ಯಾದಗಿರಿ, ಮೇ 22: ಇತ್ತೀಚೆಗೆ ನಗರದ ಜೈನ್ ಬಡಾವಣೆಯ ನಿವಾಸಿ ನಿಖಿತಾ ಎಂಬ ಯುವತಿ ಕೇವಲ ತನ್ನ 26ನೇ ವಯಸ್ಸಿಗೆ ಜೈನ ಮುನಿ ಆಗಿದ್ದರು. ಕೋಟ್ಯಾಧೀಶ್ವರರ ಮನೆಯಲ್ಲಿ ಬಾಯಿಯಲ್ಲಿ ಬಂಗಾರದ ಚಮಟ ಇಟ್ಟುಕೊಂಡು ಹುಟ್ಟಿ, ಬೆಳೆದಿದ್ದ ಯುವತಿ ಐಷಾರಾಮಿ ಜೀವನವನ್ನು ತ್ಯಜಿಸಿದ್ದರು. ಇದೀಗ ಇಂತಹದ್ದೆ ಮತ್ತೊಂದು ಘಟನೆ ನಡೆದಿದೆ. 100 ಕೋಟಿ ರೂ ಆಸ್ತಿ ಒಡೆಯ, ಮೂವರು ಹೆಣ್ಣು ಮಕ್ಕಳು ಮತ್ತು ಪತ್ನಿಯನ್ನು ಬಿಟ್ಟು ಇದೀಗ ಜೈನ ಮುನಿ ಆಗಲು ಹೊರಟಿದ್ದಾರೆ.
ಯಾದಗಿರಿ ತಾಲೂಕಿನ ಸೈದಾಪುರ ಪಟ್ಟಣದ ನಿವಾಸಿ ದಿಲೀಪ್ ಕುಮಾರ್ ದೋಖಾ ಎಂಬುವವರು ಜೈನ್ ದೀಕ್ಷೆ ಪಡೆದಿದ್ದಾರೆ. ಆ ಮೂಲಕ ಪತ್ನಿ ಮಕ್ಕಳನ್ನ ಬಿಟ್ಟು ಜೈನ ಮುನಿಯಾಗಲು ಹೊರಟಿದ್ದಾರೆ. ನೂರು ಕೋಟಿ ಆಸ್ತಿ ಐಷಾರಾಮಿ ಬಂಗಲೆ, ಕಾರು, ವ್ಯಾಮೋಹದ ಜೀವನ ತ್ಯಜಿಸಿ ಸನ್ಮಾರ್ಗದ ಕಡೆ ಪ್ರಯಾಣ ಬೆಳೆಸಿದ್ದಾರೆ.
ದಿಲೀಪ್ ಕುಮಾರ್ ದೋಖಾ ಅವರು ಕಳೆದ 12 ವರ್ಷಗಳಿಂದ ಅಮೆರಿಕಾದಲ್ಲಿ ಮೆಡಿಸಿನ್ ಉತ್ಪಾದನಾ ವ್ಯವಹಾರ ಮಾಡುತ್ತಿದ್ದರು. ಬೆಂಗಳೂರಿನಲ್ಲೂ ಆಸ್ತಿ ಹೊಂದಿದ್ದಾರೆ. ದಿಲೀಪ್ ಕುಮಾರ್ ದೋಖಾ ಅವರಿಗೆ ಮದುವೆ ಕೂಡ ಆಗಿದ್ದು, ಮೂರು ಹೆಣ್ಣು ಮಕ್ಕಳ ತಂದೆಯಾಗಿದ್ದಾರೆ. ಮಕ್ಕಳ ಮದುವೆ ಮಾಡಿ ಇದೀಗ ಪತ್ನಿಯನ್ನ ಒಬ್ಬೊಂಟಿಯಾಗಿ ಬಿಟ್ಟು ಜೈನ ಮುನಿ ಆಗಿ ಪರಿವರ್ತನೆ ಆಗಿದ್ದಾರೆ.