ಬರ್ಲಿನ್, ಮೇ 23: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಬರ್ಲಿನ್‌ನಲ್ಲಿ ಜರ್ಮನ್ ವಿದೇಶಾಂಗ ಸಚಿವ ಜೋಹಾನ್ ವಾಡೆಫುಲ್ ಅವರೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಿದರು. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಭಾರತವು ಆಪರೇಷನ್ ಸಿಂಧೂರ್ ನಡೆಸಿದ ನಂತರ ಭಾರತವು ಅಂತಾರಾಷ್ಟ್ರೀಯ ಸಮುದಾಯವನ್ನು ತಲುಪಲು ಪ್ರಾರಂಭಿಸಿರುವ ಹಿನ್ನೆಲೆಯಲ್ಲಿ ಈ ಸಭೆ ನಡೆಸಲಾಗಿದೆ. ಸಚಿವ ಜೈಶಂಕರ್ ಅವರೊಂದಿಗೆ ಮಾತನಾಡಿದ ಜರ್ಮನ್ ವಿದೇಶಾಂಗ ಸಚಿವರು, ಭಯೋತ್ಪಾದನೆ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳುವ ಎಲ್ಲ ಹಕ್ಕನ್ನು ಭಾರತ ಹೊಂದಿದೆ ಎಂದು ಹೇಳಿದ್ದಾರೆ.
ಭಯೋತ್ಪಾದನೆ ವಿರುದ್ಧ ಭಾರತಕ್ಕೆ ಜರ್ಮನಿ ಬೆಂಬಲ; ಎಸ್. ಜೈಶಂಕರ್ , ಜೋಹಾನ್ ವಾಡೆಫುಲ್ ದ್ವಿಪಕ್ಷೀಯ ಚರ್ಚೆ

ಭಾರತದ ಆಪರೇಷನ್ ಸಿಂಧೂರ್ ಕುರಿತು ತಮ್ಮ ಹೇಳಿಕೆಯಲ್ಲಿ ಜರ್ಮನಿಯ ವಿದೇಶಾಂಗ ಸಚಿವರು, “ಭಯೋತ್ಪಾದನೆಯ ವಿರುದ್ಧದ ಯಾವುದೇ ಹೋರಾಟವನ್ನು ಜರ್ಮನಿ ಬೆಂಬಲಿಸುತ್ತದೆ. ಜಗತ್ತಿನಲ್ಲಿ ಎಲ್ಲಿಯೂ ಭಯೋತ್ಪಾದನೆಗೆ ಎಂದಿಗೂ ಸ್ಥಾನವಿರುವುದಿಲ್ಲ. ಅದಕ್ಕಾಗಿಯೇ ಭಯೋತ್ಪಾದನೆ ವಿರುದ್ಧ ಹೋರಾಡುವ ಮತ್ತು ಹೋರಾಡಬೇಕಾದ ಪ್ರತಿಯೊಬ್ಬರನ್ನು ನಾವು ಬೆಂಬಲಿಸುತ್ತೇವೆ” ಎಂದು ಹೇಳಿದ್ದಾರೆ.