ಬೆಂಗಳೂರು: ಪಕ್ಷದಲ್ಲಿ ಎಲ್ಲಿಯೂ ಅಸಮಾಧಾನವಿಲ್ಲ. ಪಕ್ಷ ಸಂಘಟನೆ ಸೇರಿದಂತೆ ಪಕ್ಷದ ಹಾಗುಹೋಗುಗಳನ್ನು ಗಮನಿಸಲು ರಣದೀಪ್ ಸುರ್ಜೇವಾಲ ಅವರು ಭೇಟಿ ನೀಡಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರ ಎದುರು ಶಾಸಕರು ಅಸಮಾಧಾನ ಹೇಳಿಕೊಂಡಿದ್ದಾರೆ ಎಂದು ಕೇಳಿದಾಗ, “ಈಗಿನಿಂದಲೇ ಚುನಾವಣೆಗೆ ಹೇಗೆ ತಯಾರಿ ನಡೆಸಬೇಕು ಎಂಬುದು ಸೇರಿದಂತೆ, ಜವಾಬ್ದಾರಿಗಳ ನಿರ್ವಹಣೆ ಹೇಗೆ ಮಾಡಬೇಕು ಎಂದು ಚರ್ಚೆ ನಡೆಸಲು, ಜವಾಬ್ದಾರಿ ವಹಿಸಲು ಸುರ್ಜೆವಾಲ ಅವರು ಬಂದಿದ್ದಾರೆ ಎಂದರು.
ಶಾಸಕ ಇಕ್ಬಾಲ್ ಹುಸೇನ್ ಗೆ ನೋಟಿಸ್ ನೀಡಿರುವ ಬಗ್ಗೆ ಕೇಳಿದಾಗ, “ಪಕ್ಷದಲ್ಲಿ ಶಿಸ್ತು ಮುಖ್ಯ. ಅವರಿಗೂ ನೋಟಿಸ್ ನೀಡುವೆ, ಬೇರೆಯವರಿಗೂ ನೋಟಿಸ್ ನೀಡಬೇಕಾಗುತ್ತದೆ. ನನ್ನ ಹೆಸರು ಹೇಳಿ, ನನ್ನನ್ನು ಸಿಎಂ ಮಾಡಿ ಎಂದು ಹೇಳುವ ಅವಶ್ಯಕತೆಯಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ಇರುವಾಗ ಬೇರೆ ಹೆಸರು ಏಕೆ?” ಎಂದರು.
ನೀವು ಪಕ್ಷ ಕಟ್ಟಲು ಕಷ್ಟಪಟ್ಟಿದ್ದೀರಿ ಆ ಕಾರಣಕ್ಕೆ ನಿಮ್ಮ ಹೆಸರು ಪ್ರಸ್ತಾಪಿಸಿದ್ದಾರೆ ಎಂದು ಕೇಳಿದಾಗ, “ನಾನೊಬ್ಬನೆ ಪಕ್ಷ ಕಟ್ಟಿದ್ದೇನೆಯೇ? ನನ್ನಂತೆ ನೂರಾರು, ಸಾವಿರಾರು ಲಕ್ಷಾಂತರ ಜನ ಪಕ್ಷ ಕಟ್ಟಿದ್ದಾರೆ. ಮೊದಲು ಅವರ ನಂಬಿಕೆ ಉಳಿಸಿಕೊಳ್ಳೋಣ” ಎಂದು ಹೇಳಿದರು.