ಧಾರವಾಡ : 27- ಬೆಣ್ಣಿ ಮತ್ತು ತುಪ್ಪರಿ ಹಳ್ಳದ ಅಂಚೆಯಲ್ಲಿರುವ ಗ್ರಾಮಗಳಲ್ಲಿ ರಾತ್ರಿ ವೇಳೆ ಪ್ರವಾಹ, ಅತಿವೃಷ್ಟಿಯಿಂದ ಆಗುವ ಹಾನಿ ತಪ್ಪಿಸಲು ಕ್ರಮ ವಹಿಸಬೇಕು ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿ, ಮಾತನಾಡಿದರು.
ತುಪ್ಪರಿ ಹಳ್ಳ ಮತ್ತು ಬೆಣ್ಣಿ ಹಳ್ಳ ಕೆಲವು ಭಾಗಗಳಲ್ಲಿ ತುಂಬಿ ಹರಿಯುತ್ತಿದ್ದು, ಯಾವ ಪ್ರಾಣ ಹಾನಿಯಾಗದಂತೆ ನೋಡಿಕೊಳ್ಳಬೇಕು. ಅದೇ ರೀತಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಹಾಗೂ ವಿದ್ಯುತ್ ತಂತಿಗಳು, ಕಂಬಗಳು ಬೀಳದ ಹಾಗೆ ಎಚ್ಚರವಹಿಸಿ ಯಾವುದೇ ಜೀವ ಹಾನಿ ಆಗದಂತೆ ನಿಗಾ ವಹಿಸಬೇಕು. ಹಾಗೂ ಕೋವಿಡ್ ಬಂದಿರುವುದರಿಂದ ಮುನ್ನೆಚ್ಚರಿಕೆ ವಹಿಸಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.
ಮುಂಗಾರು ಬಿತ್ತನೆ ಆರಂಭವಾಗಿದ್ದು, ರೈತರು ಹೊಲಗಳಿಗೆ ಹೋಗಲು ಕಾಲದಾರಿ, ಮಣ್ಣಿನ ರಸ್ತೆ ಸುಧಾರಿಸಬೇಕು. ತಕ್ಷಣ ದುರಸ್ತಿಗೆ ಕ್ರಮವಹಿಸಲು ಅವರು ತಿಳಿಸಿದರು.
ಎಲ್ಲ ಇಓಗಳು ತಮ್ಮ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಮಳೆಯಿಂದ ಮನೆಗಳಿಗೆ ನೀರು ನುಗ್ಗದಂತೆ ಅಗತ್ಯ ಕ್ರಮ ವಹಿಸಬೇಕು. ಶಾಲಾ ಕೊಠಡಿಗಳು ಸೋರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಚಿವರು ಹೇಳಿದರು.
ಪ್ರಸಕ್ತ ಸಾಲಿಗೆ ಸಮೀಕ್ಷೆ ಮಾಡಿದಾಗ ವಿವಿಧ ಶಾಲೆಗಳ ಸುಮಾರು 62 ಕೊಠಡಿಗಳು ಸೋರಿಕೆ ಆಗುತ್ತಿವೆ. ಇವುಗಳ ತುರ್ತು ದುರಸ್ತಿಗೆ ಕ್ರಮವಹಿಸಬೇಕು. ಶಾಲೆಗಳು ಆರಂಭವಾಗುವ ಪೂರ್ವದಲ್ಲಿ ಶಾಲಾ ಕೊಠಡಿಗಳು ರಿಪೇರಿ ಆಗಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ 1,622 ಅಂಗನವಾಡಿ ಕೇಂದ್ರಗಳಿವೆ. ಇವುಗಳಲ್ಲಿ 42 ಅಂಗನವಾಡಿಗಳು ದುರಸ್ತಿ ಆಗಬೇಕು. ಇಲಾಖೆಯ ಅನುದಾನದಲ್ಲಿ ಈ ಕುರಿತು ಕ್ರಮಕೈಗೊಳ್ಳುವಂತೆ ಸಚಿವರು ಹೇಳಿದರು.
ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರ ತೆರೆಯಲು ಸಮುದಾಯ ಭವನ, ಸರಕಾರಿ ಕಟ್ಟಡಗಳನ್ನು ಗುರುತಿಸಲಾಗಿದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರಿಕೆವಹಿಸಬೇಕು ಎಂದು ಅವರು ತಿಳಿಸಿದರು.
ಹೆಸ್ಕಾಂ ಅಧಿಕಾರಿಗಳು ವಿದ್ಯತ್ ತೊಂದರೆ ಆಗದಂತೆ ಎಚ್ಚರಿಕೆವಹಿಸಬೇಕು. ವಿದ್ಯತ್ ಕಂಬಗಳು ವಾಲದಂತೆ ಹಾಗೂ ಬಿಳದಂತೆ ಮುಂಜಾಗೃತೆ ವಹಿಸಬೇಕು ಎಂದು ಅವರು ಹೇಳಿದರು.
ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಅಗತ್ಯವಿರುವ ರಸಗೊಬ್ಬರ ಬೀಜ ಹಾಗೂ ಕಳೆ ನಿಯಂತ್ರಕ ಔಷಧಿಗಳನ್ನು ವಿತರಿಸಬೇಕು. ಪ್ರತಿ ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿಯನ್ನು ರೈತರಿಗೆ ನೀಡಬೇಕು. ಖಾಸಗಿ ಅಂಗಡಿಗಳು ನಿಯಮಾನುಸಾರ ಬೀಜ, ಗೊಬ್ಬರಗಳನ್ನು ಮಾರಾಟ ಮಾಡಬೇಕೆಂದು ಸಚಿವರು ನಿರ್ದೇಶಿಸಿದರು.
ಮಳೆಗಾಲದಲ್ಕಿ ಯಾವುದೇ ಜನ, ಜಾನುವಾರ ಜೀವ ಹಾನಿ ಆಗದಂತೆ ಎಚ್ಚರಿಕೆ ವಹಿಸಬೇಕು. ಎಲ್ಲ ಹಂತದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇದ್ದು ತಮ್ಮ ತಮ್ಮ ಕರ್ತವ್ಯ ನಿರ್ವಹಿಸಬೇಕು. ಕಾರ್ಯ ನಿರ್ವಹಣೆಯಲ್ಲಿ ನಿμÁ್ಕಳಜಿ ತೋರುವ ಅಧಿಕಾರಿ, ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಸಂತೋಷ ಲಾಡ್ ಅವರು ಎಚ್ಚರಿಸಿದರು.
ಈ ವರ್ಷ ಮಳೆಯೂ ಹೆಚ್ಚಾಗಿದೆ. ಜಿಲ್ಲೆಯಲ್ಲಿ 105 ಎಮ್‍ಎಮ್ ಮಳೆ ಆಗಬೇಕಾಗಿತ್ತು. ಆದರೆ ಈ ಬಾರಿ 217 ಎಮ್‍ಎಮ್ ಮಳೆ ಆಗಿದ್ದರಿಂದ ಕಲಘಟಗಿ, ಕುಂದಗೋಳ ಸೇರಿದಂತೆ ಕೆಲವು ತಾಲೂಕುಗಳಲ್ಲಿ ಅತಿ ಹೆಚ್ಚಾಗಿ ಮಳೆಯಾಗಿದ್ದು, ಜಾನುವಾರಗಳಿಗೆ ಮತ್ತು ಮನೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್ ಅವರು ಹೇಳಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಜಿಲ್ಲೆಯಲ್ಲಿ ಮೇ 22 ರಿಂದ ಸರಿಯುತ್ತಿರುವ ಅಕಾಲಿಕ ಮಳೆಯಿಂದ ಜಿಲ್ಲೆಯ ಕಲಘಟಗಿ ಮತ್ತು ಧಾರವಾಡ ಭಾಗಗಳಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಪೂರ್ವ ಮುಂಗಾರಿನಿಂದ ಧಾರವಾಡ ತಾಲೂಕು ಮತ್ತು ಕುಂದಗೋಳ ತಾಲೂಕಿನಲ್ಲಿ 2 ಜನ ಸಿಡಿಲು ಬಡಿದು ಸಾವನ್ನಪ್ಪಿದ್ದು, ಪರಿಹಾರ ಕೊಡಲಾಗಿದೆ ಎಂದು ಅವರು ಹೇಳಿದರು.
ಮೇ 26 ರವರೆಗೆ ನಾಲ್ಕು ಜಾನುವಾರುಗಳು ಸಾವನ್ನಪ್ಪಿದ್ದು, ಅದರಲ್ಲಿ ಕಲಘಟಗಿ ಎರಡು, ಧಾರವಾಡ ಒಂದು, ಅಣ್ಣಿಗೇರಿಯಲ್ಲಿ ಒಂದು ಜಾನುವಾರಗಳಿಗೆ ಪರಿಹಾರವಾಗಿ 37,500 ಪರಿಹಾರ ನೀಡಲಾಗಿದೆ. ಹಾಗೂ ಜಿಲ್ಲೆಯಲ್ಲಿ ಭಾಗಶಃ 20 ಮನೆಗಳು ಹಾನಿಯಾಗಿದ್ದು, ಹಾನಿಯಾದ ಮನೆಗಳಿಗೆ ರೂ. 6500 ಗಳ ಪರಿಹಾರವನ್ನು ನೀಡಲಾಗಿದೆ ಎಂದು ಹೇಳಿದರು.
ಈಗಾಗಲೇ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಉಂಟಾಗುವ ತುರ್ತು ಅವಘಡ ಹಾಗೂ ಪರಿಸ್ಥಿತಿಗಳನ್ನು ನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು
ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪೆÇಲೀಸ್ ಆಯುಕ್ತ ಎನ್. ಶಶಿಕುಮಾರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಪೋಲೀಸ್ ವರಿಷ್ಟಾಧಿಕಾರಿ ಡಾ.ಗೋಪಾಲ ಎಂ. ಬ್ಯಾಕೋಡ್, ಉಪ ಪೋಲೀಸ್ ಆಯುಕ್ತ ಮಾನಿಂಗ ನಂದಗಾವಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ. ರುದ್ರೇಶ ಘಾಳಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.