇಶ್, ಸುನಿಲ್ ಕುಮಾರ್, ಚಂದ್ರಶೇಖರ್ ಡಾ. ನಾಗರಾಜ್, ಶಬ್ಬೀರ್ ಗೋವಿಂದರಾಜ್ ಮಾಜಿ ಸೈನಿಕ ಈಶ್ವರ ರೆಡ್ಡಿ ಮತ್ತು ಇತರರು ಸೇರಿದಂತೆ ಹಲವಾರು ಇದ್ದರು.