ಹುಕ್ಕೇರಿ : ಒಳಮೀಸಲಾತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಸಮೀಕ್ಷೆಯಲ್ಲಿ ಬಲಗೈ ಸಮುದಾಯಕ್ಕೆ ಸೇರಿರುವ ಛಲವಾದಿಗಳ ಪ್ರತಿ ವ್ಯಕ್ತಿ, ಕುಟುಂಬ ಸಮೀಕ್ಷೆಗೆ ಒಳಪಡಬೇಕು. ಹಾಗಾಗಿ ಈ ಸಮೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿ ಯಾವುದೇ ಒಂದೇ ಒಂದು ಕುಟುಂಬ ಸಹ ಹೊರ ಉಳಿಯದಂತೆ ಎಚ್ಚರ ವಹಿಸಬೇಕು ಎಂದು ಸಮಾಜದ ಹಿರಿಯ ಮುಖಂಡರೂ ಆದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ ಕಿವಿಮಾತು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ನಿರ್ಧರಿಸುವ ಈ ನಿರ್ಣಾಯಕ ಸಮೀಕ್ಷೆಯಲ್ಲಿ ಸಮಾಜದ ಮುಖಂಡರು ಮುತುವರ್ಜಿ ವಹಿಸಬೇಕು. ತಮ್ಮ ಎಲ್ಲ ಕೆಲಸಗಳನ್ನು ಬದಿಗೊತ್ತಿ ಸಮೀಕ್ಷೆಯಿಂದ ಯಾರೊಬ್ಬರೂ ಬಿಟ್ಟು ಹೋಗದಂತೆ ಶ್ರಮಿಸಬೇಕು ಎಂದು ಸಲಹೆ ಮಾಡಿದರು.
ಸಮಾಜ ಕಲ್ಯಾಣ ಇಲಾಖೆಯಿಂದ ಅಗತ್ಯ ಮಾಹಿತಿ ಸಂಗ್ರಹಿಸಿಕೊಂಡು ಗಣತಿದಾರರೊಂದಿಗೆ ಪ್ರತಿ ಹಳ್ಳಿ ಹಳ್ಳಿಗೆ ತೆರಳಿ ಮಹತ್ವಪೂರ್ಣವಾದ ಈ ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳಬೇಕು. ಈಗಾಗಲೇ ಈ ಸಮೀಕ್ಷೆ ಕಾಲಾವಧಿಯನ್ನು ವಿಸ್ತರಿಸಲಾಗಿದ್ದು ದುಡಿಯಲು ಬೇರೆಡೆ ಹೋಗಿರುವವರನ್ನು ಕರೆಯಿಸಿ ದತ್ತಾಂಶದಲ್ಲಿ ದಾಖಲಿಸಬೇಕು. ವೈಜ್ಞಾನಿಕ ಮಾಹಿತಿ ಸಂಗ್ರಹದಿಂದ ಪರಿಶಿಷ್ಟ ಜಾತಿಗಳ ಅಭಿವೃದ್ಧಿಗೆ ಮುನ್ನುಡಿಯಾಗಲಿದೆ ಎಂದು ಅವರು ಹೇಳಿದರು.
ಮುಖಂಡರಾದ ಬಸವರಾಜ ಕೋಳಿ, ಅಕ್ಷಯ ವೀರಮುಖ, ಕೆಂಪಣ್ಣಾ ಶಿರಹಟ್ಟಿ, ಶ್ರೀನಿವಾಸ ವ್ಯಾಪಾರಿ, ಲಗಮಣ್ಣಾ ಕಣಗಲಿ, ಸಂಜು ಜೀವಣ್ಣವರ, ಚಿದಾನಂದ ಹಿರೇಕೆಂಚನವರ, ಕಿರಣ ಬಾಗೇವಾಡಿ, ಮಂಜು ಪಡದಾರ, ಸತೀಶ ದಿನ್ನಿಮನಿ, ಪ್ರದೀಪ ಕಾಮಾನೆ, ಶಿವು ಕಣಗಲಿ, ಮಾರುತಿ ಚಿಕ್ಕೋಡಿ, ವಿದ್ಯಾದರ ರಾಣವ್ವಗೋಳ, ಕಿರಣ ಕೋಳಿ, ಸುಖದೇವ ತಳವಾರ, ಶಿವು ದೊಡಮನಿ, ಸುರೇಶ ಖಾತೇದಾರ, ರಾಜು ವೀರಮುಖ, ಶಿವು ಹುಕ್ಕೇರಿ ಮತ್ತಿತರರು ಉಪಸ್ಥಿತರಿದ್ದರು.
ಫೋಟೊ ಶೀರ್ಷಿಕೆ : ೨೧ಎಚ್‌ಯುಕೆ-೧
ಹುಕ್ಕೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮುಖಂಡ ಮಹಾವೀರ ಮೋಹಿತೆ, ಛಲವಾದಿ ಸಮಾಜದ ಮುಖಂಡರು ಭಾಗಿಯಾಗಿದ್ದರು.