ಕಲಘಟಗಿಯ ಗೊಬ್ಬರ ಅಂಗಡಿ, ದಾಸ್ತಾನು ಮಳಿಗೆಗಳಿಗೆ ಜಿಲ್ಲಾಧಿಕಾರಿ ದಿಢೀರ ಭೇಟಿ ಪರಿಶೀಲನೆ

Ravi Talawar
ಕಲಘಟಗಿಯ ಗೊಬ್ಬರ ಅಂಗಡಿ, ದಾಸ್ತಾನು ಮಳಿಗೆಗಳಿಗೆ ಜಿಲ್ಲಾಧಿಕಾರಿ ದಿಢೀರ ಭೇಟಿ ಪರಿಶೀಲನೆ
WhatsApp Group Join Now
Telegram Group Join Now
ಧಾರವಾಡ :  ಬೇಡಿಕೆಗಿಂತ ಹೆಚ್ಚು ರಾಸಾಯನಿಕ ಗೊಬ್ಬರ ವಿತರಿಸಿದರೂ ಕಲಘಟಗಿ ತಾಲೂಕಿನಲ್ಲಿ ಅನಗತ್ಯ ಗೊಂದಲಗಳು, ರೈತರಿಗೆ ತೊಂದರೆಗಳು ಉಂಟಾಗುತ್ತಿವೆ. ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದಾಗ ವಿತರಕರು ಸರಕಾರದ ನಿಯಮ, ಷರತ್ತು ಪಾಲಿಸದೆ ಇರುವುದು ಮತ್ತು ಸಂಬಂಧಿಸಿದ ಅಧಿಕಾರಿಗಳು ಕ್ರಮಬದ್ಧವಾಗಿ ಮೇಲುಸ್ತುವಾರಿ ಹಾಗೂ ನಿಗಾವಹಿಸದಿರುವುದು ಕಂಡು ಬಂದಿದೆ. ಅಧಿಕಾರಿಗಳಿಂದ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವದಾಗಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸಾರ್ವಜನಿಕ ದೂರು ಮತ್ತು ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ಬೀಜ, ರಸಗೊಬ್ಬರದ ಸಮಸ್ಯೆಗಳನ್ನು ತಿಳಿದು, ಪರಿಹರಿಸುವ ಉದ್ದೇಶದಿಂದ ಕಲಘಟಗಿ ಪಟ್ಟಣದ ಬೀಜ, ರಸಗೊಬ್ಬರ ಮಾರಾಟ ಮಳಿಗೆಗಳಿಗೆ  ದಿಡೀರ್ ಭೇಟಿ ನೀಡಿ ಪರಿಶೀಲಿಸಿದರು.
ಕೊಂಡುಕೊಳ್ಳಲು ಬಂದಿದ್ದ ರೈತರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ರೈತರನ್ನು ಉದ್ದೇಶಿಸಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಮಣ್ಣಿಗೆ ನಾವೆಲ್ಲರೂ ಗೌರವ ಕೊಡಬೇಕು. ಯಾವುದೋ ಗೊಬ್ಬರವನ್ನು ಹಾಕಿ ಅದರ ಫಲವತ್ತತೆಯನ್ನು ಹಾಳು ಮಾಡಬಾರದು. ಯಾರಾದರೂ ದಬ್ಬಾಳಿಕೆ ಮಾಡಿ ಇದೇ ಗೊಬ್ಬರ ತೆಗೆದುಕೊಳ್ಳಿ ಎಂದು ಹೇಳಿ ನಿಮ್ಮ ದಾರಿ ತಪ್ಪಸಿ ಗೊಬ್ಬರವನ್ನು ಕೊಟ್ಟರೆ ಅದನ್ನು ಖರೀದಿ ಮಾಡಬಾರದು. ಅತಂಹವರ ಮೇಲೆ ತಕ್ಷಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಈ ಸಂಬಂಧ ಒಂದು ತಂಡವನ್ನು ರಚನೆ ಮಾಡಲಾಗಿದ್ದು, ಆ ತಂಡವು ಎಲ್ಲವನ್ನು ಪರಿಶೀಲಿಸುತ್ತದೆ ಎಂದು ರೈತರಿಗೆ ಅವರು ಹೇಳಿದರು.
ಜಮೀನಿಗೆ ಹೆಚ್ಚು ಗೊಬ್ಬರ ಹಾಕಿದರೆ ಹೆಚ್ಚು ಇಳುವರಿ ಬರುತ್ತದೆ ಅಂದುಕೊಳ್ಳುವುದು ತಪ್ಪು ಕಲ್ಪನೆ. ಅವಶ್ಯಕತೆಗಿಂತ ಹೆಚ್ಚು ಗೊಬ್ಬರ ಹಾಕಿದರೆ ಅಷ್ಟೊಂದು ಇಳುವರಿ ಬರುವುದಿಲ್ಲ. ಈ ಕಲ್ಪನೆಯಿಂದ ಮೊದಲು ಹೊರಬರಬೇಕು. ಕಲಘಟಗಿ ತಾಲೂಕಿಗೆ 4800 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಬೇಕು. ಸಧ್ಯ 5000 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಯಾಗಿದೆ ಎಂದು ಅವರು ಹೇಳಿದರು.
*ಪ್ರತಿ ತಾಲೂಕಿಗೆ ಟಾಸ್ಕ್ ಫೋರ್ಸ್ ರಚನೆ:* ಕೆಲವು ರಸಗೊಬ್ಬರ ಮಾರಾಟಗಾರರು ಮತ್ತು ಇತರರು ರೈತರಿಗೆ ರಸಗೊಬ್ಬರ ವಿತರಿಸುವಲ್ಲಿ ಕಾನೂನು, ಸರಕಾರದ ಆದೇಶ ಮೀರಿ ವರ್ತಿಸುತ್ತಿರುವುದು ಮತ್ತು ರೈತರನ್ನು ವಂಚಿಸುತ್ತಿರುವುದು ಕಂಡು ಬರುತ್ತಿದೆ.
ಆದ್ದರಿಂದ ನಿಯಮಾನುಸಾರ ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜ, ಕಳನಾಶಕ ವಿತರಿಸುವುದನ್ನು ಪರಿಶೀಲಿಸಲು, ನಿರಂತರ ನಿಗಾವಹಿಸಲು ಮತ್ತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಾಗುವಂತೆ ಪ್ರತಿ ತಾಲೂಕಿಗೆ ಆಯಾ ತಹಶೀಲ್ದಾರರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗುತ್ತದೆ.
ಈ ಟಾಸ್ ಪೋರ್ಸ್‍ದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು, ಪೆÇಲೀಸ್ ಇಲಾಖೆ, ಜಿಎಸ್‍ಟಿ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಅಧಿಕಾರಿಗಳು ಇರುತ್ತಾರೆ. ಈ ಸಮಿತಿ ಎಲ್ಲ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ನಿರಂತರ ಭೇಟಿ ನೀಡಿ, ನಿಗಾವಹಿಸಲಿದೆ ಮತ್ತು ಮೇಲುಸ್ತುವಾರಿ ಮಾಡಲಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
*ಗೊಬ್ಬರದ ಮಾರಾಟಕ್ಕೆ ಪಿಓಎಸ್ ಬಳಕೆ ಕಡ್ಡಾಯ:* ಜಿಲ್ಲೆಯ ಎಲ್ಲ ರಸಗೊಬ್ಬರ ಮಾರಾಟಗಾರರು ರೈತರಿಗೆ ರಸಗೊಬ್ಬರ ರೈತರಿಗೆ ರಸಗೊಬ್ಬರ ಮಾರಾಟ ಮಾಡುವುದಾಗಿ ಸರ್ಕಾರದ ಆದೇಶದಂತೆ ಕಡ್ಡಾಯವಾಗಿ ಪಿಓಎಸ್ ಮಷೀನ್ ಬಳಸಬೇಕು. ರೈತರ ಹೆಬ್ಬಟ್ಟು ಪಡೆದು, ಪಹಣಿ, ಆಧಾರ ಪ್ರತಿ ಸಂಗ್ರಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ನಿರ್ದೇಶಿಸಿದರು.
*ಲಿಂಕ್ ಬೇಡ, ಎಂಆರ್‍ಪಿ ದರ ಪಿಕ್ಸ್:* ರಸಗೊಬ್ಬರ ಮಾರಾಟಗಾರರು ರೈತರು ಬೇಡಿದ ಗೊಬ್ಬರವನ್ನು ಪೂರೈಸಬೇಕು. ಯಾವುದೇ ಲಿಂಕ್ ಗೊಬ್ಬರ, ಇತರ ಉತ್ಪನ್ನ ತೆಗೆದುಕೊಳ್ಳುವಂತೆ ಒತ್ತಾಯಿಸುವುದು ಕಾನೂನುಬಾಹಿರ.
ಕಲಘಟಗಿ ಪಟ್ಟಣ ಸೇರಿದಂತೆ ಜಿಲ್ಲೆಯ ಬಹುತೇಕ ಗೊಬ್ಬರ ಮಾರಾಟಗಾರರು ಯೂರಿಯಾ ಜೊತೆಗೆ ಬೇರೆ ಗೊಬ್ಬರ, ಕಳೆನಾಶಕಗಳನ್ನು ಒತ್ತಾಯಪೂರ್ವಕಾಗಿ ನೀಡುತ್ತಿದ್ದಾರೆ. ಮತ್ತು ಯೂರಿಯಾ ಗೊಬ್ಬರ ದರ ರೂ. 266.50 ಇರುವುದನ್ನು ಹೆಚ್ಚಿನ ದರಕ್ಕೆ ನೀಡುತ್ತಿದ್ದಾರೆ ಎಂದು ರೈತರು ದೂರುತ್ತಿದ್ದಾರೆ.
ಇದನ್ನು ಪರಿಶೀಲಿಸಲು ಅಧಿಕಾರಿಗಳ ತಂಡ ರಚಿಸಲಾಗುತ್ತಿದ್ದು, ತಪ್ಪು ಕಂಡು ಬಂದಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
*ಗೊಬ್ಬರ ಖರೀದಿಗೆ ಜಿ.ಎಸ್.ಟಿ ಬಿಲ್ ಕೊಡಿ:* ಗೊಬ್ಬರ ಅಂಗಡಿಯವರು ರೈತರಿಗೆ ಬರೀ ಬಿಳಿ ಹಾಳೆಯಲ್ಲಿ ಬರೆದುಕೊಡುತ್ತಾರೆ. ಬಿಲ್ ಕೊಡುತ್ತಿಲ್ಲ; ಜಿ.ಎಸ್.ಟಿ ಬಿಲ್ಲ ನೀಡುವುದೇ ಇಲ್ಲ ಎಂದು ಅನೇಕರು ಜಿಲ್ಲಾಧಿಕಾರಿಗಳ ಬಳಿ ದೂರಿದರು. ಪ್ರತಿಯೊಬ್ಬ ರೈತ ಗೊಬ್ಬರ ಖರೀದಿಸಿದರೆ ಅವನಿಗೆ ಜಿ.ಎಸ್.ಟಿ ನಮೂದಿಸಿರುವ ಪಕ್ಕಾ ಬಿಲ್ಲ ಕೊಡಬೇಕು. ಬಿಲ್ ಕೊಡದೆ ರೈತರಿಗೆ ಮೋಸ ಮಾಡಿದರೆ ಕ್ರಿಮಿನಲ್ ಕೆಸ್ ದಾಖಲಿಸುವುದಾಗಿ ಜಿಲ್ಲಾಧಿಕಾರಿಗಳು ಅಂಗಡಿಕಾರರಿಗೆ ಎಚ್ಚರಿಕೆ ನೀಡಿದರು.
ಅಂಗಡಿ ಮುಂದೆ ದರ, ದಾಸ್ತಾನು ವಿವರ ಪ್ರಕಟಿಸಿ: ಪ್ರತಿ ರಸಗೊಬ್ಬರ ಮಾರಾಟ ಅಂಗಡಿ ಮುಂದೆ ಅವರಲ್ಲಿ ಲಭ್ಯವಿರುವ ರಸಗೊಬ್ಬರಗಳು, ಅವುಗಳ ದರ, ಮಾರಾಟವಾದ ಚೀಲಗಳು, ದಾಸ್ತಾನು ವಿವರಗಳನ್ನು ಸಾರ್ವಜನಿಕರಿಗೆ ಕಾಣುವಂತೆ ದಪ್ಪ ಅಕ್ಷರಗಳಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು.
ಇದರಿಂದ ರೈತರಿಗೆ ಅಗತ್ಯ ಮಾಹಿತಿ ಲಭಿಸಿ, ಅನಗತ್ಯ ಸಮಯ ಹಾಳು ತಪ್ಪುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
*ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಕ್ರಿಮಿನಲ್ ಕೇಸ್:* ಬೇಡಿಕೆಗಿಂತ ಹೆಚ್ಚು ಯೂರಿಯಾ ಸೇರಿ ವಿವಿಧ ರಸಗೊಬ್ಬರಗಳನ್ನು ರೈತರ ಬೇಡಿಕೆ ಮೇರೆಗೆ ಕಲಘಟಗಿ ತಾಲೂಕಿಗೆ ಕೃಷಿ ಇಲಾಖೆ ಪೂರೈಸಿದೆ. ಆದರೂ ರೈತರು ಪ್ರತಿ ದಿನ ಗೊಬ್ಬರ ಖರೀದಿಗೆ ಅಂಗಡಿಗಳ ಮುಂದೆ ಸಾಲು ನಿಲ್ಲುತ್ತಿದ್ದಾರೆ. ಗೊಬ್ಬರ ಸಿಗುತ್ತಿಲ್ಲ ಎಂದು ದೂರುತ್ತಿದ್ದಾರೆ. ಈ ಕುರಿತು ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ಮಾಡಿಸಿ, ವಿವರ ಪಡೆದುಕೊಳ್ಳುತ್ತೇನೆ. ಗೊಬ್ಬರದ ಕಳ್ಳ ಮಾರಾಟ, ಅನರ್ಹರಿಗೆ ಮತ್ತು ಕೃಷಿಕರಲ್ಲದವರಿಗೆ ಗೊಬ್ಬರ ಪೂರೈಸಿದ್ದು ಅಥವಾ ಅಕ್ರಮ ದಾಸ್ತಾನು ಮಾಡಿ, ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿದ್ದರೆ, ಅಂತವರ ವಿರುದ್ಧ ಎಫ್.ಐ.ಆರ್ ದಾಖಲಿಸಿ, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಮತ್ತು ಮಾರಾಟದ ಲೈಸನ್ಸ್ ರದ್ದು ಮಾಡಿ ಅಂಗಡಿ ಸೀಲ್ ಮಾಡುತ್ತೇನೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕಲಘಟಗಿ ತಹಶೀಲ್ದಾರ ಬಸವರಾಜ ಬೆಣ್ಣೆಶಿರೂರು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಪ್ರಭಾರಿ ಕೃಷಿ ಸಹಾಯಕ ನಿರ್ದೇಶಕ ಚನ್ನಪ್ಪ ಅಂಗಡಿ ಸೇರಿದಂತೆ ಇತರ ಅಧಿಕಾರಿಗಳು, ರೈತ ಮುಖಂಡರು, ರೈತರು, ಸಾರ್ವಜನಿಕರು ಇದ್ದರು.
WhatsApp Group Join Now
Telegram Group Join Now
Share This Article