ನಟ ಸತೀಶ್ ನೀನಾಸಂ ಹೊಸ ಅವತಾರವೆತ್ತಿರುವ ಬಹು ನಿರೀಕ್ಷಿತ ಸಿನಿಮಾ ‘ದಿ ರೈಸ್ ಆಫ್ ಅಶೋಕ’. ಈಗಾಗಲೇ ಒಂದಷ್ಟು ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಿರುವ ಈ ಚಿತ್ರವೀಗ ಡಬ್ಬಿಂಗ್ ಮುಗಿಸಿದೆ.
ಬೆಂಗಳೂರಿನ ಆಕಾಶ್ ಸ್ಟುಡಿಯೋದಲ್ಲಿ ಚಿತ್ರದ ನಾಯಕ ಸತೀಶ್ ಹಾಗೂ ನಾಯಕಿ ಸಪ್ತಮಿ ಗೌಡ ತಮ್ಮ ಪಾತ್ರಗಳಿಗೆ ಮಾತು ಪೊಣಿಸಿದ್ದಾರೆ.
ನಟ ಸತೀಶ್ ನೀನಾಸಂ ಮಾತನಾಡಿ “ದಿ ರೈಸ್ ಆಫ್ ಅಶೋಕ’ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿತ್ತು. ಈಗ ಡಬ್ಬಿಂಗ್ ಕೂಡ ಕಂಪ್ಲೀಟ್ ಆಗಿದೆ. ಆಕಾಶ್ ಸ್ಟುಡಿಯೋದ ಆನಂದ್, ಇಂಜಿನಿಯರ್ ನನ್ನ ಸಾಕಷ್ಟು ಚಿತ್ರಗಳಿಗೆ ಅವರೇ ಡಬ್ ಮಾಡಿದ್ದಾರೆ. ಈ ಜಾಗದಲ್ಲಿ ಡಬ್ ಮಾಡಿರುವುದು ಪಾಸಿಟಿವ್ ಎನರ್ಜಿ ಇದೆ. ಈ ಜಾಗದಲ್ಲಿ ಅಣ್ಣಾವ್ರು, ವಿಷ್ಣು ಸರ್ ಸೇರಿದಂತೆ ಹಲವರು ಡಬ್ ಮಾಡಿದ್ದಾರೆ. ಈ ಜಾಗದಲ್ಲಿ ನಮ್ಮ ಚಿತ್ರದ ಡಬ್ಬಿಂಗ್ ಮುಗಿದಿರುವುದು ಖುಷಿ ಇದೆ. ಕನ್ನಡ, ತೆಲುಗು ಹಾಗೂ ತಮಿಳ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡಲು ಪ್ಲಾನ್ ಮಾಡಿದ್ದೇವೆ. ಕನ್ನಡ ಭಾಷೆ ಡಬ್ಬಿಂಗ್ ಮುಗಿದಿದ್ದು, ಮುಂದಿನ ದಿನಗಳಲ್ಲಿ ತೆಲುಗು ಹಾಗೂ ತಮಿಳು ಶುರು ಮಾಡುತ್ತೇವೆ” ಎಂದರು.
ನಟಿ ಸಪ್ತಮಿ ಗೌಡ ಮಾತನಾಡಿ “ತುಂಬಾ ಖುಷಿಯಾಗುತ್ತಿದೆ. ಯಾವುದೇ ಸಿನಿಮಾ ಶುರು ಮಾಡಿ ಅದರಲ್ಲಿಯೂ ಡಬ್ಬಿಂಗ್ ಮುಗಿಸಿದಾಗ ನಟಿಯಾಗಿ ಪರಿಪೂರ್ಣ ಜವಾಬ್ದಾರಿ ಅನಿಸುತ್ತದೆ. ಅಂಬಿಕಾ ಎಂಬ ಪಾತ್ರ ಎಮೋಷನ್. ತುಂಬಾ ಇಸಿಯಾಗಿಯಾದ ಪಾತ್ರ. ನನ್ನನ್ನು ಚಿತ್ರ ತುಂಬಾ ಚೆನ್ನಾಗಿ ತೋರಿಸಿದ್ದಾರೆ. ಡಿಫರೆಂಟ್ ಅವತಾರದಲ್ಲಿ ಅಂಬಿಕಾ ಆಗಿ ನೀವು ನನ್ನನ್ನು ನೋಡುತ್ತೀರ. ‘ದಿ ರೈಸ್ ಆಫ್ ಅಶೋಕ’ ಚಿತ್ರದ ಭಾಗವಾಗಿರುವುದು ಖುಷಿಯಾಗಿದೆ” ಎಂದು ಹೇಳಿದರು.
‘ದಿ ರೈಸ್ ಆಫ್ ಅಶೋಕ’ 70ರ ದಶಕದಲ್ಲಿ ಹಾಗೂ ಪ್ರಸ್ತುತ ಕಾಲಘಟ್ಟದಲ್ಲಿ ನಡೆಯುವ ಸಿನಿಮಾ. ಚಿತ್ರದಲ್ಲಿ ಸತೀಶ್ ನೀನಾಸಂ ಕ್ರಾಂತಿಕಾರಿ ಯುವಕನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡುವ ಯುವಕನ ಬದುಕು ಹಾಗೂ ಸಂಘರ್ಷದ ಸುತ್ತಾ ಸಾಗುವ ಕಥೆಯೇ ‘ದಿ ರೈಸ್ ಆಫ್ ಅಶೋಕ’.
ಬಿ.ಸುರೇಶ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯಾ, ಯಶ್ ಶೆಟ್ಟಿ, ಹರೀಶ್ ಪೆರಾಡಿ ತಾರಾಬಳಗದಲ್ಲಿದ್ದಾರೆ. ‘ರೈಸ್ ಆಫ್ ಆಫ್ ಅಶೋಕ’ನಿಗೆ ದಯಾನಂದ್ ಟಿ.ಕೆ ಕಥೆ ಬರೆದಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಲವಿತ್ ಕ್ಯಾಮರಾ ವರ್ಕ್, ಮನು ಶೇಡ್ಗಾರ್ ಸಂಕಲನ, ರವಿವರ್ಮಾ ಹಾಗೂ ವಿಕ್ರಮ್ ಮೋರ್ ಸಾಹಸ ನಿರ್ದೇಶನ, ಸಂತೋಷ್ ಶೇಖರ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. .
ಸಿನಿಮಾ ಕನ್ನಡದ ಜೊತೆ ತೆಲುಗು ಹಾಗೂ ತಮಿಳು ಭಾಷೆಗಳಲ್ಲೂ ಬಿಡುಗಡೆಯಾಗಲಿದೆ. ವೃದ್ಧಿ ಕ್ರಿಯೇಷನ್ ಹಾಗೂ ಸತೀಶ್ ಪಿಕ್ಚರ್ಸ್ ಹೌಸ್ ಪ್ರೊಡಕ್ಷನ್ ಅಡಿ ವರ್ಧನ್ ನರಹರಿ, ಜೈಷ್ಣವಿ ಜೊತೆಗೆ ನೀನಾಸಂ ಸತೀಶ್ ಕೂಡಾ ಸಿನಿಮಾ ನಿರ್ಮಾಣ ಮಾಡಿದ್ದಾರೆ.