ಬಳ್ಳಾರಿ,ಜು.೦೩: ಕಳೆದ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ ಅತಿಥಿ ಉಪನ್ಯಾಸಕರಿಗೆ ಕಾರ್ಯಭಾರವನ್ನು ಹಂಚಿಕೆ ಮಾಡಬೇಕು ಉಳಿದ ಹೆಚ್ಚುವರಿ ಕಾರ್ಯ ಭಾರಕ್ಕೆ ಹೊಸಬರನ್ನು ಕೌನ್ಸಿಲಿಂಗ್ ಮೂಲಕ ಆಯ್ಕೆ ಮಾಡಿಕೊಳ್ಳಬೇಕು ಮತ್ತು ಅತ್ಯಂತ ಮುಖ್ಯವಾಗಿ ಜೂನ್ ೨೫ರಂದು ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ರದ್ದುಪಡಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ||ದುರ್ಗಪ್ಪ ರಾಜ್ಯಸರ್ಕಾರವನ್ನು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ೨೦೨೪ -೨೦೨೫ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ ಅತಿಥಿ ಉಪನ್ಯಾಸಕರನ್ನು ಯಾವುದೇ ತಾರತಮ್ಯವನ್ನು ಮಾಡದೆ ಯಥಾಸ್ಥಿತಿ ಕರ್ತವ್ಯದಲ್ಲಿ ಮುಂದುವರಿಸಬೇಕು ಈಗಾಗಲೇ ಅತಿಥಿ ಉಪನ್ಯಾಸಕರು ವಯೋ ನಿವೃತ್ತಿ ಅಂಚಿನಲ್ಲಿದ್ದಾರೆ ಅವರಿಗೆ ೨೦ ಲಕ್ಷ ರೂಪಾಯಿಗಳ ಇಡುಗಂಟನ್ನು ಮತ್ತು ಸೇವಾ ಭದ್ರತೆಯನ್ನು ನೀಡಬೇಕು ರಾಜ್ಯದ ಅಕ್ಕಪಕ್ಕದ ರಾಜ್ಯಗಳಲ್ಲಿರುವಂತೆ ಅತಿಥಿ ಉಪನ್ಯಾಸಕರಿಗೆ ೬೫ ರಿಂದ ೬೭ ಸಾವಿರ ರೂಪಾಯಿಗಳವರೆಗೆ ವೇತನವನ್ನು ನಿಗದಿಪಡಿಸಬೇಕು ಮತ್ತು ಅವರಿಗೆ ಆರೋಗ್ಯ ವಿಮೆ ಜೀವವಿಮೆ ಪ್ರಾವಿಡೆಂಟ್ ಫಂಡ್ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.
ಯುಜಿಸಿ ಮತ್ತು ನಾನ್ ಯು ಜಿ ಸಿ ಎಂಬ ತಾರತಮ್ಯವನ್ನು ಬಿಟ್ಟು ಉಚ್ಚ ನ್ಯಾಯಾಲಯ ಧಾರವಾಡ ವಿಭಾಗೀಯ ಪೀಠ ಹತ್ತು ವರ್ಷಗಳ ಕಾಲ ಸರ್ಕಾರಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿರುವ ಉಪನ್ಯಾಸಕರನ್ನು ಕಾಯಂ ಗೊಳಿಸಲು ಆದೇಶ ಮಾಡಿದೆ ಅದರ ಪ್ರಕಾರ ಆದೇಶವನ್ನು ಜಾರಿಗೆ ತರಬೇಕು ಯು ಜಿ ಸಿ ನಾನ್ ಯು ಜಿ ಸಿ ಎಂದು ನಿಯಮಾವಳಿ ಪ್ರಕಾರ ಅತಿಥಿ ಉಪನ್ಯಾಸಕರನ್ನು ಬೀದಿಗೆ ತಳ್ಳುವ ಕೆಲಸವನ್ನು ಮಾಡುವುದು ಬಿಟ್ಟು ಸರ್ಕಾರ ಮತ್ತು ಉನ್ನತ ಶಿಕ್ಷಣ ಸಚಿವರು ಅತಿಥಿ ಉಪನ್ಯಾಸಕರ ಪರವಾಗಿ ಕ್ರಮ ಕೈಗೊಳ್ಳಬೇಕೆಂದು ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವರನ್ನು ಒತ್ತಾಯಿಸಿದರು.
ನಗರದ ಸರಳಾದೇವಿ ಕಾಲೇಜಿನಲ್ಲಿ ಕೇವಲ ೩೩ ಜನ ಖಾಯಂ ಉಪನ್ಯಾಸಕರಿದ್ದರೆ ೧೧೦ ಅತಿಥಿ ಉಪನ್ಯಾಸಕರಿದ್ದಾರೆ ಆದರೂ ಸಹ ಕಾಲೇಜು ರಾಷ್ಟ್ರಮಟ್ಟದಲ್ಲಿ ಯುಜಿಸಿಯ ಏಳನೇ ಸ್ಥಾನವನ್ನು ಪಡೆದುಕೊಂಡಿದೆ ಇದಕ್ಕೆ ಅತಿಥಿ ಉಪನ್ಯಾಸಕರೆ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ, ಈ ರೀತಿಯಾಗಿ ಅತಿಥಿ ಉಪನ್ಯಾಸಕರನ್ನು ಪದೇಪದೇ ಕೌನ್ಸಲಿಂಗ್ ನೆಪದಲ್ಲಿ ಮಾನಸಿಕವಾಗಿ ಹೋಗುವಂತೆ ಮಾಡುವ ಕಾಲೇಜು ಶಿಕ್ಷಣ ಇಲಾಖೆಯ ಕ್ರಮ ಸರಿಯಾದದ್ದಲ್ಲ ತಕ್ಷಣವೇ ಅವರನ್ನು ವರ್ಗಾವಣೆ ಮಾಡಿ ತಮ್ಮ ಮೂಲ ಸ್ಥಾನಕ್ಕೆ ಕಳಿಸಿ ಕೊಡಬೇಕೆಂದು ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು ಒತ್ತಾಯಿಸಿದರು.
ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯನ್ನು ಒದಗಿಸಲಾಗುವುದು ಎಂದು ತಿಳಿಸಲಾಗಿತ್ತು ಆದರೆ ಸರ್ಕಾರ ಈ ಅಂಶವನ್ನೇ ಮರೆತು ಅತಿಥಿ ಉಪನ್ಯಾಸಕರಿಗೆ ಮರಣ ಶಾಸನವಾಗುವಂತಹ ಜೂನ್ ೨೫ರ ಅಧಿಸೂಚನೆಯನ್ನು ಹೊರಡಿಸಿದ್ದಾರೆ ಇದನ್ನು ಕೂಡಲೇ ಹಿಂಪಡೆಯಬೇಕೆAದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಡಿ ಸಿದ್ದೇಶ್, ಸಹ ಕಾರ್ಯದರ್ಶಿ ಟಿ.ರುದ್ರಮುನಿ, ಟಿ.ಜಯರಾಮ್, ಶಿವಕುಮಾರ್ ಅಂಗಡಿ ಸಂಧ್ಯಾಬಾಯಿ, ತಿಪ್ಪೇಶ್‌ರೆಡ್ಡಿ, ವಿಷ್ಣು ಹಡಪದ, ರಾಜಲಕ್ಷ್ಮಿ, ಶೋಭಾ ಜ್ಯೋತಿ, ಗುರುರಾಜ್, ರಮೇಶ್ ಎಂ ರಫಿ, ಮತ್ತು ರಾಮಣ್ಣ ಚರಣಪ್ಪ ಬಾಲಚಂದ್ರ ಏರಿಸ್ವಾಮಿ ಸೇರಿದಂತೆ ಇತರರಿದ್ದರು.