ವಾಷಿಂಗ್ಟನ್: ರಷ್ಯಾ ಮತ್ತು ಉಕ್ರೇನ್ ತಕ್ಷಣವೇ ಕದನ ವಿರಾಮ ಮಾತುಕತೆ ನಡೆಸುವಂತೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಎರಡು ದೇಶದ ನಾಯಕರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ ಅವರು, ಕಳೆದ ಮೂರು ವರ್ಷಗಳ ಯುದ್ದಗೊಳಿಸುವ ಕುರಿತು ಚರ್ಚೆ ನಡೆಸಿದ್ದಾರೆ. ಆದರೆ, ಈ ಮಾತುಕತೆಗಳು ಯಾವುದೇ ಪ್ರಗತಿ ಕಂಡಿಲ್ಲದಂತೆ ತೋರಿದೆ.
ಕದನ ವಿರಾಮ ಸಂಬಂಧ ಎಲ್ಲಿ, ಯಾವಾಗ ಮತ್ತು ಯಾವ ಸ್ಥಳದಲ್ಲಿ ಮಾತುಕತೆ ನಡೆಯಲಿದೆ. ಹಾಗೂ ಯಾರು ಭಾಗಿಯಾಗಲಿದ್ದಾರೆ ಎಂಬ ಕುರಿತು ಸ್ಪಷ್ಟತೆ ಇಲ್ಲ. 2022 ರ ನಂತರ ರಷ್ಯಾ ಮತ್ತು ಉಕ್ರೇನಿಯನ್ ನಿಯೋಗಗಳ ನಡುವಿನ ಮೊದಲ ನೇರ ಮಾತುಕತೆಯ ಕೆಲವು ದಿನಗಳ ನಂತರ ಟ್ರಂಪ್ ಅವರ ಘೋಷಣೆ ಹೊರಬಿದ್ದಿದೆ. ಶುಕ್ರವಾರ ಟರ್ಕಿಯಲ್ಲಿ ನಡೆದ ಮಾತುಕತೆ ಕೇವಲ ಸೀಮಿತ ಪ್ರಮಾಣದ ಕೈದಿಗಳ ವಿನಿಮಯ ಕುರಿತು ಆಗಿದ್ದು, ಯುದ್ಧ ನಿಲ್ಲಿಸುವ ಕುರಿತು ಆಗಿಲ್ಲ.
ಸುದೀರ್ಘ ಯುದ್ಧದಿಂದ ಇಬ್ಬರು ನಾಯಕರು ಹತಾಶೆಗೊಂಡಿದ್ದಾರೆ ಎಂದು ಟ್ರಂಪ್ ಈ ಕರೆಗೆ ಮುನ್ನ ತಿಳಿಸಿದ್ದರು. ರಷ್ಯಾ ಅಧ್ಯಕ್ಷ ಪುಟಿನ್ ನಿಜವಾಗಿಯೂ ಯುದ್ಧ ನಿಲ್ಲಿಸುವ ಆಸಕ್ತಿ ಹೊಂದಲಿ ಎಂದು ಟ್ರಂಪ್ ಒತ್ತಾಯಿಸಿದ್ದಾರೆ. ಅವರು ಈ ಬಗ್ಗೆ ಆಸಕ್ತಿ ಇಲ್ಲವಾದಲ್ಲಿ ಅಮೆರಿಕ ಈ ಪ್ರಯತ್ನದಿಂದ ದೂರ ಉಳಿಯಲಿದೆ ಎಂದು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ತಿಳಿಸಿದ್ದಾರೆ.