ಬಳ್ಳಾರಿ, ಮೇ 20: ಬಳ್ಳಾರಿಯ ಪ್ರತಿಷ್ಠಿತ ಬಳ್ಳಾರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್ಮೆಂಟ್, ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿoಗ್ ವಿಭಾಗದ ನೇತೃತ್ವದಲ್ಲಿ 2025ರ ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ ನಡೆಯಿತು.
ವಿಪ್ರೋ ಎಂಜಿನಿಯರಿoಗ್ ಎಡ್ಜ್ನ ಡಿವಿ ಪ್ರಾಕ್ಟೀಸ್ ಹೆಡ್ ಡಾ. ಬಿ. ಶೈಲೇಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳನ್ನು ಸಂಶೋಧನೆ, ಉದ್ಯಮ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮುನ್ನಡೆಸುವಂತೆ ಪ್ರೇರೇಪಿಸಿದರು. ಈ ವರ್ಷದ ಥೀಮ್ “ಯಂತ್ರ – ಯುಗಾಂತರ್ ಫಾರ್ ಅಡ್ವಾನ್ಸಿಂಗ್ ನ್ಯೂ ಟೆಕ್ನಾಲಜಿ, ರಿಸರ್ಚ್ & ಅಕ್ಸೆಲರೇಶನ್” ಅನ್ನು ಆಧರಿಸಿ ಮಾತನಾಡಿದ ಅವರು, ಎಐ, ಪೇಟೆಂಟ್, ಸಂಶೋಧನಾ ಅನುದಾನಗಳ ಮಹತ್ವ, ಎಐ ಮಾದರಿಗಳನ್ನು ರೂಪಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂಬ ಸಂದೇಶವನ್ನು ಅವರು ನೀಡಿದರು. ಭಾರತೀಯ ವಿಜ್ಞಾನಿಗಳ ಸಂಶೋಧನಾ ಪರಂಪರೆಯ ಮೇಲೆ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕು, ವಿಪ್ರೋ ಸಂಸ್ಥೆಯ ಪರಂಪರೆ, ಎಐ ಆಧಾರಿತ ನೇಮಕಾತಿ ಪ್ರಕ್ರಿಯೆ, ಮತ್ತು ಶಿಕ್ಷಣ-ಸಂಶೋಧನೆಗೆ ನೀಡುತ್ತಿರುವ ಬೆಂಬಲ, ಎಐ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಸ್ವಂತವಾಗಿ ಮಾದರಿಗಳನ್ನು ರೂಪಿಸಬೇಕು, ಕೇವಲ ತಯಾರಾದ ಮಾದರಿಗಳನ್ನು ಬಳಸದೆ, ಎಂದು ಸಲಹೆ ನೀಡಿದರು. ಭಾರತದ ಡಿಜಿಟಲ್ ವಸತಿ ಅಭಿವೃದ್ಧಿ ಮತ್ತು ಬಾಹ್ಯಾಕಾಶ ಸಾಧನೆಗಳನ್ನೂ, ವಿದ್ಯಾರ್ಥಿಗಳು ಸಂಶೋಧನೆ ಹಾಗೂ ತಂತ್ರಜ್ಞಾನದ ಮುಂದಾಳುಗಳಾಗಬೇಕು ಎಂದು ಕರೆ ನೀಡಿದರು. ವಿಪ್ರೋನ ಎಐ ಆಧಾರಿತ ನೇಮಕಾತಿ, ಉದ್ಯೋಗಾವಕಾಶಗಳು, ಮತ್ತು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿದರು.
ನಿರ್ದೇಶಕ ಪ್ರೊ. ಪೃಥ್ವಿರಾಜ್ ವೈ. ಜೆ. ಅಧ್ಯಕ್ಷೀಯ ಭಾಷಣದಲ್ಲಿ ಭಾರತವು ತಂತ್ರಜ್ಞಾನದ ಕ್ಷೇತ್ರದಲ್ಲಿ ಸಾಧಿಸಿರುವ ಸಾಧನೆಗಳ ಕುರಿತು ಮಾತನಾಡಿದರು. ವಿಶೇಷವಾಗಿ ಭಾರತದ ತ್ರಿಸ್ತರ ರಕ್ಷಣಾ ಪ್ರಣಾಳಿ, ಕ್ಷಿಪಣಿ ತಂತ್ರಜ್ಞಾನದಲ್ಲಿ ದೇಶ ಸಾಧಿಸಿರುವ ಪ್ರಗತಿಯತ್ತ ಗಮನಸೆಳೆಯುತ್ತಾ, ತಂತ್ರಜ್ಞಾನ ದಿನದ ಮಹತ್ವವನ್ನು ವಿವರಿಸಿದರು. ಭಾರತೀಯ ತಂತ್ರಜ್ಞಾನವು ಜಾಗತಿಕ ಮಟ್ಟದಲ್ಲಿ ಹೇಗೆ ಮುನ್ನಡೆಸುತ್ತಿದೆ ಎಂಬುದರ ಬಗ್ಗೆ ಅವರು ಚರ್ಚಿಸಿದರು. ತೈವಾನ್ನಲ್ಲಿ ರೋಬೋಟಿಕ್ಸ್ ಸಹಾಯದಿಂದ ಚಿಪ್ ತಯಾರಿಕೆಗೆ ಬಳಸುವ ತಂತ್ರಜ್ಞಾನವನ್ನು ಉದಾಹರಣೆ ನೀಡುತ್ತಾ, ವಿದ್ಯಾರ್ಥಿಗಳು ಅಂತರರಾಷ್ಟಿಯ ಅಧ್ಯಯನವನ್ನು ಅಳವಡಿಸಿಕೊಳ್ಳಬೇಕು ಎಂದು ಉಲ್ಲೇಖಿಸಿದರು.
ಉಪಪ್ರಾಚಾರ್ಯ ಡಾ. ಬಿ. ಎಸ್. ಖೆಣದ್ ಅವರು ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಯಶಸ್ಸುಗಳ ಕುರಿತು ಮಾತನಾಡಿದರು. ಐಟಿ, ಆರೋಗ್ಯ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಭಾರತ ಸಾಧಿಸಿರುವ ಪ್ರಗತಿಯ ಸಾಧನೆಗಳನ್ನು ಸ್ಮರಿಸಿದರು.
ಶ್ರೀಮತಿ ವರದಾ ಅಲೇಖ್ಯ ಅವರು ಸ್ವಾಗತಿಸಿದರು. ಡಾ. ಆರ್. ಎನ್. ಕುಲಕರ್ಣಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿoಗ್ ವಿಭಾಗದ ಡೀನ್ ಅವರು ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಶ್ರೀಮತಿ ಪ್ರತಿಭಾ ಮಿಶ್ರಾ ವಂದನಾರ್ಪಣೆ ಸಲ್ಲಿಸಿದರು.