ಮೈಸೂರು, ಮೇ 20: ಮುಂದಿನ ಚುನಾವಣೆ ವೇಳೆಗೆ 78 ವರ್ಷ ವಯಸ್ಸಾಗುತ್ತದೆ. ಹೀಗಾಗಿ ಚುನಾವಣೆ ರಾಜಕಾರಣಕ್ಕೆ ಗುಡ್ ಬೈ ಹೇಳುತ್ತೇನೆ ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ ಹೇಳಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಗೆ ಸ್ಪರ್ಧಿಸಲ್ಲ. ಒಂದು ವೇಳೆ ಸ್ಪರ್ಧಿಸಿ ಗೆದ್ದರೂ ಜನರ ಸೇವೆ ಮಾಡುವುದು ಕಷ್ಟ. ಆರೋಗ್ಯದ ದೃಷ್ಟಿಯಿಂದ ಅದು ಕಷ್ಟಸಾಧ್ಯ. ಹಾಗಾಗಿ ಚುನಾವಣೆಗೆ ಸ್ಪರ್ಧಿಸಲ್ಲ. ಆದರೆ, ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದರು. ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ರಾಜಣ್ಣ ನಡುವಣ ಮುಸುಕಿನ ಗುದ್ದಾಟದ ಕೆಲವೇ ದಿನಗಳ ನಂತರ ಸಹಕಾರ ಸಚಿವರು ಇಂಥದ್ದೊಂದು ನಿರ್ಧಾರ ಪ್ರಕಟಿಸಿದ್ದಾರೆ.
ಮೈಸೂರು ಅಂದರೆ ನನಗೆ ಬಹಳ ಇಷ್ಟ. ಮೈಸೂರು ವಿವಿಯಲ್ಲೇ ನಾನು ವ್ಯಾಸಂಗ ಮಾಡಿದ್ದೇನೆ. ಇಲ್ಲೇ ಗಣಿತದಲ್ಲಿ ಮಾಸ್ಟರ್ಸ್ ಮಾಡಿದ್ದೇನೆ. ಆಗ ವಿದ್ಯಾರ್ಥಿ ನಾಯಕನಾಗಿದ್ದೆ ಎಂದು ರಾಜಣ್ಣ ನೆನಪಿಸಿಕೊಂಡರು.