ಬೆಳಗಾವಿ: ರಾಷ್ಟ್ರೀಯ ಭಾವೈಕ್ಯತಾ ಶಿಬಿರವು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಸಮಾನತೆ, ಭಾವೈಕ್ಯತೆ ಬೆಳೆಸುತ್ತದೆ. ಸಾಮಾಜಿಕ ಹೊಣೆಗಾರಿಕೆ, ಶಿಸ್ತು, ಸಂಯಮ, ಸಮಯ ಪ್ರಜ್ಞೆಯನ್ನೂ ಕಲಿಸಿಕೊಡುತ್ತದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಹೇಳಿದರು.
ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶವು ಕರ್ನಾಟಕ ಸರಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ ಪ್ರಾದೇಶಿಕ ನಿರ್ದೇಶನಾಲಯ ಬೆಂಗಳೂರು ಇವರ ಸಹಯೋಗದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಲಬಾವಿಯಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಶಿಬಿರವು ವಿವಿಧ ಜಾತಿ, ಮತ ಪಂಥಗಳ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ಕಾರ್ಯಮಾಡುತ್ತದೆ. ಪ್ರತಿಯೊಬ್ಬರು ತಮ್ಮ ತಂದೆ-ತಾಯಿ, ಗುರು ಹಿರಿಯರನ್ನು ಗೌರವಿಸುವುದನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿವಿ ಹಣಕಾಸು ಅಧಿಕಾರಿ ಎಂ.ಎ. ಸ್ವಪ್ನ ಮಾತನಾಡಿ, ಪ್ರತಿಯೊಬ್ಬರೂ ತಮ್ಮಲ್ಲಿರುವ ಸಾಮರ್ಥ್ಯವನ್ನು ಅರಿತು, ಅದನ್ನು ಪ್ರೀತಿಸುವ ಮೂಲಕ ತಮ್ಮ ಗುರಿ ಸಾಧಿಸಬೇಕು ಎಂದರು.
ಬೆಳಗಾವಿ ಜಿಲ್ಲೆಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಬಸವರಾಜ ಕುರಿಹುಲಿ ಮಾತನಾಡಿ, ದುಶ್ಚಟ ಹಾಗೂ ಮೊಬೈಲ್ ಹಾವಳಿಯಿಂದ ದೂರವಿದ್ದು ಸುಂದರ ಬದುಕನ್ನು ನಿರ್ಮಿಸಿ ಕೊಳ್ಳಬೇಕು. ಗ್ರಾಮ, ಜಿಲ್ಲೆ, ದೇಶದ ಅಭಿವೃದ್ದಿಯಲ್ಲಿ ಯುವಕರ ಸಹಕಾರ ಮತ್ತು ಶ್ರಮ ಮುಖ್ಯವಾಗಿದೆ ಎಂದರು.
ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಾಗರಜೀ ಪ್ರಾರ್ಥಿಸಿದರು. ಸಂಯೋಜನಾಧಿಕಾರಿ ಡಾ. ಕನಕಪ್ಪ ಪೂಜಾರ ಸ್ವಾಗತಿಸಿದರು. ಆಂದ್ರಪ್ರದೇಶದ ಎಸ್.ಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಎನ್ನೆಸ್ಸೆಸ್ ಗೀತೆ ಪ್ರಸ್ತುತ ಪಡಸಿದರು. ಕಾರ್ಯಕ್ರಮಾಧಿಕಾರಿ ಡಾ. ಮಲ್ಲಿಕಾರ್ಜುನ ಶೇಗುಣಸಿ ನಿರೂಪಿಸಿದರು. ಬೆಳಗಾವಿ ಜಿಲ್ಲಾ ಪ್ರಭಾರಿ ಸಂಯೋಜನಾ ಅಧಿಕಾರಿ ಪ್ರಕಾಶ ಕುರುಪಿ ವಂದಿಸಿದರು.