*ಮೂರು ದಿನ ಆರೆಂಜ್ ಅಲರ್ಟ್
*ವಿವಿಧ ಇಲಾಖೆಗಳ ಸಮನ್ವಯದಲ್ಲಿ ಶೀಘ್ರ ಸ್ಪಂದನೆ
* ಅಪಾಯವಿರುವ ಸೇತುವೆಗಳಲ್ಲಿ ಟೋ, ಸೆಲ್ಫಿಗಳನ್ನು ತೆಗೆಯದಂತೆ ಮುನ್ನೆಚ್ಚರಿಕೆ ವಹಿಸಿ
* ಸಾರ್ವಜನಿಕ ಅನಕೂಲಕ್ಕಾಗಿ ಸಹಾಯವಾಣಿ
* ವಿದ್ಯುತ್ ತಂತಿಗಳ ಮೇಲೆ ಹರಡಿರುವ ಮರಗಳ ಕೊಂಬೆಗಳ ಕಟಾವಣೆ
* ಜಿಲ್ಲೆಯಲ್ಲಿರುವ ದುರ್ಬಲ ಸೇತುವೆಗಳು ಮತ್ತು ರಸ್ತೆಗಳು ಹಾಗೂ ಕೆರೆಗಳ ಸುರಕ್ಷತೆ
* ಶಿಥಿಲವಾಗಿರುವ ಅಂಗನವಾಡಿ ಕಟ್ಟಡಗಳ ಮತ್ತು ಶಾಲಾ, ಕಾಲೇಜು ಕಟ್ಟಡಗಳ ದುರಸ್ತಿ
* ಅಕಾಲಿಕ ಮಳೆ, ಅತಿವೃಷ್ಠಿಯಿಂದ ಹಾನಿ ತಡೆಯಲು ಮುಂಜಾಗ್ರತಾ ಕ್ರಮ:ಜಿಲ್ಲಾಧಿಕಾರಿ ದಿವ್ಯ ಪ್ರಭು
ಧಾರವಾಡ 20- ರಾಜ್ಯ ಹವಾಮಾನ ಇಲಾಖೆಯ ವರದಿಯಂತೆ, ಧಾರವಾಡ ಜಿಲ್ಲೆಯಲ್ಲಿ (ಮೇ 20, 21 ಮತ್ತು 22) ಮೂರು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಇದರಿಂದ ಧಾರವಾಡ ಜಿಲ್ಲೆಯಲ್ಲಿ ಭಾರಿ ಮಳೆ, ಪ್ರವಾಹದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಎಲ್ಲ ಕ್ಷೇತ್ರ ಹಾಗೂ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳು ಅನುಮತಿ ಪಡೆಯದೆ ರಜೆ ಹಾಗೂ ಕೇಂದ್ರ ಸ್ಥಾನ ಬಿಡದಂತೆ ಆದೇಶಿಸಲಾಗಿದೆ. ಅಕಾಲಿಕ ಮಳೆ ಹಾಗೂ ಅತಿವೃಷ್ಠಿಯಿಂದ ಆಗಬಹುದಾದ ಹಾನಿಗಳನ್ನು ತಡೆಯಲು ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಇದ್ದು, ಶೀಘ್ರವಾಗಿ ಸಾರ್ವಜನಿಕರಿಗೆ ಸ್ಪಂದಿಸಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯರೊಂದಿಗೆ ವಿಡಿಯೋ ಸಂವಾದದ ಮೂಲಕ ತುರ್ತು ಸಭೆ ಜರುಗಿಸಿ, ಮಾತನಾಡಿದರು.
ರಾಜ್ಯ ಹವಾಮಾನ ಇಲಾಖೆಯು ಮುಂದಿನ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಹಿತ ಹೆಚ್ಚು ಮಳೆ ಬಿಳುವ ಮಾಹಿತಿ ನೀಡಿದೆ. ಮತ್ತು ವೇಗದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತವು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಗ್ರಾಮ, ತಾಲೂಕಾ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಲಭ್ಯವಿದ್ದು, ಅಗತ್ಯವಿದ್ದಲ್ಲಿ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಈಗಾಗಲೇ ಸಂಭಾವ್ಯ ಹಾನಿಗಳ ಕುರಿತು ಮಾಹಿತಿ ನೀಡಲಾಗಿದೆ. ಗ್ರಾಮ ಮಟ್ಟದ ವಿಪತ್ತು ನಿರ್ವಹಣಾ ಸಮಿತಿಗಳನ್ನು ಸಕ್ರಿಯಗೊಳಿಸಿ, ಸ್ಥಳೀಯ ಸಾರ್ವಜನಿಕರ ಸಹಕಾರದಲ್ಲಿ ಯಾವುದೇ ರೀತಿಯ ಹಾನಿಯಾಗದಂತೆ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳಗಳ ಅಚ್ಚುಕಟ್ಟು ಪ್ರದೇಶದಲ್ಲಿ ವಾಸಿಸುವ ಸಾರ್ವಜನಿಕರಿಗೆ ಸೂಕ್ತ ಮಾಹಿತಿಯನ್ನು ನೀಡಿ, ಮಳೆ ಹೆಚ್ಚಾದಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಬೇಕು ಹಾಗೂ ಗ್ರಾಮ ಪಂಚಾಯತ ವಿಪತ್ತು ನಿರ್ವಹಣಾ ತಂಡದಿಂದ ಪ್ರವಾಹದ ಕುರಿತು ಗ್ರಾಮಗಳಲ್ಲಿ ಡಂಗುರ ಸಾರುವುದು ಹಾಗೂ ವಾಹನಗಳಲ್ಲಿ ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಮತ್ತು ಜಿಲ್ಲಾ ಮಟ್ಟದಲ್ಲಿ ಮತ್ತು ತಾಲ್ಲೂಕು ಮಟ್ಟಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
*ಮುನ್ನೆಚ್ಚರಿಕೆಯ ಕ್ರಮಗಳು:* ಮಳೆಯಾಗುವ ಸಂದರ್ಭದಲ್ಲಿ, ಗುಡುಗು-ಸಿಡಿಲಿನಿಂದಾಗುವ ಅಹಿತಕರ ಘಟನೆಗಳನ್ನು ತಪ್ಪಿಸಲು ಸಾರ್ವಜನಿಕರು ಮನೆಯಲ್ಲಿಯೇ ಇರಲು ಅಥವಾ ಸುರಕ್ಷಿತ ಸ್ಥಳಗಳಲ್ಲಿ ಇರುವುದು ಸೂಕ್ತ. ಮಳೆಯಾಗುವ ಸಂದರ್ಭದಲ್ಲಿ ನದಿ, ಹಳ್ಳ, ಕೆರೆ ದಡದಲ್ಲಿ ಬಟ್ಟೆ ತೊಳೆಯುವುದು, ಈಜಾಡುವುದು, ಧನ ಕರುಗಳನ್ನು ಮೆಹಿಸುವುದು ಹಾಗೂ ಅಪಾಯವಿರುವ ಸೇತುವೆಗಳಲ್ಲಿ ಸಂಚರಿಸುವುದು ಮತ್ತು ಇತರೆ ಚಟುವಟಿಕೆ ನಡೆಸದಂತೆ ಅಧಿಕಾರಿಗಳು ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಭಾರಿ ಮಳೆ, ಪ್ರವಾಹ ಸಂದರ್ಭದಲ್ಲಿ ತಗ್ಗು ಪ್ರದೇಶದಲ್ಲಿ ವಾಸವಿದ್ದರೆ, ಸುರಕ್ಷತೆ ಇರುವ ಸ್ಥಳಗಳಿಗೆ ತೆರಳುವುದು, ಯುವಕರು ಮತ್ತು ಸಾರ್ವಜನಿಕರು ನದಿ, ಹಳ್ಳದ, ಕೆರೆ ದಡಗಳಲ್ಲಿ ಅಪಾಯವಿರುವ ಸೇತುವೆಗಳಲ್ಲಿ ಪೆÇೀಟೋ, ಸೆಲ್ಫಿಗಳನ್ನು ತೆಗೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು.
ನಿರಂತರ ಮಳೆಯಿಂದ ಅಪಾಯವಿರುವ ಮನೆ, ಗೋಡೆ ಇತರೆ ಕಟ್ಟಡಗಳು ಕುಸಿಯುವ ಅಪಾಯವಿರುತ್ತದೆ. ಇದರಿಂದ ಸಾವು ನೋವುಗಳು ಸಂಭವಿಸುವ ಸಂದರ್ಭವಿರುವುದರಿಂದ ಸಾರ್ವಜನಿಕರಿಗೆ ಸುರಕ್ಷತೆಯ ದೃಷ್ಠಿಯಿಂದ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಲು ಸಾರ್ವಜನಿಕವಾಗಿ ಮಾಹಿತಿ, ನಿರ್ದೇಶನ ನೀಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಾರ್ವಜನಿಕ ಅನಕೂಲಕ್ಕಾಗಿ ಸಹಾಯವಾಣಿಗಳನ್ನು ತೆರೆಯಲಾಗಿದ್ದು, ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ 0836-2445508 ಅಥವಾ 1077 ನಂಬರಿಗೆ ಸಂಪರ್ಕಿಸಬಹುದು. ರಾಜ್ಯ, ಜಿಲ್ಲಾಡಳಿತ, ತಾಲೂಕಾಡಳಿತದಿಂದ ಕಾಲಕಾಲಕ್ಕೆ ನೀಡುವ ಹವಾಮಾನದ ಮುನ್ನೆಚ್ಚರಿಕೆಯನ್ನು ಸಾರ್ವಾಜನಿಕರು ಪಾಲಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಪ್ರವಾಹ ಪೀಡಿತ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮ: ಧಾರವಾಡ ಜಿಲ್ಲೆಯಲ್ಲಿ ಪ್ರವಾಹಕ್ಕೆ ಒಳಪಡುವ 56 ಗ್ರಾಮಗಳ ತಾಲ್ಲೂಕಿಗೆ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳು ಮಳೆಯಾಗುವ ಪ್ರದೇಶದ (ಅಚಿಣಛಿhmeಟಿಣ ಂಡಿeಚಿ) ಕುರಿತು ಮುಂಚಿತವಾಗಿ ತಿಳಿದುಕೊಂಡು ಭಾರಿ ಮಳೆಯಿಂದ ಹಳ್ಳಕ್ಕೆ ಹರಿದು ಬರುವ ನೀರಿನ ಹರಿವಿನ ಪ್ರಮಾಣ ಹಾಗೂ ನೆರೆಯಿಂದ ತೊಂದರೆಗೊಳಗಾಗುವ ಗ್ರಾಮಗಳಲ್ಲಿ ಜನ-ಜಾನುವಾರುಗಳ ಸಂಖ್ಯೆ ಇತ್ಯಾದಿಗಳ ಕುರಿತಂತೆ ಮೊದಲೇ ಮಾಹಿತಿ ತಿಳಿದುಕೊಂಡಿರಬೇಕು.
ಪ್ರವಾಹ ಬಂದ ಸಂದರ್ಭದಲ್ಲಿ ಜನ-ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಮುನ್ನೆಚ್ಚರಿಕಾ ಕ್ರಮವಾಗಿ ಕಾಳಜಿ ಕೇಂದ್ರಗಳನ್ನು ಹಾಗೂ ಗೋಶಾಲೆಗಳನ್ನು ತೆರೆಯಲು ಸೂಕ್ತ ಕಟ್ಟಡ, ಸ್ಥಳನ್ನು ಗುರುತಿಸಬೇಕು. ನೋಡಲ್ ಅಧಿಕಾರಿಗಳನ್ನು ನೇಮಿಸುವುದು ಹಾಗೂ ಪ್ರವಾಹ ಪೀಡಿತ ಗ್ರಾಮಗಳ ಗ್ರಾಮ ಮಟ್ಟದ ವಿಪತ್ತು ನಿರ್ವಹಣಾ ಯೋಜನೆಯನ್ನು ತಯಾರಿಸಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಗುಡುಗು-ಮಿಂಚು ಬಗ್ಗೆ ಜಾಗೃತಿ: ಪ್ರತಿ ವರ್ಷ ಗುಡುಗು, ಸಿಡಿಲು, ಮಿಂಚಿನಿಂದ ರೈತರು, ಧನ-ಕುರಿ ಕಾಯುವವರು ಹಾಗೂ ಹೊಲ-ಗದ್ದೆಗಳಲ್ಲಿ ಕೆಲಸ ಮಾಡುವ ಬಡ ಕೂಲಿ ಕಾರ್ಮಿಕರು ಮೃತಪಟ್ಟ ಪ್ರಕರಣಗಳು ಕಂಡುಬರುತ್ತಿವೆ. ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಸಂಬಂಧಿಸಿದ ಇಲಾಖೆಗಳಿಗೆ ಸಾರ್ವಜನಿಕ ಜಾಗೃತಿಗಾಗಿ ವಾಲ್ಪೆÇೀಸ್ಟರ್, ವಿಡಿಯೋ ಮತ್ತು ಆಡಿಯೋ ಕ್ಲಿಪ್ಗಳನ್ನು ನೀಡಲಾಗಿದ್ದು, ಈ ಮೂಲಕ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ, ಬಸ್ ನಿಲ್ದಾಣಗಳಲ್ಲಿ, ಗ್ರಾಮ ಪಂಚಾಯತ ಮಟ್ಟದಲ್ಲಿ ಹಾಗೂ ಸಾರ್ವಜನಿಕರ ಸ್ಥಳಗಳಲ್ಲಿ ಜಾಗೃತಿ ಮೂಡಿಸಬೇಕು. ನಗರ, ಪಟ್ಟಣ ಮತ್ತು ಗ್ರಾಮಗಳಲ್ಲಿ ಡಂಗುರ ಸಾರುವುದು ಹಾಗೂ ಕಸ ನಿರ್ವಹಣೆ ವಾಹನಗಳಲ್ಲಿ ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿಗಳು ಹೇಳಿದರು.
ವಿದ್ಯುತ್ ತಂತಿಗಳ ಮೇಲೆ ಹರಡಿರುವ ಮರಗಳ ಕೊಂಬೆಗಳ ಕಟಾವಣೆ: ಮಳೆಗಾಲದಲ್ಲಿ ಮಳೆ-ಗಾಳಿಗೆ ವಿದ್ಯುತ್ ಕಂಬಗಳಿಗೆ ಹಾಗೂ ತಂತಿಗಳಿಗೆ ಹೆಚ್ಚಿನ ಹಾನಿಯಾಗುವ ಸಂಭವವಿರುವುದರಿಂದ ಕಂಬಗಳು ಸುರಕ್ಷಿತವಾಗಿರುವ ಕುರಿತು ಹಾಗೂ ಯಾವುದೇ ತಂತಿಗಳು ತುಂಡಾಗದೇ ಇರುವ ಕುರಿತು ಸಂಬಂಧಿಸಿದ ವಿದ್ಯುತ್ ಪ್ರಸರಣ ವಿಭಾಗದ ಅಭಿಯಂತರರು ಪರಿಶೀಲನೆ ಮಾಡಿಕೊಂಡು ಸರಿಯಿರುವ ಕುರಿತು ದೃಢಪಡಿಸಿಕೊಳ್ಳಬೇಕು. ಏನಾದರೂ ದುರಸ್ತಿಗಳು ಇದ್ದದ್ದು ಕಂಡುಬಂದಲ್ಲಿ ಅಂತಹವುಗಳನ್ನು ಕೂಡಲೇ ದುರಸ್ತಿ ಮಾಡಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಯಾವುದೇ ಗಿಡಗಳ ರೆಂಬೆ-ಕೊಂಬೆಗಳು ವಿದ್ಯುತ್ ತಂತಿ ಅಥವಾ ಕಂಬಗಳ ಮೇಲೆ ಹರಡಿರುವುದು ಕಂಡು ಬಂದಲ್ಲಿ, ಪರಿಶೀಲಿಸಿ, ನಿಯಮಾನುಸಾರ ಗಿಡದ ರೆಂಬೆ-ಕೊಂಬೆಗಳನ್ನು ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲು ಅವರು ಹೇಳಿದರು.
ನಗರ, ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆ ಬದಿಯಲ್ಲಿರುವ ಯಾವುದೇ ಮರ-ಗಿಡಗಳ ಬೇರುಗಳು ಸಡಿಲಗೊಂಡಿದ್ದರೆ, ಮರಗಳ ಕೊಂಬೆಗಳು ಬೀಳುವ ಸ್ಥಿತಿಯಲ್ಲಿದ್ದರೆ ಅಥವಾ ಒಣಗಿದ ಗಿಡ-ಮರಗಳು ಕಂಡು ಬಂದಲ್ಲಿ ಅಂತಹವುಗಳನ್ನು ತೆರವುಗೊಳಿಸಬೇಕು. ಯಾವುದೇ ಗಿಡಗಳ ರೆಂಬೆಗಳು ಹೆಚ್ಚು ರಸ್ತೆಗೆ, ವಿದ್ಯುತ್ ಕಂಬಗಳಿಗೆ ಮನೆ-ಕಟ್ಟಡಗಳ ಮೇಲ್ಮಾವಣಿಯವರೆಗೆ ಬೆಳೆದಿದ್ದರೆ ಅಂತಹವುಗಳನ್ನು ಸಹ ಗುರುತಿಸಿ ತೆರವುಗೊಳಿಸಲು ಸೂಕ್ತ ಕ್ರಮವಹಿಸಬೇಕೆಂದು ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಅರಣ್ಯ ಇಲಾಖೆಗೆ ಅವರು ಸೂಚಿಸಿದರು.
ಶಿಥಿಲವಾಗಿರುವ ಅಂಗನವಾಡಿ ಕಟ್ಟಡಗಳ ಮತ್ತು ಶಾಲಾ, ಕಾಲೇಜು ಕಟ್ಟಡಗಳ ದುರಸ್ತಿ: ಪ್ರಸ್ತುತ ಹವಾಮಾನ ಬದಲಾಗುತ್ತಿರುವುದರಿಂದ ಹಾಗೂ ಸನ್ 2025-26 ನೇಸಾಲಿಗೆ ಸಂಬಂಧಿಸಿದಂತೆ, ಶಾಲೆಗಳು ಮೇ-29 ರಿಂದ ಪ್ರಾರಂಭವಾಗುತ್ತಿದ್ದು, ಸರ್ಕಾರಿ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಕಾಲೇಜು ಕಟ್ಟಡ ಹಾಗೂ ಕೊಠಡಿಗಳು ಸುಸ್ಥಿತಿಯಲ್ಲಿರುವ ಕುರಿತು ಮುಂಚಿತವಾಗಿ ಪರಿಶೀಲಿಸಿ, ವರದಿ ನೀಡಬೇಕು.
ತಹಶೀಲ್ದಾರರು, ತಾಲ್ಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು, ಎಲ್ಲ ತಾಲ್ಲೂಕುಗಳಲ್ಲಿರುವ ಸರ್ಕಾರಿ ಅಂಗನವಾಡಿ, ಶಾಲೆಗಳು, ಹಾಗೂ ಕಾಲೇಜು ಕಟ್ಟಡಗಳು ಸೋರುತ್ತಿರುವ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿಯಾಗಿ ಪರಿಶೀಲಿಸಿ, ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಅಂಗನವಾಡಿ, ಶಾಲಾ ಮತ್ತು ಕಾಲೇಜು ಕಟ್ಟಡಗಳ ದುರಸ್ತಿ ಕಾರ್ಯ ತುರ್ತು ಕೆಲಸ ಅಂತಾ ಭಾವಿಸಿ ಮುನ್ನಚರಿಕೆಯಿಂದ ನೈರುತ್ಯ ಮಾನ್ಸೂನ್(ಮಳೆಗಾಲ) ಆರಂಭಕ್ಕಿಂತ ಪೂರ್ವದಲ್ಲಿಯೇ ಇಲಾಖಾ ಅನುದಾನದಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 251 ಅಂಗನವಾಡಿ ಕಟ್ಟಡಗಳಿದ್ದು, ಅವುಗಳಲ್ಲಿ ಕೆಲವು ಸಣ್ಣಪುಟ್ಟ ದುರಸ್ತಿಯಿರುವ ಕಟ್ಟಡಗಳಿದ್ದು, ಅವುಗಳಿಗಾಗಿ ಈಗಾಗಲೇ ಅನುದಾನವು ಮಂಜೂರು ಆಗಿದ್ದು. ದುರಸ್ಥಿ ಕಾರ್ಯ ನಡೆದಿರುವುದಾಗಿ ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮಾತನಾಡಿ, ಬೇಸಿಗೆ ರಜೆ ಮುಗಿಸಿ ಕಾಲೇಜು ಪ್ರಾರಂಭವಾಗುತ್ತಿದ್ದು, ಕಾಲೇಜು ಕಟ್ಟಡಗಳು ಸುಸ್ಥಿತಿಯಲ್ಲಿರುವ ಕುರಿತು ಪರಿಶೀಲಿಸಿ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿರುವ ದುರ್ಬಲ ಸೇತುವೆಗಳು ಮತ್ತು ರಸ್ತೆಗಳು ಹಾಗೂ ಕೆರೆಗಳ ಸುರಕ್ಷತೆ: ಧಾರವಾಡ ಜಿಲ್ಲೆಯ ಮುಂಗಾರು ಅವಧಿಯಲ್ಲಿ ಭಾರಿ ಮಳೆಯಿಂದ ಕೆರೆಗಳು ಭರ್ತಿಯಾಗಿ ಹೆಚ್ಚುವರಿ ನೀರಿನಿಂದ ಉಂಟಾಗುವ ಪ್ರವಾಹ ಎದುರಿಸುವ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ವಹಿಸುವುದು ಹಾಗೂ ಜಿಲ್ಲೆಯಲ್ಲಿರುವ ದುರ್ಬಲ ಸೇತುವೆಗಳು ಮತ್ತು ರಸ್ತೆಗಳು ಹಾಗೂ ಭಾರಿ ಮಳೆಯಾದರೆ ಕುಸಿದು ಹೋಗುವಂತಹ ಸೇತುವೆಗಳನ್ನು ಸಂಬಂಧಿಸಿದ ಇಲಾಖೆಗಳು ಗುರುತಿಸುವಂತೆ ಹಾಗೂ ದುರ್ಬಲ ಇರುವ ಸೇತುವೆಗಳ ದುರಸ್ತಿಗಾಗಿ ತಗಲುವ ಅಂದಾಜನ್ನು ಕೂಡಲೇ ತಯಾರಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಿದರು.
ಹೆಚ್ಚಿನ ಮಳೆಯಿಂದ ನದಿ, ಹಳ್ಳ, ಕಾಲುವೆಗಳ ನೀರಿನ ಹರಿವು ಹೆಚ್ಚಾಗುತ್ತವೆ ಹಾಗೂ ಎಲ್ಲ ಕೆರೆಗಳು ಸಹಿತ ಕೂಡಲೇ ಭರ್ತಿಯಾಗುವ ಸಂಭವವಿರುತ್ತದೆ. ತುಂಬಿದ ಕೆರೆಗಳಲ್ಲಿ ಯುವಕರು ಹಾಗೂ ಮಕ್ಕಳು ಈಜಲು ಮತ್ತು ದನ-ಕರುಗಳ ಮೈ ತೊಳೆಯಲು ಹೋಗಿ ಜನ-ಜಾನುವಾರು ಸಾವು-ನೋವುಗಳನ್ನು ಸಂಭವಿಸುವ ಸಾಧ್ಯತೆ ಇರುತ್ತದೆ.
ಆದ್ದರಿಂದ ಸಂಬಂಧಿಸಿದ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ಹೆಚ್ಚಿನ ನೀರು ಸಂಗ್ರಹವಾಗಿರುವ ಕೆರೆ-ಕಟ್ಟೆಗಳ ನೀರಿನಲ್ಲಿ ಸಾರ್ವಜನಿಕರು ಇಳಿಯದಂತೆ, ಈಜಾಡದಂತೆ, ಜಾನುವಾರುಗಳ ಮೈ ತೊಳೆಯದಂತೆ ಮತ್ತು ಬಟ್ಟೆಗಳನ್ನು ತೊಳೆಯಲು ಹೋಗದಂತೆ ಸೂಕ್ತ ಸೂಚನಾ ಫಲಕಗಳನ್ನು ಅಳವಡಿಸುವುದು ಹಾಗೂ ಈ ಬಗ್ಗೆ ಗ್ರಾಮ ಪ್ರದೇಶಗಳಲ್ಲಿ ಡಂಗುರ ಸಾರಿಸುವ ಮುಖಾಂತರ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕು ಎಂದು ಸೂಚಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಅವರು ಮಳೆ ಪ್ರಮಾಣ ಕುರಿತು ಮಾತನಾಡಿ, ಪ್ರಸಕ್ತ ಸಾಲಿನ ಮುಂಗಾರು ಪೂರ್ವ ಹಂಗಾಮಿನಲ್ಲಿ ವಾಡಿಕೆ ಮಳೆ 84.0 ಮೀ.ಮೀ ಆಗಬೇಕಾಗಿದ್ದು, ವಾಸ್ತಾವ 127.4 ಮೀ.ಮೀ ಆಗಿದ್ದು, ಶೇ. 52 ರಷ್ಟು ಹೆಚ್ಚು ಮಳೆಯಾಗಿರುತ್ತದೆ. ನಂತರ ರಾಜ್ಯ ಹವಮಾನ ಇಲಾಖೆಯ ವರದಿಯಂತೆ, ಧಾರವಾಡ ಜಿಲ್ಲೆಯಲ್ಲಿ ಮುಂದಿನ ಮೂರು ದಿನ ಮಳೆಯಾಗುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು.
ವಿಡಿಯೋ ಸಂವಾದ ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಬ್ಯಾಕೊಡ್, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಮಹಾನಗರ ಪಾಲಿಕೆಯ ಆಯುಕ್ತ ಡಾ. ರುದ್ರೇಶ ಘಾಳಿ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಬಿ.ಎಸ್.ಮೂಗನೂರಮಠ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಸೇರಿದಂತೆ ಅಗ್ನಿ ಶಾಮಕ, ಆರೋಗ್ಯ, ಸಾರಿಗೆ, ಹೆಸ್ಕಾಂ, ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಎಲ್ಲ ತಾಲೂಕುಗಳ ತಹಶೀಲ್ದಾರರು, ತಾಲೂಕಾ ಪಂಚಾಯತ ಇಓ ಗಳು ಭಾಗವಹಿಸಿದ್ದರು.