ದುಮ್ಕಾ (ಜಾರ್ಖಂಡ್): ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಅಪ್ರಾಪ್ತ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸೋಮವಾರ ಸಂಜೆ ಆರೋಪಿಗಳನ್ನು ಬಂಧಿಸಲಾಗಿದ್ದು, ಮಂಗಳವಾರ ಇಲ್ಲಿನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಘಟನೆ ಮೇ 16 ರಂದು ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೇ 17 ರಂದು ಬಾಲಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮದುವೆ ಕಾರ್ಯಕ್ರಮಕ್ಕಾಗಿ ಸಂಬಂಧಿಕರ ಮನೆಗೆ ಹೋಗಿದ್ದೆ. ಅಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ತನ್ನನ್ನು ಬಲವಂತವಾಗಿ ನಿರ್ಜನ ಸ್ಥಳಕ್ಕೆ ಕರೆದೊಯ್ದನು. ಅಲ್ಲಿ ಆ ವ್ಯಕ್ತಿ ಮತ್ತು ಇತರ ನಾಲ್ವರು ಸಹಚರರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
‘ಎಫ್‌ಐಆರ್ ಆಧರಿಸಿ, ತಂಡವನ್ನು ರಚಿಸಲಾಗಿದ್ದು, ಸೋಮವಾರ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಅವರನ್ನು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಬಾಲಕಿಯ ವೈದ್ಯಕೀಯ ಪರೀಕ್ಷೆಯನ್ನು ಸಹ ನಡೆಸಲಾಗಿದೆ’ ಎಂದು ಮುಫಾಸಿಲ್ ಪೊಲೀಸ್ ಠಾಣೆಯ ಉಸ್ತುವಾರಿ ಸತ್ಯಂ ಕುಮಾರ್ ತಿಳಿಸಿದ್ದಾರೆ.