ಸಿರುಗುಪ್ಪ: ತಾಳೂರು ಗ್ರಾಮದಲ್ಲಿ ವಸತಿ ಗೃಹ ನಿರ್ಮಾಣಕ್ಕೆ ಭೂಮಿಪೂಜೆ

Ravi Talawar
ಸಿರುಗುಪ್ಪ: ತಾಳೂರು ಗ್ರಾಮದಲ್ಲಿ ವಸತಿ ಗೃಹ ನಿರ್ಮಾಣಕ್ಕೆ ಭೂಮಿಪೂಜೆ
WhatsApp Group Join Now
Telegram Group Join Now

ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ಧ
ಬಳ್ಳಾರಿ,ಜು.04: ಗ್ರಾಮೀಣ ಭಾಗದ ಜನತೆಯ ವೈಯಕ್ತಿಕ ಆರೋಗ್ಯಕ್ಕಾಗಿ ನಗರಗಳಿಗೆ ಆಗಮಿಸಿ ಹಣ ವೆಚ್ಚ ಮಾಡುವುದನ್ನು ತಪ್ಪಿಸಲು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಪರಿಕರಗಳ ಒದಗಿಸುವಿಕೆ, ಸಿಬ್ಬಂದಿಗಳಿಗೆ ವಸತಿ ಗೃಹ ನಿರ್ಮಾಣ ಮಾಡುವ ಮೂಲಕ ಜನತೆಗೆ ಸ್ಥಳೀಯ ಆಸ್ಪತ್ರೆಗಳಲ್ಲಿಯೇ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸಲು ಸರಕಾರ ಬದ್ಧವಾಗಿದೆ ಎಂದು ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ.ನಾಗರಾಜ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 50 ಲಕ್ಷ ರೂ.ಗಳ ಅನುದಾನದಡಿ ಸಿರುಗುಪ್ಪ ತಾಲೂಕಿನ ತಾಳೂರು ಗ್ರಾಮದಲ್ಲಿ ಶುಶ್ರೂಷಣಾಧಿಕಾರಿ ಹಾಗೂ ಡಿ-ಗ್ರೂಪ್ ಸಿಬ್ಬಂದಿಯವರಿಗೆ ವಸತಿಗೃಹಗಳ ನಿರ್ಮಾಣಕ್ಕೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಜನರ ಆರೋಗ್ಯದ ಕಾಳಜಿ ವಹಿಸುವ ಉನ್ನತ ಮಹಾತ್ವಾಕಾಂಕ್ಷಿಯನ್ನು ರಾಜ್ಯ ಸರಕಾರ ಹೊಂದಿದ್ದು, ಈಗಾಗಲೇ ಸಿರುಗುಪ್ಪ ಪಟ್ಟಣಕ್ಕೆ 150 ಹಾಸಿಗೆಗಳ ಹೈಟೆಕ್ ಆಸ್ಪತ್ರೆಯ ನಿರ್ಮಾಣಕ್ಕೆ ಸರಕಾರದ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಈಗಾಗಲೇ ಜಿಲ್ಲೆಯ ಕುರವಳ್ಳಿ ಹಾಗೂ ರಾವಿಹಾಳ ಗ್ರಾಮಗಳಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗಿದ್ದು, ವೈದ್ಯರು ಹಾಗೂ ಸಿಬ್ಬಂದಿಯವರು ಕೇಂದ್ರ ಸ್ಥಾನದಲ್ಲಿಯೇ ಲಭ್ಯವಾಗಲು ಸಹಾಯಕವಾಗಿ ವಸತಿಗೃಹಗಳ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶಬಾಬು, ಸಿರುಗುಪ್ಪ ತಾಲೂಕಿನ ಆರೋಗ್ಯ ಕೇಂದ್ರಗಳಲ್ಲಿ ರಾಜ್ಯ ಸರಕಾರದಿಂದ ರಕ್ತಪರೀಕ್ಷೆ ಮಾಡಲು ಸೆಲ್ ಕೌಂಟರ್‌ಗಳನ್ನು ಹಾಗೂ ಹೃದಯ ಸಮಸ್ಯೆಗಳ ಆರಂಭಿಕ ತೊಂದರೆಗಳನ್ನು ಗುರುತಿಸಲು ಇಸಿಜಿ ಯಂತ್ರಗÀಳನ್ನು ಕ್ಷೇತ್ರದ ಶಾಸಕರ ಮುತವರ್ಜಿಯಿಂದ ವ್ಯವಸ್ಥೆ ಮಾಡಲಾಗಿದ್ದು, ಅಗತ್ಯವಿರುವವರು ಹಣ ವೆಚ್ಚ ಮಾಡದೇ ಸ್ಥಳೀಯವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ತಾಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಬಲ್ಲೂರಪ್ಪ, ಆಡಳಿತ ವೈದ್ಯಾಧಿಕಾರಿ ಡಾ.ಸುನೀಲ್, ಗ್ರಾಮ ಪಂಚಾಯತ್ ಸದಸ್ಯರಾದ ಪುರುಷೋತ್ತಮರೆಡ್ಡಿ, ರಾಮಾಂಜನಿ, ಫಕೀರಪ್ಪ, ದೇವರೆಡ್ಡಿ, ತುರು ಮುಂದಪ್ಪ, ಊಳೂರು ಈರಣ್ಣ ನೇಣಿಕಪ್ಪ, ದಿಬ್ಬಲಿ ಗಾದಿಲಿಂಗಪ್ಪ, ಅಂಬ್ರೇಶ, ಮಾಳಮ್ಮ, ಅಭಿಯಂತರರಾದ ಚಂದನಗೌಡ, ರಾಜೇಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೆಂಕಪ್ಪ ಸೇರಿದಂತೆ ಗ್ರಾಮಸ್ಥರು, ಸಿಬ್ಬಂದಿಯವರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article