ಹೂಸ್ಟನ್, ಅಮೆರಿಕ: ಮಧ್ಯ ಟೆಕ್ಸಾಸ್‌ನಲ್ಲಿ ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದ ಉಂಟಾದ ಪ್ರಮುಖ ಹಠಾತ್ ಪ್ರವಾಹದಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ. ಗ್ವಾಡಾಲುಪೆ ನದಿಯ ಉದ್ದಕ್ಕೂ ಇರುವ ಬೇಸಿಗೆ ಶಿಬಿರಗಳಿಂದ ಹಲವಾರು ಮಕ್ಕಳು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆರ್ ಕೌಂಟಿ ನ್ಯಾಯಾಧೀಶ ರಾಬ್ ಕೆಲ್ಲಿ ಸಾವಿನ ಸಂಖ್ಯೆಗಳನ್ನು ದೃಢಪಡಿಸಿದ್ದಾರೆ. ಮೃತಪಟ್ಟವರ ಗುರುತುಗಳನ್ನು ಬಹಿರಂಗ ಪಡಿಸಿಲ್ಲ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಕೆರ್ ಕೌಂಟಿ ಶೆರಿಫ್ ಕಚೇರಿಯ ಪ್ರಕಾರ ಕುಟುಂಬಗಳಿಗೆ ಮಾಹಿತಿ ನೀಡುವವರೆಗೂ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಲಾಗುವುದಿಲ್ಲ ಎಂದು ತಿಳಿದು ಬಂದಿದೆ.
ಅವರೆಲ್ಲರನ್ನೂ ಲೆಕ್ಕಹಾಕಲಾಗಿದೆ ಎಂದು ನಾವು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಕೆಲವರು ಕಾಣೆಯಾಗಿದ್ದಾರೆ ಎಂಬ ವಿಚಾರ ಮಾತ್ರ ನಮಗೆ ಗೊತ್ತಾಗಿದೆ. ಕೆಲ್ಲಿ ಶುಕ್ರವಾರದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ನದಿಯ ಉದ್ದಕ್ಕೂ ಹಲವಾರು ಬೇಸಿಗೆ ಶಿಬಿರಗಳಿವೆ. ಇದರಲ್ಲಿ ಕ್ಯಾಂಪ್ ಮಿಸ್ಟಿಕ್ ಸೇರಿದಂತೆ ಹುಡುಗಿಯರ ಶಿಬಿರಗಳಿವೆ ಎಂಬುದು ಗೊತ್ತಾಗಿದ್ದು, ಈ ಬಗ್ಗೆ ಮಕ್ಕಳ ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.