ಬೀದರ್: ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ನೈತಿಕ ಸ್ಥೈರ್ಯ ಕುಗ್ಗಬೇಕು, ಮಹಿಳೆಯರು ಯಾರೂ ಮುಂದೆ ಬರಬಾರದು ಎಂಬುದು ಬಿಜೆಪಿಗರ ಮನಸ್ಥಿತಿ. ಬಿಜೆಪಿಯವರು ತತ್ವ ಸಿದ್ದಾಂತ ಅಂತ ಹೇಳುತ್ತಾರೆ. ಆದರೆ ಈ ರೀತಿ ಮನುಸ್ಮೃತಿಯನ್ನು ಎಲ್ಲಾ ಕಡೆ ಬಿತ್ತನೆ ಮಾಡಲು ಹೊರಟ್ಟಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ವಾಗ್ದಾಳಿ ನಡೆಸಿದರು.
ಬೀದರ್ ನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮಹಿಳೆಯರನ್ನು ಅಪಮಾನ ಮಾಡುವುದು ಬಿಜೆಪಿಗರಿಗೆ ಚಾಳಿಯಾಗಿ ಬಿಟ್ಟಿದೆ. ರವಿ ಕುಮಾರ್ ಹೇಳಿಕೆಯಿಂದ ಬಿಜೆಪಿಯವರ ಎಲ್ಲರ ಮನಸ್ಥಿತಿ ಒಂದೇ ರೀತಿ ಇದೆ ಎಂಬಂತಾಗಿದೆ ಎಂದರು.
ಬಿಜೆಪಿಗರು ಪದೆ ಪದೇ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ. ಇದು ಅವರ ಹಾಗೂ ಆ ಪಕ್ಷದ ಮನಸ್ಥಿತಿಯನ್ನು ತೋರುತ್ತದೆ ಎಂದು ಆಕ್ರೋಶ ಹೊರ ಹಾಕಿದರು.
ಕೆಟ್ಟ ಬಾಯಿ, ಹೊಲಸು ಬಾಯಿ ಏನು ಮಾತಾಡಿದರೂ ಜನ ಸಹಿಸುತ್ತಾರೆ, ಕರ್ನಾಟಕ ರಾಜ್ಯದ ಜನ ಅವರನ್ನ ಬದುಕಿಸುತ್ತಾರೆ ಎಂಬ ಭಾವನೆ ಅವರಿಗೆ ಬಂದು ಬಿಟ್ಟಿದೆ. ಇದು ಅತ್ಯಂತ ಖಂಡನೀಯ, ಹೆಣ್ಣು ಮಕ್ಕಳನ್ನ ಅವಮಾನ ಮಾಡಿದರೆ ಖಂಡಿಸುವುದು ನಮ್ಮ ಸಮಾಜದ ಧರ್ಮ ಎಂದರು.
* *ನಾನು ಪಕ್ಷದ ಶಿಸ್ತಿನ ಸಿಪಾಯಿ*
ರಾಜ್ಯದಲ್ಲಿ ಸೆಪ್ಟೆಂಬರ್ ನಲ್ಲಿ ಕ್ರಾಂತಿಯಾಗಲಿದೆ ಎಂಬ ವಿಚಾರ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ನನ್ನ ಕಡೆಯಿಂದ ಯಾವುದೇ ಉತ್ತರ ನಿಮಗೆ ಸಿಗುವುದಿಲ್ಲ. ನಾನು ಪಕ್ಷದ ಒಬ್ಬ ಶಿಸ್ತಿನ ಸಿಪಾಯಿ, ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ದ ಎಂದರು.