ಬಳ್ಳಾರಿ,ಜು.04: ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವ ಕೆಲಸ ನಮ್ಮದಾಗಬೇಕು ಎಂದು ಹಚ್ಚೋಳ್ಳಿ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಎಚ್.ಕೆ.ಸಿದ್ದಯ್ಯ ಸ್ವಾಮಿ ಅವರು ಹೇಳಿದರು.
ಹಂದ್ಯಾಳು ಮಹಾದೇವ ತಾತ ಕಲಾ ಸಂಘ ವತಿಯಿಂದ ಸಿರುಗುಪ್ಪ ತಾಲೂಕಿನ ಕುಡುದರಹಾಳ ಗ್ರಾಮದ ತಾಯಮ್ಮ ದೇವಿ ಪುಣ್ಯ ಆಶ್ರಮದ ಎಲೆವಾಳು ಸಿದ್ದಯ್ಯ ಸ್ವಾಮಿ ಬಯಲು ರಂಗಮಂದಿರದಲ್ಲಿ ಗುರುವಾರ ನಡೆದ “ನಾಟಕ ಹಬ್ಬ 2025” ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಡಾಕ್ಟರ್, ಇಂಜಿನಿಯರ್ ಆಗಬೇಕೆನ್ನುವ ಅನೇಕರು ಕನಸು ಕಾಣುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದ ಯುವಕರಲ್ಲಿ ಕಲೆ ಸಂಸ್ಕೃತಿ ಉಳಿಸುವಲ್ಲಿ ಮಹಾದೇವ ತಾತ ಕಲಾ ಸಂಘವು ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಮಹಾದೇವ ತಾತಾ ಕಲಾ ಸಂಘದ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಬಂಧಗಳು ಜೀವನದ ಅವಿಭಾಜ್ಯ ಅಂಗವಾಗಿದ್ದು, ಮಾನಸಿಕ, ಭಾವನಾತ್ಮಕ ಯೋಗಕ್ಷೇಮಕ್ಕೆ ಮತ್ತು ಬದುಕುಳಿಯುವಿಕೆಗೆ ಸಂಬಂಧಗಳು ಬಹಳ ಮುಖ್ಯ ಎಂದು ಹೇಳಿದರು.
ಕುಡುದರಹಾಳ್ ತಾಯಮ್ಮ ದೇವಿ ಪುಣ್ಯ ಆಶ್ರಮದ ಪೀಠಾಧ್ಯಕ್ಷ ಡಾ.ಶಿವಕುಮಾರ್ ತಾತ ಅವರು ದಿವ್ಯಸಾನಿಧ್ಯ ವಹಿಸಿ ಮಾತನಾಡಿ ಸಂಬಂಧಗಳು ನಮ್ಮ ಸ್ವಯಂ ಅರಿವು ಮತ್ತು ವ್ಯಕ್ತಿತ್ವದ ಬೆಳವಣಿಗೆಗೆ ಸಹಾಯ ಮಾಡುತ್ತವೆ ಎಂದರು.
ಕಾಯಕ್ರಮದಲ್ಲಿ ಕುಮಾರ ಪ್ರಸಾದ್ ಸಂಗೀತ ಗಾಯನ ಪ್ರಸ್ತುತಪಡಿಸಿದರು. ಬಳಿಕ ಸಿರಿಗೇರಿ ಧಾತ್ರಿ ರಂಗ ಸಂಸ್ಥೆಯ ಕಲಾವಿದರು “ಸಂಬಂಧ” ಎಂಬ ನಾಟಕವನ್ನು ಪ್ರದರ್ಶಿಸಿದರು.
ಈ ವೇಳೆ ಕುಡದರಹಾಳು ಗ್ರಾಮದ ಗುತ್ತಿಗೆದಾರರಾದ ಬಿ.ವೆಂಕಟೇಶ, ಮುಖಂಡರಾದ ಕೆ.ಪಿ.ಖಾಸಿಂ ಸಾಬ್, ಹಚ್ಚೋಳ್ಳಿಯ ಜ್ಞಾನರೆಡ್ಡಿ, ಹಚ್ಚೋಳ್ಳಿ ಗ್ರಾಪಂ ಮಾಜಿ ಸದಸ್ಯ ಪಾಲಕ್ಷಿ ಗೌಡ, ಹಚ್ಚೊಳ್ಳಿಯ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಚ್.ಎಸ್.ಬುಷಪ್ಪ ಸಹುಕಾರ, ಹೆಚ್.ಕೆ.ನಾಗರಾಜ, ಪಿ.ಭಾಷಾ, ಹುಸೇನಪ್ಪ, ಮುದುಕಪ್ಪ, ಬೀರಲಿಂಗ ಸೇರಿದಂತೆ ಮುಂತಾದ ಹಿರಿಯರು ಉಪಸ್ಥಿತರಿದ್ದರು.
ಅಂಬರೀಶ್ ಹಚ್ಚೋಳ್ಳಿ ಸ್ವಾಗತಿಸಿದರು. ಜಿ.ಲಿಂಗಪ್ಪ ವಂದಿಸಿದರು