ಚನ್ನಮ್ಮನ ಕಿತ್ತೂರು: ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಕಿತ್ತೂರು ರಾಣಿ ಚೆನ್ನಮ್ಮ ಸ್ಮಾರಕ ಸರ್ಕಾರಿ ವಸ್ತುಸಂಗ್ರಹಾಲಯ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಚನ್ನಮ್ಮನ ಕಿತ್ತೂರು ಇವರ ಸಹಯೋಗದೊಂದಿಗೆ ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆ ಮಾಡಿ ಶಾಸಕ ಬಾಬಾಸಾಹೇಬ್ ಪಾಟೀಲ ಅವರು, “ಪರಂಪರೆ ಮತ್ತು ಇತಿಹಾಸದ ಕುರಿತು ವಿದ್ಯಾರ್ಥಿಗಳು ಹಾಗೂ ಮುಂದಿನ ಪೀಳಿಗೆಗೆ ಜ್ಞಾನ ಮೂಡಿಸುವುದು ಎಲ್ಲರ ಹೊಣೆಗಾರಿಕೆ. ಇತಿಹಾಸವು ನಮಗೆ ಗುರುತು ಮತ್ತು ಗುರಿಯನ್ನು ನೀಡುತ್ತದೆ,” ಎಂದು ಹೇಳಿದರು. ಜೊತೆಗೆ ಪರಿಸರ ಪ್ರಜ್ಞೆಯ ಅಗತ್ಯತೆ ಕುರಿತು ಮಾತನಾಡಿ, “ಕಿತ್ತೂರು ರಾಣಿ ಚೆನ್ನಮ್ಮನ ಹೆಸರಿನಲ್ಲಿ ಅರಣ್ಯ ಇಲಾಖೆಯ ಮರುನಾಮಕರಣಕ್ಕೆ ಕ್ರಮ ಜರುಗಿಸಲು ಸಚಿವರಿಗೆ ಮನವಿ ಸಲ್ಲಿಸಲಾಗಿದೆ,” ಎಂದರು. ಹಾಗು ಕೆ.ಆರ್.ಸಿ.ಎಂ ವಸ್ತುಸಂಗ್ರಹಾಲಯವನ್ನು ಮುಂದಿನ ದಿನಗಳಲ್ಲಿ ನವೀಕರಿಸುವ ಯೋಚನೆ ಇದೆ ಎಂಬುದಾಗಿ ತಿಳಿಸಿದರು.
ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ, “ಇಂತಹ ಕಾರ್ಯಕ್ರಮಗಳು ಪರಂಪರೆ ಅರಿವಿಗೆ ದಾರಿ ಮಾಡಿಕೊಡುತ್ತವೆ,” ಎಂದು ಹೇಳಿದರು. ಕನ್ನಡ ವಿಷಯದಲ್ಲಿ ಶೇ.100 ಅಂಕಗಳೊಂದಿಗೆ ಪ್ರೌಢಶಾಲಾ ವಿದ್ಯಾರ್ಥಿಗಳ ಸಾಧನೆಯನ್ನು ವಿಶಿಷ್ಟವಾಗಿ ಅಭಿನಂದಿಸಿ, “ನಿಮ್ಮ ಸಾಧನೆ ಕನ್ನಡದ ಭಾಷೆಯ ಬೆಳವಣಿಗೆಗೆ ಮಾರ್ಗದರ್ಶಿಯಾಗಲಿ,” ಎಂದು ಆಶೀರ್ವಚನ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ವೈ.ತುಬಾಕದ ಅವರು ಮಾತನಾಡಿ, “ವಿದ್ಯಾರ್ಥಿಗಳಲ್ಲಿಯ ಐತಿಹಾಸಿಕ ಅರಿವನ್ನು ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ,” ಎಂದರು. ಈ ವರ್ಷ ಶಿಕ್ಷಣ ಇಲಾಖೆಯಿಂದ ಈ ಹಾದಿಯಲ್ಲಿ ಹೆಚ್ಚುವರಿ ಸಹಕಾರ ನೀಡಲಾಗುವುದು ಎಂದು ಹೇಳಿದರು.
ರಾಮಕೃಷ್ಣ ಇಳಕಲ್ ಅವರು “ವೇಗವಾಗಿ ಬದಲಾಗುತ್ತಿರುವ ಸಮುದಾಯಗಳಲ್ಲಿ ವಸ್ತುಸಂಗ್ರಹಾಲಯಗಳ ಭವಿಷ್ಯ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಸ್ತುಸಂಗ್ರಹಾಲಯಗಳು ಹೇಗೆ ಸಮುದಾಯದ ಜ್ಞಾನದ ಕೇಂದ್ರಗಳಾಗಬಹುದು ಮತ್ತು ಇತಿಹಾಸದ ಪುಟಗಳನ್ನು ಬದುಕಿಸುವಲ್ಲಿ ಅವು ಹೇಗೆ ನೆರವಾಗುತ್ತವೆ ಎಂಬುದರ ಬಗ್ಗೆ ವಿವರಣೆ ನೀಡಿದರು.
ಡಾ. ಎಸ್.ಬಿ.ದಳವಾಯಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರು, ಸಮಾರೋಪ ನುಡಿಗಳಲ್ಲಿ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು ಮತ್ತು, “ಭಾವಿ ದಿನಗಳಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ಪ್ರಭುತ್ವ ಸಾಧಿಸಲಿ,” ಎಂದು ಶುಭಕೋರಿದರು.
ಪುರಾತತ್ವ ಮತ್ತು ಪರಂಪರೆ ಇಲಾಖೆಯ ಕ್ಯೂರೇಟರ್ ರಾಘವೇಂದ್ರ ಅವರು ಎಲ್ಲರನ್ನ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಶಿಕ್ಷಕ ಮಂಜುನಾಥ ಕಳಸಣ್ಣವರ ನಿರೂಪಿಸಿದರು. ಶರಣಬಸವ ವಾಲಿ ಅವರು ವಂದಿಸಿದರು. ನವಾಯ ಹೊಂಗಲ ಪ್ರಾರ್ಥಿಸಿದರು.
ಈ ವೇಳೆ ಮಹೇಶ ಚನ್ನಂಗಿ, ಅಶ್ಫಾಕ ಹವಾಲ್ದಾರ, ರಾಜಶೇಖರ ರಗಟಿ,ಸುನೀಲ ಘಿವಾರಿ, ಗಜಾನಂದ ಸೊಗಲನ್ನವರ, ಕುಬೇರ ಜಾಯಕ್ಕಣ್ಣವರ, ಮಹೇಶ್ವರ ಹೊಂಗಲ, ನಾಗರಾಜ ಹುಲೆಪ್ಪಣ್ಣವರಮಠ ಸೇರಿದಂತೆ ಇತರರು ಇದ್ದರು.