ದೇಶದಲ್ಲೇ ಮಾದರಿ ಗಿಗ್ ನೀತಿ, ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೆ ತರುವ ಭರವಸೆ ನೀಡಿದ ಸಂತೋಷ್ ಲಾಡ್ ಅವರಿಗೆ ಮೆಚ್ಚುಗೆಗಳ‌ ಮಹಾಪೂರ

Hasiru Kranti
ದೇಶದಲ್ಲೇ ಮಾದರಿ ಗಿಗ್ ನೀತಿ, ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೆ ತರುವ ಭರವಸೆ ನೀಡಿದ ಸಂತೋಷ್ ಲಾಡ್ ಅವರಿಗೆ ಮೆಚ್ಚುಗೆಗಳ‌ ಮಹಾಪೂರ
WhatsApp Group Join Now
Telegram Group Join Now
ಬೆಂಗಳೂರು, :  ʼಕರ್ನಾಟಕ ವೇದಿಕೆ ಆಧಾರಿತ  ಗಿಗ್‌ ಕಾರ್ಮಿಕರ (ಸಾಮಾಜಿಕ  ಭದ್ರತೆ ಹಾಗೂ ಕ್ಷೇಮಾಭಿವೃದ್ಧಿ) ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ದೊರೆತಿದ್ದು, ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿಯ ಕ್ರಮದ ಸಾಕಾರದ ಶ್ರೇಯ ಲೋಕಸಭೆಯಲ್ಲಿನ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಗೆ ಸಲ್ಲಬೇಕು ಎಂದು ಕಾರ್ಮಿಕ ಸಚಿವ ಸಂತೋಷ್‌ ಹೇಳಿದ್ದಾರೆ.
ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ದೊರೆತ ಹಿನ್ನೆಲೆಯಲ್ಲಿ ಇಂದು ರಾಜಭವನದಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರನ್ನು ಗಿಗ್‌ ಕಾರ್ಮಿಕರೊಂದಿಗೆ ಭೇಟಿ ಮಾಡಿದ್ದ ಸಚಿವ ಲಾಡ್‌ ಅವರು ಧನ್ಯವಾದಗಳನ್ನು ತಿಳಿಸಿದ್ದರು.
ನಂತರ ಮಾತನಾಡಿದ್ದ ಸಚಿವ ಲಾಡ್‌ ಅವರು, ಕರ್ನಾಟಕ ಸರ್ಕಾರದ ಐತಿಹಾಸಿಕ ಗಿಗ್‌ ಕಾರ್ಮಿಕರ ಸುಗ್ರೀವಾಜ್ಞೆಗೆ ಅಂಕಿತ ದೊರೆತಿರುವುದು ತುಂಬ ಖುಷಿ ತಂದಿದೆ. ಗಿಗ್‌ ಕಾರ್ಮಿಕರ ಕಲ್ಯಾಣಕ್ಕೆ ಕಾಯ್ದೆ ರೂಪಿಸಬೇಕು ಎಂಬುದು ರಾಹುಲ್‌ ಗಾಂಧಿ ಅವರ ವಿಷನ್‌ ಆಗಿತ್ತು ಎಂದು ಹೇಳಿದ್ದರು.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಲಾಡ್‌ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದರು. ಇಂತಹ ಕಾಯ್ದೆ ಇಂದು ಜಾರಿಯಾಗುತ್ತಿದೆ, ಗಿಗ್‌ ಕಾರ್ಮಿಕರಿಗೆ ಪ್ರತ್ಯೇಕವಾದ ಮಂಡಳಿ ರಚನೆಗೆ  ಅವಕಾಶವಾಗಿರುವುದರ ಹಿಂದೆ ರಾಹುಲ್‌ ಗಾಂಧಿ ಅವರ ಸ್ಫೂರ್ತಿ ಅಡಗಿದೆ ಎಂದು ಹೇಳಿದ್ದಾರೆ.
ಭಾರತ್‌ ಜೋಡೊ ಯಾತ್ರೆ ವೇಳೆ ರಾಹುಲ್‌ ಗಾಂಧಿ ಅವರು ಗಿಗ್‌ ಕಾರ್ಮಿಕರ ಬಗ್ಗೆ ಪ್ರಸ್ತಾಪ ಮಾಡಿದ್ದೇ ಇಂದು ಇಂತಹ ಮಹತ್ವದ ಕಾಯ್ದೆ ರೂಪಿಸಲು ನಾಂದಿಯಾಗಿದೆ. ಆದ್ದರಿಂದ ಈ ಎಲ್ಲದರ ಶ್ರೇಯ ರಾಹುಲ್‌ ಗಾಂಧಿ ಅವರಿಗೆ ಸಲ್ಲಬೇಕು ಎಂದು ಲಾಡ್‌ ಅವರು ಪ್ರಶಂಸಿಸಿದ್ದಾರೆ.
ನಿಗದಿತ ಸಮಯದಲ್ಲಿ ಗ್ರಾಹಕರಿಗೆ ವಸ್ತುಗಳನ್ನು ತಲುಪಿಸಲು ಗಿಗ್ ಕಾರ್ಮಿಕರು ಧಾವಂತದಿಂದ ಗಾಡಿ ಓಡಿಸುತ್ತಾರೆ. ಅವರನ್ನು ನೋಡಿದಾಗಲೆಲ್ಲ, ಅವರಿಗಿರುವ ಒತ್ತಡ, ಅವಸರದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ, ಗಿಜಿಗುಡುವ ಟ್ರಾಫಿಕ್ಕುಗಳಲ್ಲಿ ವಾಹನಗಳ ಹೊಗೆ ಸೇವಿಸಿ ಅವರ ಆರೋಗ್ಯದ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ಯೋಚಿಸುತ್ತಿದ್ದೆ. ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ಗ್ರಾಹಕರಿಗೆ ಸೇವೆ ನೀಡಬೇಕು ಎಂಬ ಒಂದೇ ಒಂದು ಗುರಿಯಡೆಗೆ ಸಾಗುವ ಗಿಗ್‌ ಕಾರ್ಮಿಕರಿಗೆ ಮತ್ತೊಂದು ಅವಕಾಶ ಸಿಕ್ಕರೆ ಸಾಮಾಜಿಕ ಹಾಗೂ ಜೀವನ ಭದ್ರತೆ ನೀಡುವ ಯೋಜನೆ ರೂಪಿಸಬೇಕು ಅಂದುಕೊಳ್ಳುತ್ತಿದ್ದೆ ಎಂದು ಲಾಡ್‌ ಅವರು ಭಾವನಾತ್ಮಕವಾಗಿ ಹೇಳಿದ್ದಾರೆ.
ನಮ್ಮ ನಾಯಕ ಶ್ರೀ ರಾಹುಲ್ ಗಾಂಧಿ ಅವರ ಪ್ರೇರಣೆ ಈ ಗಿಗ್ ಕಾರ್ಮಿಕರ ಕಾಯ್ದೆ ರೂಪಿಸಿ,‌ ಮಂಡಳಿ ರಚಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಸಚಿವರು ನೆನಪಿಸಿಕೊಂಡಿದ್ದಾರೆ. ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಅವಕಾಶ ಕೊಟ್ಟ ಪಕ್ಷಕ್ಕೆ, ರಾಜ್ಯದ ಜನತೆಗೆ ಸಹ ಕೃತಜ್ಞತೆ ತಿಳಿಸಿದ್ದಾರೆ.
ಗಿಗ್‌ ಕಾರ್ಮಿಕರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರವು ರೂಪಿಸಿದ ಹೊಸ ಕಾರ್ಯಕ್ರಮಗಳ ಹಿಂದಿನ ಪ್ರೇರಣಾ ಶಕ್ತಿ ನೀವು, ಗಿಗ್‌ ಕಾರ್ಮಿಕರ ಕಾಳಜಿಯ ಬಗೆಗಿನ ನಿಮ್ಮ ಆಲೋಚನೆ ಸ್ಫೂರ್ತಿಯಾಗಿದೆ.  ಈ ಕಾರ್ಮಿಕರು ಎದುರಿಸುವ ಶೋಷಣೆ, ಸವಾಲು, ಅನಿಶ್ಚಿತತೆಗಳನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ನೀತಿಗಳನ್ನು ನಾವು ರೂಪಿಸಿದಾಗ ನಮ್ಮ ಪ್ರಯತ್ನಗಳಿಗೆ ನಿಮ್ಮ ಸಲಹೆ ಶಕ್ತಿ ನೀಡಿದೆ ಎಂದು ಲಾಡ್‌ ಅವರು ಹೇಳಿದ್ದಾರೆ.
ಕರ್ನಾಟಕದ ಸುಗ್ರೀವಾಜ್ಞೆಗೆ ರಾಹುಲ್‌ ಪ್ರಶಂಸೆ :ಕರ್ನಾಟಕ ಸರ್ಕಾರದ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ದೊರೆತ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ ಅವರು, ಗಿಗ್‌ ಕಾರ್ಮಿಕರಿಗೆ ಕರ್ನಾಟಕ ಹೊಸ ದಾರಿಯೊಂದನ್ನು ತೋರಿಸಿದೆ ಎಂದು  ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ.
ಕರ್ನಾಟಕ ಸರ್ಕಾರವು ಐತಿಹಾಸಿಕ ಕ್ರಮ ಕೈಗೊಂಡಿದೆ. ಇದರಿಂದ ಗಿಗ್‌ ಕಾರ್ಮಿಕರ ಹಕ್ಕುಗಳಿಗೆ ಗ್ಯಾರಂಟಿ ಸಿಕ್ಕಿದೆ. ಅವರ ಬದುಕಿಗೆ ರಕ್ಷಣೆ ದೊರೆತಿದೆ. ಆತ್ಮಗೌರವ ಬಂದಿದೆ ಎಂದು ಹೇಳಿದ್ದಾರೆ.
ಬಿಸಿಲು, ಚಳಿ ಮತ್ತು ಗಾಳಿಯನ್ನು ಲೆಕ್ಕಿಸದೆ ಗಿಗ್‌ ಕಾರ್ಮಿಕರು ಆಹಾರ ಮತ್ತು ಇತರ ಅಗತ್ಯ ಪದಾರ್ಥ ನಮಗೆ ಪೂರೈಸುತ್ತಾರೆ. ಅವರಿಗೆ ಕಾರಣ ನೀಡದೆ ಕೆಲಸದಿಂದ ತೆಗೆಯಲಾಗುತ್ತದೆ. ಆನಾರೋಗ್ಯವಾದರೆ ರಜೆ ಕೊಡುವುದಿಲ್ಲ, ವೇತನ ತಾರತಮ್ಯ ಮಾಡಲಾಗುತ್ತದೆ. ಆದರೆ ಇನ್ನು ಮುಂದೆ ಇವುಗಳಿಗೆ ಅವಕಾಶ ಇಲ್ಲ ಎಂದು ರಾಹುಲ್‌ ಗಾಂಧಿ ಅವರು ವಿವರಿಸಿದ್ದಾರೆ.
ರಾಜಸ್ಥಾನ ದಾರಿ ತೋರಿತ್ತು, ಕರ್ನಾಟಕ ಇದು ಜಾರಿ ಮಾಡಿದೆ ಇನ್ನು ಮುಂದಿನ ಸರದಿ ತೆಲಂಗಾಣ. ಇದು ನಮ್ಮ ವಿಷನ್‌. ಇದನ್ನು ನಾವು ಎಲ್ಲಾ ರಾಜ್ಯ ಮತ್ತು ದೇಶಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
WhatsApp Group Join Now
Telegram Group Join Now
Share This Article