ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ
ಎಂ. ಎಸ್. ಸತ್ಯು ಅವರ 96ನೇ ಹುಟ್ಟುಹಬ್ಬವನ್ನು ‘ಕೊರಗಜ್ಜ’ ಸಿನಿಮಾದ ನಿರ್ದೇಶಕ ಸುಧೀರ್ ಅತ್ತಾವರ್ ಮತ್ತು ಚಿತ್ರ ತಂಡ ವಿಶೇಷವಾಗಿ ಸಂಭ್ರಮಿಸುತ್ತಿದೆ.
ಇದಕ್ಕೆ ಕಾರಣ ಈ ಚಿತ್ರದಲ್ಲಿ ಕಾಸ್ಟ್ಯೂಮ್ ಮತ್ತು ಆರ್ಟ್ ಡೈರೆಕ್ಷನ್ ಗೆ ಸತ್ಯುರವರು ನೀಡಿರುವ ಕೊಡುಗೆ. ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಮ್ಸ್ ಬ್ಯಾನರ್ ಅಡಿಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಕೊರಗಜ್ಜ’ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ನಡುವೆ ಸಿನಿಮಾದ ಅತ್ಯಂತ ವಿಶಿಷ್ಟ ಎನಿಸುವ ಕಾಸ್ಟ್ಯೂಮ್ ನ ದೇಶದ ಖ್ಯಾತ ಕಲಾ ವಿನ್ಯಾಸಗಾರ, ರಂಗ ಕರ್ಮಿ-ನಿರ್ದೇಶಕ ಎಂ ಎಸ್. ಸತ್ಯುರವರ ಬಳಿ ಸಾಕಷ್ಟು ಚರ್ಚಿಸಿ, ವಸ್ತ್ರ ವಿನ್ಯಾಸ ಗೊಳಿಸಿರುವ ವಿಚಾರವನ್ನು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ನಿರ್ದೇಶಕರು ಈ ಸಂದರ್ಭದಲ್ಲಿ ಬಹಿರಂಗ ಪಡಿಸಿರುತ್ತಾರೆ. ಇದೇ ಜುಲೈ 6 ಎಂ. ಎಸ್. ಸತ್ಯು ಅವರ ಜನ್ಮದಿನವಾಗಿದೆ.
“ಇದು ಸುಮಾರು ಎಂಟುನೂರು ವರ್ಷಗಳ ಹಿಂದಿನ ಕಥೆಯಾದ್ದರಿಂದ ಆ ಕಾಲಘಟ್ಟಕ್ಕೆ ಸರಿ ಹೊಂದುವ ಕಾಸ್ಟ್ಯೂಮ್ ನ ವಿನ್ಯಾಸಗೊಳಿಸಲು ಆಳವಾದ ಜ್ಞಾನ ಮತ್ತು ಪರಿಕಲ್ಪನೆ ಬೇಕಾಗಿರುತ್ತದೆ. ಸತ್ಯು ರವರು ಮಾಡಿರುವ ಕಲಾ ವಿನ್ಯಾಸ ಗಳು ಲಂಡನಿನ ಷೇಕ್ಸ್ ಪಿಯರ್ ಮ್ಯೂಸಿಯಂ ನಲ್ಲೂ ಸಂಗ್ರಹವಾಗಿದೆ. ಗುರುಗಳಾದ ಸತ್ಯು ರವರ ಹತ್ರ ‘ಕೊರಗಜ್ಜ’ ಮತ್ತು ನನ್ನ ಮುಂಬರುವ ಸಿನಿಮಾದ ವಸ್ತ್ರ ವಿನ್ಯಾಸ ಮತ್ತು ಕಲಾ ವಿಭಾಗದ ಬಗ್ಗೆ ಹಲವಾರು ಬಾರಿ ಫೋನ್ ನಲ್ಲಿ ಚರ್ಚಿಸಿದೆ. ಸಂಪೂರ್ಣ ಮಾಹಿತಿ ಪಡೆದುಕೊಳ್ಳುವಷ್ಟರಲ್ಲಿ ಸತ್ಯು ವಯೋ ಸಹಜ ಖಾಯಿಲೆಯಿಂದ ಸೊರಗತೊಡಗಿದರು. ನಂತರ ಸ್ವತಃ ಆಳವಾದ ಅಭ್ಯಾಸ ಮಾಡಿ ಉಡುಗೆ- ತೊಡುಗೆ ಮತ್ತು ಕಲಾ ವಿನ್ಯಾಸ ಮಾಡಿದೆ. ಆದರೆ ನನ್ನ ‘ಪರಿ’ ಸಿನಿಮಾದ ಕಲಾ ನಿರ್ದೇಶನವನ್ನು ಸತ್ಯು ರವರೇ ಮಾಡಿದ್ದರು” ಎಂದು ಸುಧೀರ್ ತಿಳಿಸಿದರು.
“ಕೊರಗಜ್ಜ’ ಸಿನಿಮಾದ ಕಲಾ ನಿರ್ದೇಶನವನ್ನೂ ನಿರ್ದೇಶಕರೇ ಮಾಡಿರುತ್ತಾರೆ. ಸುಧೀರ್ ಅತ್ತಾವರ್ ರವರು ಎಂ ಎಸ್ ಸತ್ಯುರವರ ಜೊತೆ ಸಿನಿಮಾ,ರಂಗಭೂಮಿ ಮತ್ತು ಟಿವಿ ಮಾಧ್ಯಮದಲ್ಲಿ ಸುಮರು _10 ವರ್ಷ ಕೆಲಸ ಮಾಡಿರುತ್ತಾರೆ. ‘ಇಜ್ಜೋಡು’ ಚಿತ್ರಕ್ಕೆ ಎಲ್ಲಾ ಹಾಡುಗಳನ್ನೂ ಸುಧೀರ್ ರಚಿಸಿರುತ್ತಾರೆ. ಇಂದು ಬಹಳ ದೊಡ್ದ ಹೆಸರು ಮಾಡುತ್ತಿರುವ ವಿನ್ಯಾಸಕಾರರು, ದೇಶದ ಶ್ರೇಷ್ಠ ಕಲಾ ನಿರ್ದೇಶಕ ರಾಗಿರುವ ಸತ್ಯು ರವರ ಮೂಸೆಯಿಂದ ಬಂದಿರುತ್ತಾರೆ. ಅಂತಹ ಶ್ರೇಷ್ಠ ವಿನ್ಯಾಸಗಾರ ಎಂ. ಎಸ್. ಸತ್ಯು “ಕೊರಗಜ್ಜ” ಸಿನಿಮಾದ ಕಥೆ ಕೇಳಿ ಬಹಳ ಇಷ್ಟ ಪಟ್ಟಿದ್ದರು. ಆದರೆ ಸಿನಿಮಾ ಮಾಡಲು ಅತ್ಯಂತ ಚಾಲೆಂಜಿಂಗ್ ಮತ್ತು ಕಠಿಣ ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದರು. ಸಿನಿಮಾದ ಕಾಸ್ಟ್ಯೂಮನ್ನು ಖ್ಯಾತ ಹಾಲಿವುಡ್-ಬಾಲಿವುಡ್ ಮತ್ತು ಯುರೋಪಿಯನ್ ಸಿನಿಮಾಗಳ ನಟ, ‘ಕೊರಗಜ್ಜ’ ಸಿನಿಮಾದಲ್ಲಿ ಉದ್ಯಾವರ ಅರಸರ ಪಾತ್ರ ನಿಭಾಯಿಸಿರುವ ಕಬೀರ್ ಬೇಡಿ ಬಹಳವಾಗಿ ಮೆಚ್ಚಿಕೊಂಡು ತನ್ನ ಇನ್ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿದ್ದರು.
ತ್ರಿವಿಕ್ರಮ ಸಪಲ್ಯ ನಿರ್ಮಿಸುತ್ತಿರುವ ‘ಕೊರಗಜ್ಜ’ ಸಿನಿಮಾವನ್ನು ದೇಶಾದ್ಯಂತ ತೆರೆ ಕಾಣಲು ಕಾರ್ಯತಂತ್ರ ರೂಪುಗೊಳ್ಳುತ್ತಿದೆ. ಈ ನಡುವೆ ಆಡಿಯೋ, ಮತ್ತು ಟ್ರೇಲರನ್ನು ಲಂಡನ್ ನ ಒಂದು ವಿಶೇಷ ಸ್ಥಳದಲ್ಲಿ ಬಿಡುಗಡೆ ಗೊಳಿಸಲು ತಂಡ ಸಜ್ಜಾಗುತ್ತಿದೆ. ಖ್ಯಾತ ಸಂಗೀತಗಾರ ಗೋಪಿ ಸುಂದರ್ ರವರ ಹೊಸ ‘ಝೋನರ’ ನ ಮ್ಯೂಸಿಕ್, ಈಗಾಗಲೇ ದೇಶದ ಹಲವಾರು ಖ್ಯಾತ ಆಡಿಯೋ ಕಂಪೆನಿಗಳ ಗಮನ ಸೆಳೆಯುವಲ್ಲಿ ಸಫಲವಾಗಿದೆ.ಅದಕ್ಕೆ ಪೂರಕವಾಗಿ ಶ್ರೇಯಾ ಘೋಷಾಲ್, ಸುನಿಧಿ ಚೌಹಾನ್, ಶಂಕರ್ ಮಹದೇವನ್, ಜಾವೆದ್ ಆಲಿ, ಶರೋನ್ ಪ್ರಭಾಕರ್, ಸ್ವರೂಪ್ ಖಾನ್, ಅರ್ಮನ್ ಮಲಿಕ್ ಜೊತೆಗೆ ದಕ್ಷಿಣ ಭಾರತದ ಪ್ರತಿಭೆಗಳಾದ ರಮೇಶ್ ಚಂದ್ರ, ಅನಿಲ ರಾಜಿವ್, ಸನ್ನಿದಾನಂದನಮ್, ವಿಜೇಶ್ ಗೋಪಾಲ್, ಪ್ರತಿಮ ಭಟ್, ಕಾಂಜನ ಮೊದಲಾದವರ ಕಂಠ ಸಿರಿಯಲ್ಲಿ ವಿನೂತನ ಗೀತೆಗಳು ಮೂಡಿಬಂದಿದೆ.
ಚಿತ್ರಕ್ಕೆ ಮನೋಜ್ ಪಿಳ್ಳೈ ಮತ್ತು ಪವನ್ ಕ್ಯಾಮರಾ, ವಿದ್ಯಾಧರ್ ಶೆಟ್ಟಿ ಮತ್ತು ಜಿತ್ ಜೋಶ್ ಸಂಕಲನ, ಬಿಬಿನ್ ದೇವ್ ಸೌಂಡ್ ಡಿಸೈನ್, ಲಿಜು ಪ್ರಭಾಕರ್ ಡಿ ಐ ಕಲರಿಂಗ್, ಲವನ್-ಕುಶನ್ ವಿ ಎಫ಼್ ಎಕ್ಸ್ ಮತ್ತು ಗ್ರಾಫಿಕ್ಸ್ ಕೆಲಸ ಈ ಚಿತ್ರಕ್ಕಿದೆ..