ಕನ್ನಡ ಭಾಷೆ, ಸಾಹಿತ್ಯ, ಭೂಮಿ ಅಥವಾ ಸಂಸ್ಕೃತಿಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ಹಿರಿಯ ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಅವರಿಗೆ ಬೆಂಗಳೂರು ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಕನ್ನಡ ಸಾಹಿತ್ಯ ಪರಿಷತ್ (ಕೆಎಸ್ಪಿ) ಅಧ್ಯಕ್ಷ ಮಹೇಶ್ ಜೋಶಿ ಅವರ ಸಿವಿಲ್ ಮೊಕದ್ದಮೆಯ ನಂತರ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು ಶುಕ್ರವಾರ ಈ ತಡೆಯಾಜ್ಞೆ ನೀಡಿದ್ದಾರೆ.
ಮುಂದಿನ ವಿಚಾರಣೆ ಆಗಸ್ಟ್ 30ಕ್ಕೆ: “ಕನ್ನಡಕ್ಕಿಂತ ಯಾವುದೇ ಭಾಷೆಯ ಶ್ರೇಷ್ಠತೆ ಪ್ರತಿಪಾದಿಸುವಂತಹ ಯಾವುದೇ ಹೇಳಿಕೆ ಅಥವಾ ಟೀಕೆಗಳನ್ನು ಪೋಸ್ಟ್ ಮಾಡುವುದು, ಹೇಳಿಕೆ ನೀಡುವುದು, ಬರೆಯುವುದು ಅಥವಾ ಪ್ರಕಟಿಸುವುದನ್ನು” ಅಥವಾ ಕನ್ನಡ ಭಾಷೆ, ಸಾಹಿತ್ಯ, ಭೂಮಿ ಮತ್ತು ಸಂಸ್ಕೃತಿಯ ವಿರುದ್ಧ ಯಾವುದೇ ಆಕ್ಷೇಪಾರ್ಹ ಕಾಮೆಂಟ್ಗಳನ್ನು ನೀಡುವುದನ್ನು ನ್ಯಾಯಾಲಯದ ಆದೇಶ ನಿರ್ಬಂಧಿಸಿದೆ. ನ್ಯಾಯಾಧೀಶರು ಕಮಲ್ ಹಾಸನ್ ಅವರಿಗೆ ಸಮನ್ಸ್ ಜಾರಿ ಮಾಡಿ, ಮುಂದಿನ ವಿಚಾರಣೆಯನ್ನು ಆಗಸ್ಟ್ 30ಕ್ಕೆ ನಿಗದಿಪಡಿಸಿದ್ದಾರೆ.
‘ಕನ್ನಡ ತಮಿಳಿನಿಂದ ಹುಟ್ಟಿದೆ’ ಹೇಳಿಕೆ ವಿವಾದ: ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ‘ಥಗ್ ಲೈಫ್’ ಚಿತ್ರದ ಪ್ರಚಾರ ಕಾರ್ಯಕ್ರಮದ ಸಂದರ್ಭದಲ್ಲಿ ನಾಯಕ ನಟ ಕಮಲ್ ಹಾಸನ್ ‘ಕನ್ನಡ ತಮಿಳಿನಿಂದ ಹುಟ್ಟಿದೆ’ ಎಂಬ ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡರು. ಸಿನಿಮಾ ಬಿಡುಗಡೆಗೂ ಮುನ್ನ ಭುಗಿಲೆದ್ದ ವಿವಾದ ನ್ಯಾಯಾಲಯದಲ್ಲಿದ್ದು, ಸದ್ಯ ಈ ಕಾನೂನು ಕ್ರಮ ಜರುಗಿಸಲಾಗಿದೆ.
ಕ್ಷಮೆಯಾಚಿಸದ ನಟ: ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕಮಲ್ ಹಾಸನ್ “ಕನ್ನಡ ತಮಿಳಿನಿಂದ ಹುಟ್ಟಿದೆ” ಎಂದು ಹೇಳಿದ ವಿಡಿಯೋ ಆನ್ಲೈನ್ನಲ್ಲಿ ಹೆಚ್ಚು ವೈರಲ್ ಆಗಿ ಮಿಶ್ರ ಪ್ರತಿಕ್ರಿಯೆಗಳನ್ನು ಸ್ವೀಕರಿತ್ತು. ಹಲವಾರು ಕನ್ನಡ ಸಾಂಸ್ಕೃತಿಕ ಮತ್ತು ಭಾಷಾ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಕನ್ನಡ ಪರ ಗುಂಪುಗಳು ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದವು. ಜನಪ್ರಿಯ ನಟನ ಹೇಳಿಕೆ ಅಗೌರವದಿಂದ ಕೂಡಿವೆ ಎಂದು ಆರೋಪಿಸಿ, ಪ್ರತಿಭಟನೆಗಳ ಮೂಲಕ ಆಕ್ರೋಶ ಹೊರಹಾಕಿದ್ದರು.