ಬೆಂಗಳೂರು:ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಜೊತೆಗೆ, ಎಚ್ಚರಿಕೆಯಿಂದ ಇರುವಂತೆ ಸಾರ್ವಜನಿಕರಲ್ಲೂ ಮನವಿ ಮಾಡಿದ್ದಾರೆ.
ಜಿಲ್ಲೆಯಾದ್ಯಂತ ಬಿಟ್ಟುಬಿಡದೆ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಮುಂದಿನ ಮೂರು ದಿನ ಕೂಡ ಬಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ಪ್ರವಾಸಿ ತಾಣಗಳಲ್ಲಿ, ನದಿ – ಸಮುದ್ರ ಪಾತ್ರಗಳಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಅಪಾಯಕಾರಿ ಸ್ಥಳಗಳಲ್ಲಿ ಪ್ರವಾಸಿಗರಿಗೆ ನಿಷೇಧ ಹೇರಬೇಕು ಎಂದು ಸಚಿವರು ತಿಳಿಸಿದ್ದಾರೆ.
ಸಮುದ್ರ ಹಾಗೂ ನದಿ ತಟದಲ್ಲಿ ವಾಸಿಸುತ್ತಿರುವ ಜನರನ್ನು ಅಗತ್ಯಬಿದ್ದರೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳಾಂತರಿಸಬೇಕು. ಜನರ ಅನುಕೂಲಕ್ಕಾಗಿ ಕಾಳಜಿ ಕೇಂದ್ರಗಳನ್ನು ತೆಗೆಯಬೇಕು, ಏಳು ತಾಲೂಕು ಜನರ ಅನುಕೂಲಕ್ಕಾಗಿ ದಿನ 24 ಗಂಟೆ ಸಹಾಯವಾಣಿ ಕಾರ್ಯನಿರ್ವಹಿಸಬೇಕು ಎಂದು ಸಚಿವೆ ಹೆಬ್ಬಾಳಕರ್ ತಿಳಿಸಿದ್ದಾರೆ.
ಸಾರ್ವಜನಿಕರು ಸಹ ಎಚ್ಚರಿಕೆ ವಹಿಸಬೇಕು, ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.