ಧಾರವಾಡ: ‘ಸರ್ಕಾರದ ವಿವಿಧ ಇಲಾಖೆಗಳ ಮೂಲಕ ನಡೆಸಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಉತ್ತರ ಕರ್ನಾಟಕದ ಗುತ್ತಿಗೆದಾರರ ಬಾಕಿ ಇರುವ ₹20 ಸಾವಿರ ಕೋಟಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಉತ್ತರ ಕರ್ನಾಟಕ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಸ ಪಾಟೀಲ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಾಕಿ ಬಿಲ್ ಪಾವತಿ ಮಾಡದ್ದರಿಂದ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬ್ಯಾಂಕಿನ ಸಾಲದ ಬಡ್ಡಿಯನ್ನು ತುಂಬಲಾಗದ್ದಕ್ಕೆ ಯಂತ್ರೋಪಕರಣಗಳನ್ನು ಮತ್ತು ಆಸ್ತಿಯನ್ನು ಬ್ಯಾಂಕ್ ಅಧಿಕಾರಿಗಳು ಮುಟ್ಟಿಗೋಲು ಹಾಕಿಕೊಳ್ಳುತ್ತಿದ್ದಾರೆ. ಅವಮಾನ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಕೂಡಲೇ ಬಾಕಿ ಬಿಲ್ ಪಾವತಿಗೆ ಸರ್ಕಾರ ಕ್ರಮವಹಿಸಬೇಕು’ ಎಂದು ಒತ್ತಾಯಿಸಿದರು.
‘ಲೋಕೋಪಯೋಗಿ ಇಲಾಖೆಯ ಸಮಾರು ₹4 ಸಾವಿರ ಕೋಟಿ, ಬೃಹತ್ ನೀರಾವರಿ ₹5 ಸಾವಿರ ಕೋಟಿ, ಸಣ್ಣ ನೀರಾವರಿ ₹2 ಸಾವಿರ ಕೋಟಿ ಹಾಗೂ ವಿವಿಧ ಇಲಾಖೆಗಳಲ್ಲಿ ₹6 ಸಾವಿರ ಕೋಟಿ ಬಾಕಿ ಇದೆ. ಬಿಲ್ ಪಾವತಿಸುವರೆಗೂ ಹೊಸ ಟೆಂಡರ್ ಕರೆಯಬಾರದು’ಎಂದು ಆಗ್ರಹಿಸಿದರು.
‘ಸರ್ಕಾರಿ ಇಲಾಖೆಗಳು ರಾಜಧನವನ್ನು ಆಯಾ ಇಲಾಖೆಯವರೇ ಗುತ್ತಿಗೆದಾರರ ಬಿಲ್ಲಿನಲ್ಲಿ ಕಡಿತಗೊಳಿಸಿ ಸರ್ಕಾರಕ್ಕೆ ಜಮಾ ಮಾಡಬೇಕು. ಸರ್ಕಾರಿ ಗುತ್ತಿಗೆದಾರರಿಗೆ ಎಂ.ಡಿ.ಪಿ ಯಿಂದ ವಿನಾಯಿತಿ ನೀಡಬೇಕು. ಧಾರವಾಡ ಹಾಗೂ ಬಾಗಲಕೋಟೆಯಲ್ಲಿ ಸರ್ಕಾರಿ ಗುತ್ತಿಗೆದಾರರ ವಾಹನಗಳನ್ನು ಪೊಲೀಸರು ತಡೆದು ಲಂಚ ಕೇಳುತ್ತಿದ್ದಾರೆ ಇದನ್ನು ನಿಲ್ಲಿಸಲು ಕ್ರಮವಹಿಸಬೇಕು’ ಎಂದರು.
‘ಗುತ್ತಿಗೆದಾರರು ಟೆಂಡರ್‍ಗಳಲ್ಲಿ ಸರ್ಕಾರ ನಿಗದಿಪಡಿಸಿದ ಎಸ್‍ಆರ್ ದರಕ್ಕಿಂತ ಶೇ 5ಕ್ಕಿಂತ ಹೆಚ್ಚಿನ ದರಗಳನ್ನು ನಮೂದಿಸಿದಲ್ಲಿ ಅದನ್ನು ಸರ್ಕಾರಕ್ಕೆ ಕಳುಹಿಸುವ ನಿಯಮವಿದೆ. ಅದಕ್ಕೆ ಮುಖ್ಯ ಎಂಜಿನಿಯರ್ ಅನುಮೋದನೆ ನೀಡುವ ಅಧಿಕಾರ ನೀಡಬೇಕು.
ಕೆಲವು ಇಲಾಖೆಗಳಲ್ಲಿ ಹಲವಾರು ವರ್ಷಗಳಿಂದ ಅಧಿಕಾರಿಗಳು ಒಂದೇ ಕಡೆ ಇರುವುದರಿಂದ ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ಅಂತಹವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಸಿದರು.
ಬಸವರಾಜ ಹಿರೇಮಠ, ಅಸ್ಫಾಕ್ ಬೆಟಗೇರಿ, ವಿ.ಎಸ್. ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.