ಪರಿಶಿಷ್ಟ ಜಾತಿ ಉಪಯೋಜನೆ ಅಡಿಯಲ್ಲಿ ಸಿರಿಧಾನ್ಯ ಬೆಳೆಗಳ ಸುಧಾರಿತ ಬೇಸಾಯ ಕ್ರಮಗಳ ತರಬೇತಿ ಕಾರ್ಯಕ್ರಮ

Ravi Talawar
ಪರಿಶಿಷ್ಟ ಜಾತಿ ಉಪಯೋಜನೆ ಅಡಿಯಲ್ಲಿ ಸಿರಿಧಾನ್ಯ ಬೆಳೆಗಳ ಸುಧಾರಿತ ಬೇಸಾಯ ಕ್ರಮಗಳ ತರಬೇತಿ ಕಾರ್ಯಕ್ರಮ
WhatsApp Group Join Now
Telegram Group Join Now

ನೇಸರಗಿ: ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಹಾಗೂ ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ, ಹೈದರಾಬಾದ್ ಪರಿಶಿಷ್ಟ ಜಾತಿ ಉಪಯೋಜನೆಯಡಿಯಲ್ಲಿ ಸಿರಿಧಾನ್ಯ ಬೆಳೆಗಳ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ದಿನಾಂಕ ೨೦.೦೫.೨೦೨೫ ರಂದು ರಾಮದುರ್ಗ ತಾಲೂಕಿನ ಚನ್ನಾಪುರ ತಾಂಡಾದ ಶ್ರೀ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಂದಿಹಾಳ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಹನುಮಂತ ಬಾಳಪ್ಪ ದೇಸಾಯಿ ಇವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಮಂಜುನಾಥ ಚೌರಡ್ಡಿಯವರು ನೆರೆವೇರಿಸಿದರು. ಉದ್ಘಾಟನಾಪರ ಭಾಷಣದಲ್ಲಿ ಇವರು ಸಿರಿಧಾನ್ಯಗಳ ಪೌಷ್ಟಿಕತೆಯ ಮಹತ್ವ ಮತ್ತು ಔಷಧೀಯ ಗುಣಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಕಾರ್ಯಕ್ರಮದ ಪರಿಚಯದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಎಸ್. ಎಸ್. ಹಿರೇಮಠ ಕಾರ್ಯಕ್ರದಲ್ಲಿ ಪಾಲ್ಗೊಂಡ ಎಲ್ಲ ಗಣ್ಯರನ್ನು ಸ್ವಾಗತಿಸಿದರು. ಅದೇರೀತಿ ಶ್ರೀ ಜಿ. ಬಿ. ವಿಶ್ವನಾಥ ವಿಜ್ಞಾನಿ (ಬೇಸಾಯ ಶಾಸ್ತ್ರ) ಇವರು ಕಾರ್ಯಕ್ರಮ ಪರಿಚಯ ಮಾಡಿದರು. ಕೃಷಿ ವಿಶ್ವವಿದ್ಯಾಲಯ ಧಾರವಾಡದ ಅಖಿಲ ಭಾರತೀಯ ಸಮನ್ವಯ ಶೇಂಗಾ ಸಂಶೋಧನಾ ಯೋಜನೆಯ ಹಿರಿಯ ವಿಜ್ಞಾನಿ (ಬೇಸಾಯ ಶಾಸ್ತ್ರ) ಡಾ. ಬಸವರಾಜ ಏಣಗಿ, ಇವರು ಸಿರಿಧಾನ್ಯಗಳಾದ ಸಜ್ಜೆ, ಜೋಳ, ನವಣೆ, ಹರಗು, ಬರಗು, ಊದಲು, ಸಾವೆ, ರಾಗಿ ಮತ್ತು ಹಾರಕ ಬೆಳೆಗಳ ಸಮಗ್ರ ಬೇಸಾಯ ಕ್ರಮಗಳು, ತಳಿಗಳ ಆಯ್ಕೆ, ಗೊಬ್ಬರ ಬಳಕೆ, ನೀರು ಮತ್ತು ಪೀಡೆ ನಿರ್ವಹಣೆ ಹಾಗೂ ಕಟಾವು ಮಾಡುವ ವಿಧಾನ, ಮಹತ್ವ ಮತ್ತು ಮಾರುಕಟ್ಟೆ ಬಗ್ಗೆ ವಿಸ್ತಾರವಾಗಿ ವಿವರಿಸಿದರು.
ಕೃಷಿ ವಿಶ್ವವಿದ್ಯಾಲಯ, ಧಾರವಾಡದ ಮೇವು ಬೆಳೆಗಳ ಯೋಜನೆ, ಕ್ಷೇತ್ರ ವಿಭಾಗದ ಪ್ರಾಧ್ಯಾಪಕ ಡಾ. ನಾಗಪ್ಪ ಗೊರವನಕೊಪ್ಪ ಇವರು ಸಿರಿಧಾನ್ಯಗಳು, ತಳಿಗಳ ಮಾಹಿತಿ ಮತ್ತು ಮೌಲ್ಯವರ್ಧನೆ ಹಾಗೂ ಕಟಾವಿನ ನಂತರ ಕೈಗೊಳ್ಳಬಹುದಾದ ವಿವಿಧ ಚಟುವಟಿಕೆಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ನಂದಿಹಾಳ ಗ್ರಾಮ ಪಂಚಾಯತ ಸದಸ್ಯ ಶ್ರೀ ದಾನಪ್ಪ ಕೋಬಪ್ಪ ಲಮಾಣಿ ಹಾಗೂ ರಾಮದುರ್ಗ ಸಹಾಯಕ ಕೃಷಿ ನಿರ್ದೇಶಕ ಶ್ರೀ ಎಸ್. ಎಫ್. ಬೆಳವಟಿಗಿ ಉಪಸ್ಥಿತರಿದ್ದರು.
ರಾಮದುರ್ಗ ಕೃಷಿ ಇಲಾಖೆಯ, ಆತ್ಮ ಯೋಜನೆಯ ತಾಲೂಕ ತಾಂತ್ರಿಕ ವ್ಯವಸ್ಥಾಪಕ ಗೋವಿಂದರೆಡ್ಡಿ ಜಾಯನ್ನವರ ಇವರು ಬೀಜೋಪಚಾರದ ಮಹತ್ವ ಮತ್ತು ಬೀಜೋಪಚಾರದ ಪಾತ್ಯಕ್ಷಿಕೆಯನ್ನು ಮಾಡಿ ತೋರಿಸಿದರು.
ಚನ್ನಾಪುರ ಪ್ರಗತಿಪರ ರೈತ ಶಿವಪ್ಪ ಮುರಗೆಪ್ಪ ನೀಲಾಕರಿ ಇವರು ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿ ಕೈಗೊಳ್ಳುವ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಮೌಲ್ಯವರ್ಧಿ ಸಿರಿಧಾನ್ಯ ಆಹಾರ ಉತ್ಪನ್ನಗಳನ್ನು ಪ್ರದರ್ಶಿಸಲಾಗಿತ್ತು. ರೈತಮಹಿಳೆಯರು ಇದರ ಸದುಪಯೋಗ ಪಡೆದುಕೊಂಡರು. ಜೊತೆಗೆ ಸಿರಿಧಾನ್ಯಗಳ ಬೇಸಾಯ ಕ್ರಮಗಳು, ಮೌಲ್ಯವರ್ಧನೆ ಕುರಿತು ಕರಪತ್ರ/ಹಸ್ತ ಪತ್ರಿಕೆಗಳನ್ನು ರೈತರಿಗೆ ಮತ್ತು ರೈತಮಹಿಳೆಯರಿಗೆ ಬಿತ್ತಿರಿಸಲಾಯಿತು.
ಕಾರ್ಯಕ್ರಮದಲ್ಲಿ ೨೦೦ ಹೆಚ್ಚು ರೈತ ಮತ್ತು ರೈತಮಹಿಳೆಯರು ಪಾಲ್ಗೊಂಡಿದ್ದರು. ಕೊನೆಯಲ್ಲಿ ರಾಮದುರ್ಗ ಕೃಷಿ ಇಲಾಖೆ, ಆತ್ಮ ಯೋಜನೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ರವಿ ಲಮಾಣಿ ವಂದಿಸಿದರು. ಕಾರ್ಯಕ್ರಮವನ್ನು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಳಿಸಲಾಯಿತು.

WhatsApp Group Join Now
Telegram Group Join Now
Share This Article