ಬೆಳಗಾವಿ: ಶಾಸಕರ ಬಳಿ ನಾವು ಪತ್ರ ಪಡೆಯುತ್ತೇವೆ. ನೀವು ಪತ್ರ ನೀಡಿ ಎಂದಾಗ ಅಧಿಕಾರಿಗಳಿಗೆ ವರ್ಗಾವಣೆಗಾಗಿ ನಾವು ಪತ್ರ ನೀಡಿರುತ್ತೇವೆ ಅಷ್ಟೇ. ಹೀಗಾಗಿ ಅಧಿಕಾರಿಗಳ ವರ್ಗಾವಣೆಯ ಸಮಸ್ಯೆ ಇಲ್ಲ. ಈ ಪ್ರಕ್ರಿಯೇ ಸದಾ ನಡೆಯುತ್ತದೆ. ಈ ವಿಷಯದಲ್ಲಿ ಶಾಸಕರ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಬೆಳಗಾವಿ ಜಿಲ್ಲೆಯ ಅಧಿಕಾರಿಗಳ ವರ್ಗಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಜಕೀಯವೆಂದರೇ ಆರೋಪಗಳನ್ನು ಮಾಡುವುದು ಸಹಜ. ಎಲ್ಲ ಅಧಿಕಾರಿಗಳು 4 ವರ್ಷ ಸೇವೆ ಸಲ್ಲಿಸಬೇಕೆಂಬುದು ನಮ್ಮ ಆಶಯ. ಯಾವುದೇ ಅಧಿಕಾರಿಯನ್ನ ಒಂದೇ ವರ್ಷದಲ್ಲಿ ಬದಲಾವಣೆ ಮಾಡುವ ಪದ್ಧತಿ ನಮ್ಮಲ್ಲಿಲ್ಲ. ದೆಹಲಿಯಲ್ಲಿ ಅಧಿಕಾರಿ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದರು.
ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ. ಸಾರ್ವಜನಿಕ ಸೇವಕರೆಂಬ ಭಾವನೆ ನಮ್ಮಲ್ಲಿದೆ. ಅಧಿಕಾರಿಗಳ ವರ್ಗಾವಣೆ ಸಾಮಾನ್ಯ ಗಂಭೀರ ವಿಷಯವಲ್ಲ ಎಂದರು. ಬೈಲಹೊಂಗಲ್ ಎಸಿ ಅವರಿಂದ ಸರ್ಕಾರಿ ಜಮೀನನ್ನು ಖಾಸಗಿ ಜಮೀನು ಎಂದು ಪರಿವರ್ತಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಂದ ವರದಿ ಪಡೆಯಲಾಗುವುದು. ಈ ಕುರಿತು ಜಿಲ್ಲಾಧಿಕಾರಿಗಳು ತನಿಖೆ ಮಾಡುತ್ತಾರೆ. ಅಕ್ರಮ ಏಸಗಿದ್ದರೆ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತಾರೆಂದು ತಿಳಿಸಿದರು.
ಈಚೆಗೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿದ್ದ ಕುರಿತು ಮಾಹಿತಿ ನೀಡಿದ ಅವರು, ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ನ್ಯಾಯಯುತ ಪಾಲು ಸಿಗುತ್ತಿಲ್ಲ, ಇನ್ಮುಂದೆಯಾದರು ರಾಜ್ಯಕ್ಕೆ ತೆರಿಗೆ ಪಾಲಿನಲ್ಲಿ ಅನ್ಯಾಯ ಆಗಬಾದರೆಂದು ಮನವಿ ಮಾಡಿದ್ದಾಗಿ ಹೇಳಿದರು.
ಸರ್ವಿಸ್ ರಸ್ತೆಗಳು ಹಾಳಾಗಿದ್ದರ ಕುರಿತು ಎನ್‌ಎಚ್‌ಐ ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ಈ ಹಿಂದೆ ಗೋವಾಗೆ ಸಂಪರ್ಕಿಸುವ ರಸ್ತೆ ಹಾಳಾಗಿದ್ದರ ಬಗ್ಗೆ ಗಮನಕ್ಕೆ ತಂದಾಗ ಎನ್‌ಎಚ್‌ಐ ಅಧಿಕಾರಿಗಳು ಶೀಘ್ರವೇ ಟೆಂಟರ್ ಕರೆದು ಅನುದಾನ ಬಿಡುಗಡೆಗೊಳಿಸಿ ರಸ್ತೆಯನ್ನು ಅಭಿವೃದ್ಧಿಪಡಿಸಿದ್ದಾರೆ ಎಂದರು.
ಹುಕ್ಕೇರಿ ತಾಲೂಕಿನ ಇಂಗಳಗಿಯಲ್ಲಿ ಶ್ರೀರಾಮಸೇನಾ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಥಳಿಸಿದ ಘಟನೆಯ ಹಿನ್ನೆಲೆ ಬೇರೆಯಾಗಿದೆ. ಶ್ರೀರಾಮಸೇನೆ ಅಥವಾ ಮುಸ್ಲಿಂ ಯುವಕರ ಜಗಳವಲ್ಲ. ಈಗಾಗಲೇ ಪೊಲೀಸರು ತಮ್ಮ ತನಿಖೆಯನ್ನು ಆರಂಭಿಸಿದ್ದಾರೆ ಎಂದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರು ನಡೆಸುತ್ತಿರುವ ಸಭೆಗೆ ಶಾಸಕ ರಾಜು ಕಾಗೆ ಗೈರಾದ ಬಗ್ಗೆ ಮಾತನಾಡಿ, ಬೆಳಗಾವಿಯಲ್ಲಿ ಇಂದು ಅಧಿಕಾರಿಗಳ ಸಭೆ ಇತ್ತು. ಹೀಗಾಗಿ ನಾಳೆ ಹೋಗಿ ಸುರ್ಜೇವಾಲಾ ಅವರನ್ನ ಭೇಟಿ ಆಗುತ್ತಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡವೆಂದು ಮಾಧ್ಯವದವರಿಗೆ ಪ್ರತಿಕ್ರಿಯೇ ನೀಡಿದರು.