ಬಳ್ಳಾರಿ. ಮೇ. 22: ಬಳ್ಳಾರಿ ಜಿಲ್ಲಾ ಮತ್ತು ತಾಲೂಕು ವ್ಯಾಪ್ತಿಯಲ್ಲಿ ಸ್ಥಾಪಿಸಲ್ಪಟ್ಟಿರುವ ಕೈಗಾರಿಕೆ ಮತ್ತು ಖಾಸಗಿ ಕಾರ್ಖಾನೆಗಳಲ್ಲಿ ಕನಿಷ್ಟ ಶೇಕಡ 70 ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ಅದರಲ್ಲೂ ಕನ್ನಡಿಗರಿಗೆ ನೀಡಬೇಕೆಂದು ಸುವರ್ಣ ಕರ್ನಾಟಕ ವೇದಿಕೆಯ ರಾಜ್ಯದ್ಯಕ್ಷರಾದ ನಾರಾಯಣಸ್ವಾಮಿ ಒತ್ತಾಯಿಸಿದರು.
ಈ ಕುರಿತು ಅವರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿ, ತಾಲೂಕಿನ
ಹಲಕುಂದಿ ಹರಗಿನಡೋಣಿ, ಜಾನೆಕುಂಟೆ, ವೇಣಿವೀರಾಪುರ, ಕುಡಿತಿನಿ, ತೋರಣಗಲ್ಲು, ಬೆಳಗಲ್ಲು,
ಸಿಡಿಗಿನಮೊಳ ಮತ್ತು ಜಿಲ್ಲೆಯ ಇತರ ಕಡೆಗಳಲ್ಲಿ ಖಾಸಗಿ ಕಾರ್ಖಾನೆಗಳಿದ್ದು, ಆ ಕಾರ್ಖಾನೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ
ಹೊರರಾಜ್ಯದಿಂದ ಬಂದವರಿಗೆ ಉದ್ಯೋಗವನ್ನು ನೀಡಿ ಸ್ಥಳೀಯರನ್ನು ಕಡೆಗಣಿಸಲಾಗಿದೆ.
ಆದರೆ ಈ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಸ್ಥಳೀಯರ ಸಂಖ್ಯೆ ಕನಿಷ್ಟ ಮಟ್ಟದಲ್ಲಿದ್ದು, ಹೊರ ರಾಜ್ಯದಿಂದ
ಬಂದು ಕೆಲಸ ಮಾಡುವವರ ಸಂಖ್ಯೆ ಗರಿಷ್ಟ ಮಟ್ಟದಲ್ಲಿರುತ್ತಾರೆ. ನೆಲ ನಮ್ಮದು, ಜಲ ನಮ್ಮದು, ಊರು
ನಮ್ಮದು ಕೇರಿ ನಮ್ಮದು ಆದರೆ ಇಲ್ಲಿ ಕೆಲಸಮಾಡುವವರು ಮಾತ್ರ ನಮ್ಮವರಲ್ಲ, ಇದೆಂಥ ದುರದೃಷ್ಟ ಕೂಡಲೇ ಕಾರ್ಖಾನೆಗಳು ಸ್ಥಳೀಯ ಕನ್ನಡಿಗರಿಗೆ
ಕಾರ್ಖಾನೆಯಲ್ಲಿ ಉದ್ಯೋಗ ನೀಡಬೇಕೆಂದು ಆಗ್ರಹಿಸಿದರು.
ಈ ಭಾಗದಲ್ಲಿ ಖಾಸಗಿ ಕಾರ್ಖಾನೆಗಳು ಮುಂದುವರಿಯಬೇಕಾದರೆ ಸ್ಥಳೀಯರಿಗೆ ಉದ್ಯೋಗ ಅವಕಾಶ
ನೀಡಲೇಬೇಕು, ಇಲ್ಲದಿದ್ದ ಪಕ್ಷದಲ್ಲಿ ಕಾರ್ಖಾನೆಗಳು ಬಳ್ಳಾರಿ ಜಿಲ್ಲೆ ಮತ್ತು ತಾಲೂಕನ್ನು ತೊರೆದು ಬೇರೆ ಕಡೆ ಸ್ಥಳಾಂತರಗೊಳ್ಳಲಿ ಎಂದು ಸುವರ್ಣ ಕರ್ನಾಟಕ ವೇದಿಕೆಯ ರಾಜ್ಯಾಧ್ಯಕ್ಷರ
ನಾರಾಯಣ ಸ್ವಾಮಿ .ಬಿ ಖಾಸಗಿ ಕಾರ್ಖಾನೆಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.
ಜಿಲ್ಲೆಯಾದ್ಯಂತ ಐ.ಟಿ.ಐ., ಡಿಪ್ಲೋಮ, ಇಂಜಿನಿಯರ್ ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿದ್ದಾರೆ ನಿರುದ್ಯೋಗಿಗಳು ಸಹ ಬಹಳಷ್ಟು ಜನರಿದ್ದಾರೆ ಅವರಿಗೆ ಕಾರ್ಖಾನೆಗಳಲ್ಲಿ ಉದ್ಯೋಗವನ್ನು ಕೊಡುವ ಮೂಲಕ ಸ್ಥಳೀಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಕಾರ್ಖಾನೆಗಳ ಮಾಲೀಕರಿಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷರು ಜಿಲ್ಲಾ ಪದಾಧಿಕಾರಿಗಳು ಇದ್ದರು