ಯತ್ರ ನಾರ್ಯಸ್ತು ಪೂಜ್ಯoತೇ, ರಮಂತೇ ತತ್ರ ದೇವತಾಃ ಅಂದರೆ ಎಲ್ಲಿ ಮಹಿಳೆಯರು ಗೌರವಿಸಲ್ಪಡುತ್ತಾರೋ , (ಎಲ್ಲಿ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ನೋಡಿಕೊಳ್ಳಲಾಗುತ್ತದೆಯೋ ) ಅಲ್ಲಿ ದೇವತೆಗಳು ನೆಲೆಸುತ್ತಾರಂತೆ. ಅಂದರೆ ಅಪರೋಕ್ಷವಾಗಿ ನಮ್ಮ ದೇಶ ಅಂಥದ್ದು. ನಮ್ಮ ದೇಶದಲ್ಲಿ ನಾರಿಯರನ್ನು ಗೌರವದಿಂದ ಕಾಣಲಾಗುತ್ತದೆ. ಆದ್ದರಿಂದ ನಮ್ಮ ದೇಶದಲ್ಲಿ ದೇವತೆಗಳು ನೆಲೆಸುತ್ತಾರೆ ಎಂದು ಹೇಳಿದಂತೆ. ಅಂಥ ದೇಶ ನಮ್ಮದು ಎಂದು ನಾವೆಲ್ಲ ಹೆಮ್ಮೆ ಪಡುತ್ತೇವೆ. ಲಕ್ಷ್ಮಿ- ನಾರಾಯಣ, ರಾಧಾ-ಕೃಷ್ಣ , ಸೀತಾ -ರಾಮ , ಗಿರಿಜಾ- ಶಂಕರ ಎಂಬ ಅನೇಕ ದೇವರ ನಾಮಗಳಲ್ಲಿ ಮೊದಲ ಆದ್ಯತೆ ಹೆಂಡತಿಯ ಹೆಸರಿಗೆ. ಇಂಥ ಈ ದೇಶದಲ್ಲಿ ಹುಟ್ಟಿ, ಸ್ವಂತದ ಯೋಗ್ಯತೆಯಿಂದ ಅಥವಾ ಪತಿಯ ಪ್ರಸಿದ್ಧಿಯಿಂದ ಪ್ರಸಿದ್ಧಿ ಪಡೆದ ಕೆಲ ಹೆಣ್ಣು ಮಕ್ಕಳ ಆಂತರ್ಯದ ಕಥೆ ಏನು? ಇವರೆಲ್ಲ ಪೂಜಿಸಲ್ಪಟ್ಟ ನಾರಿಯರೆ? ಎಂದು ಈಗ ಚಿಂತಿಸೋಣ.
ಅಥವಾ ಇದೆಲ್ಲ ತೋರಿಕೆಯ ಡಂಭಾಚಾರವೇ? ಭಾರತೀಯರ ಆಷಾಢಭೂತಿತನವೇ? ಭಾರತೀಯರು ಕಪಟಿಗಳೇ? ಹೇಳುವುದೊಂದು ಮಾಡುವುದೊಂದು ಇದೆ ನಮ್ಮ ನೀತಿಯೇ? ಹೆಣ್ಣು ಮಗು/ ಹುಡುಗೆ/ ಹೆಂಗಸು/ ವೃದ್ಧೆಯರ ಮೇಲೆ ನಿತ್ಯ ನಡೆಯುತ್ತಿರುವ ಬಲಾತ್ಕಾರಗಳು, ಕೊಲೆಗಳು, ಕೌಟುಂಬಿಕ ಅತ್ಯಾಚಾರಗಳು /ತಾರತಮ್ಯಗಳನ್ನು ನೋಡುತ್ತಲೇ, ಕೇಳುತ್ತಲೇ ಇದ್ದೇವೆ. ಆದರೂ ನಾರ್ಯಸ್ತು ಪೂಜ್ಯoತೇ ದೇಶ ನಮ್ಮದು ಆದ್ದರಿಂದ ದೇವತೆಗಳು ಇಲ್ಲಿ ಇರಲು ಇಚ್ಛಿಸುತ್ತಾರೆ ಎಂದು ಹೇಳುವದು ಎಷ್ಟು ಸಮಂಜಸ? ಅಥವಾ ಇದೆಲ್ಲ ನಮ್ಮ ಭಂಡ ಧೈರ್ಯ್ಯವೇ?..
ಇನ್ನೂ ನಮ್ಮಲ್ಲಿ ಅನೇಕ ಮಹಿಳೆಯರ ಹಾಗೂ ಪುರುಷರ ದೃಷ್ಟಿಯಲ್ಲಿ, ಹೊಸ್ತಿಲ ಒಳಗೆ ನಿಂತೋ, ಪರದೆಯ ಹಿಂದಿನಿಂದಲೋ ಮಾತನಾಡುವ ಹೆಣ್ಣು ಮಕ್ಕಳು ಕುಲೀನ ಸ್ತ್ರೀಯರು , ಪ್ಯಾಂಟು ಷರಟು ತೊಟ್ಟು ಕೂದಲು ಹಾರಿಸುತ್ತ ನಡೆಯುವ ಹೆಣ್ಣು ಮಕ್ಕಳು ನೀತಿಗೆಟ್ಟವರು ಎಂಬ ಭಾವನೆಯಿದೆ. ಅದರ ಜೊತೆಗೇ ತಮ್ಮ ಮನೆಯ ಹೆಣ್ಣು ಮಕ್ಕಳು ಗರತಿ ಗಂಗವ್ವರಂತಿರಬೇಕು. ಬೇರೆಯವರ ಮನೆಯ ಹೆಣ್ಣು ಮಕ್ಕಳು ಕಣ್ಣಿಗೆ ಹಬ್ಬವನ್ನುಂಟು ಮಾಡುವ ರಸಿಕತೆಯನ್ನು ಮೆರೆಸುವಂತೆ ಸಿಂಗರಿಸಿಕೊಳ್ಳಬೇಕು ಎಂಬ ಅಪೇಕ್ಷೆ ಅನೇಕರದು. .
ಈ ಚಿಂತನೆ ಬದಲಾಗಲೇ ಬೇಕು. ಇಂಥ ಬದಲಾವಣೆಯಿಂದ ಹೆಣ್ಣು ಮಕ್ಕಳಿಗೂ ಹಿತ. ಗಂಡು ಮಕ್ಕಳಿಗೂ ಹಿತ.. ದೇಶಕ್ಕೂ ಹಿತ.. ನಮ್ಮ ಬಗ್ಗೆ ನಮಗಿರುವ ಒಣ ಟೊಳ್ಳು ಪ್ರತಿಷ್ಠೆಯನ್ನು ನಾವು ಬಿಟ್ಟು ಕೊಡಬೇಕು. ನಾವು ಹೇಳಿದಂತೆ, ತೋರಿಸಿಕೊಳ್ಳುವಂತೆ ನಡೆದುಕೊಳ್ಳುತ್ತಿದ್ದೇವೆಯೇ ಎಂದು ಆತ್ಮ ಶೋಧನೆ ಮಾಡಿಕೊಳ್ಳಬೇಕು. ಇದೆಲ್ಲ ಆಗಬೇಕಾದರೆ ಪರಕಾಯ ಪ್ರವೇಶ ಮಾಡಿ, ಇಲ್ಲಿ ಹೇಳುವ ಕತೆಗಳ ನಾಯಕಿಯರು ತಾವಾಗಿ , ಆ ಹೆಣ್ಣುಮಕ್ಕಳ ದೃಷ್ಟಿಕೋನದಿಂದ ಅವರನ್ನು ನೋಡಬೇಕು. ಆಗ ಅವರ ಕುರಿತು ಒಂದಿಷ್ಟಾದರೂ ಚಿಂತಿಸುವಂತೆ ಆಗಬಹುದು. ಹಾಗೊಂದು ವೇಳೆ ಮಾಡಿದರೆ ನಮ್ಮಲ್ಲಿ ಎಷ್ಟೋ ಜನರ ಚಿಂತನೆಯಲ್ಲಿ ಬದಲಾವಣೆ ಆದೀತು ಎಂಬ ಆಶಯ ಈ ಲೇಖನದ್ದು. ಆ ರೀತಿ ಆದರೆ ಈ ಲೇಖನ ಬರೆದದ್ದು ಸಾರ್ಥಕವಾದೀತು.
• ಭಾರತಿ ತೊರಗಲ್ಲ
ಬೆಳಗಾವಿ
೯೪೮೧೫ ೨೧೧೫೦