ಬೆಳಗಾವಿ.ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ (SGBIT), ಬೆಳಗಾವಿಯ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕ ಬೆಳಗಾವಿಯ ಅತ್ಯಂತ ಕ್ರಿಯಾಶೀಲವಾದ ಅಂತರ್ಯಾಮಿ ಫೌಂಡೇಶನ್ನಿನ ಸಹಯೋಗದೊಂದಿಗೆ ಗ್ರಾಮೀಣ ಶಿಕ್ಷಣ ಪರಿಸರದ ಸುಧಾರಣೆಯ ನಿಟ್ಟಿನಲ್ಲಿ ಖಾನಾಪುರ ತಾಲ್ಲೂಕಿನ ಸುರಪುರ ಖೇರವಾಡ ಗ್ರಾಮದ ಸರ್ಕಾರಿ ಶಾಲಾ ಕಟ್ಟಡವನ್ನ ಪುನಶ್ಚೇತನಗೊಳಿಸುವ ಮಹತ್ವಕಾಂಕ್ಷೆಯ ಕಾರ್ಯವನ್ನು 2025 ನೆಯ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ಹಮ್ಮಿಕೊಳ್ಳಲಾಗಿತ್ತು.
ಈ ಪುನಶ್ಚೇತನ ಕಾರ್ಯಕ್ರಮದಲ್ಲಿ ಶಾಲಾ ಕಟ್ಟಡದ ಒಳಗಿನ ಮತ್ತು ಹೊರಗಿನ ಗೋಡೆಗಳಿಗೆ ನವೀನ ಬಣ್ಣಗಳ ಹಚ್ಚುವಿಕೆ, ಶೈಕ್ಷಣಿಕ ಹಾಗೂ ಮೌಲ್ಯಾಧಾರಿತ ಗೋಡೆ ಚಿತ್ರಗಳು (ವಾಲ್ ಪೇಂಟಿಂಗ್), ಬಾಗಿಲು, ಕಿಟಕಿ ಹಾಗೂ ಜರಕಿಂಗ್ ಇತ್ಯಾದಿಗಳ ಬಣ್ಣ ಹಚ್ಚುವಿಕೆ, ಶಾಲಾ ಆವರಣದ ಸ್ವಚ್ಛತೆ ಹಾಗೂ ಸೌಂದರ್ಯೀಕರಣದಂತಹ ಸೇವಾ ಕಾರ್ಯಗಳನ್ನ ನೆರವೇರಿಸಲಾಯಿತು.
ಈ ಕಾರ್ಯಕ್ರಮಕ್ಕೆ ನಾಗನೂರು ಶ್ರೀ ರುದ್ರಾಕ್ಷಿಮಠ, ಬೆಳಗಾವಿಯ ಪೀಠಾಧಿಪತಿಗಳು ಹಾಗೂ ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಅಧ್ಯಕ್ಷರು ಆದ ಪೂಜ್ಯಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಚಾಲನೆ ನೀಡಿ ಇಂತಹ ಸಮಯೋಚಿತ ಹಾಗೂ ನಿಸ್ವಾರ್ಥ ಸೇವಾಕಾರ್ಯಗಳು ಇಗೀನ ದಿನಮಾನಗಳಲ್ಲಿ ಅತ್ಯಗತ್ಯವಾಗಿದ್ದು ಈ ಕಾರ್ಯಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿರುವ ಸ್ವಯಂ ಸೇವಕರ ವಿಚಾರಧಾರೆ, ಮನಃಸ್ಥಿತಿ, ಪರಿಶ್ರಮ ಶ್ಲಾಘನೀಯ ಎಂದು ತಿಳಿಸಿದರು. ಅದೇ ರೀತಿ ಈ ತರಹದ ಸಮಾಜಮುಖಿ ಕಾರ್ಯಕ್ರಮಗಳನ್ನ ಆಯೋಜನೆ ಮಾಡುವ ಸಧುದ್ದೇಶದೊಂದಿಗೆ ಆರೋಗ್ಯಕರ ಸಮಾಜವನ್ನ ನಿರ್ಮಾಣ ಮಾಡಹೊರಟಿರುವ ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಗೆ ಹಾಗೂ ಅಂತರ್ಯಾಮಿ ಫೌಂಡೇಶನ್ನಿಗೆ ಅಭಿನಂದನೆ ತಿಳಿಸಿ, ಆಶೀರ್ವದಿಸಿ, ಮುಂಬರುವ ದಿನಗಳಲ್ಲಿಯೂ ಈ ತರಹದ ಸತ್ಕಾರ್ಯಗಳು ಸದಾವಕಾಲ ನಡೆಯುತ್ತಿರಲಿ ಎಂಬ ಆಶಯವನ್ನ ವ್ಯಕ್ತ ಪಡಿಸಿದರು.
ವೇದಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಹಾವಿದ್ಯಾಲಯದ ಪ್ರಚಾರ್ಯರಾದ ಡಾ. ಬಿ. ಆರ್. ಪಟಗುಂದಿ ಅವರು, “ವಿದ್ಯಾರ್ಥಿಗಳ ಶ್ರಮದಿಂದ ಸಮಾಜದಲ್ಲಿ ನಿಜವಾದ ಬದಲಾವಣೆ ತರಲು ಸಾಧ್ಯ. ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿನ ಶ್ರದ್ಧೆ, ಶಿಸ್ತು ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ವೃದ್ಧಿಸುತ್ತದೆ,” ಎಂದು ಹೇಳಿದರು. ಅಲ್ಲದೆ, ಅಂತರ್ಯಾಮಿ ಫೌಂಡೇಶನ್ ಗೆ ಸಹಕಾರ ನೀಡಿದಕ್ಕಾಗಿ ಧನ್ಯವಾದಗಳನ್ನು ತಿಳಿಸಿದರು.
ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳಾದ ಪ್ರೊ. ಮಂಜುನಾಥ ಶರಣಪ್ಪನವರ ಹಾಗೂ ಅಂತರ್ಯಾಮಿ ಫೌಂಡೇಶಣ್ಣಿನ ಸಂಸ್ಥಾಪಕರಾದ ನಾಗರಾಜ ಗಸ್ತಿ ಅವರು ಈ ವಿಶಿಷ್ಟವಾದ ಕಾರ್ಯಕ್ರಮದ ಆಯೋಜನೆಯ ಜೊತೆಗೆ ಮೇಲ್ವಿಚಾರಣೆ ಸಂಪೂರ್ಣ ಜವಾಬ್ದಾರಿಯನ್ನ ವಹಿಸಿದ್ದು, ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತನ ಮಾಜಿ ಅಧ್ಯಕ್ಷರಾದ ಸತ್ಯಗೌಡ ಪಾಟೀಲ, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ತಿಪ್ಪಣ್ಣ ಶಹಾಬಾಂದಾರ, ಗ್ರಾಮದ ಸಮಾಜ ಸೇವಕರು ಯುವ ಮುಖಂಡರೂ ಆದ ಸಿದ್ದು ಪಾಟೀಲ, ಶಾಲೆಯ ಪ್ರಾಚಾರ್ಯರಾದ ಮಹಾಂತೇಶ ಪ್ಯಾಟಿ, ಗ್ರಾಮ ಪಂಚಾಯಂತಿಯ ಸದಸ್ಯರು, ಊರಿನ ಹಿರಿಯರು, ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಅಂತರ್ಯಾಮಿ ಫೌಂಡೇಶಣ್ಣಿನ ತಂಡದ ಈ ಸೇವಾಭಿಮಾನಿ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆಗಳಲ್ಲಿ ಕೈಜೋಡಿಸುವ ಭರವಸೆ ನೀಡಿದರು.
ಒಟ್ಟಾರೆಯಾಗಿ ಈ NSS ನ ವಿಶೇಷ ವಾರ್ಷಿಕ ಶಿಬಿರ ಹಾಗೂ ಅದರ ಹಲವಾರು ವಿಶಿಷ್ಟವಾದ ಸಮಾಜಮುಖಿ ಸೇವಾ ಕಾರ್ಯಗಳು ಗ್ರಾಮೀಣ ಸಮುದಾಯದ ಪ್ರಗತಿಗೆ ಒಂದು ಸಾಧನವಾಗಿ ಮಾರ್ಪಟ್ಟಿದ್ದು ಈ ಕಾರ್ಯದ ಮೂಲಕ ಶಾಲೆಯ ಮಕ್ಕಳು ಶ್ರದ್ಧೆಯಿಂದ ಕಲಿಯುವ ಸುಸಜ್ಜಿತ, ಶುದ್ಧ ಹಾಗೂ ಆಕರ್ಷಕ ವಾತಾವರಣವನ್ನು ಕಲ್ಪಿಸಿಕೊಟ್ಟ NSS ಸ್ವಯಂಸೇವಕರ ಈ ಶ್ರಮದ ಕಾರ್ಯ ಗ್ರಾಮಸ್ಥರಿಂದ ಹಾಗೂ ಶಾಲಾ ಸಿಬ್ಬಂದಿಯಿಂದ ಮೆಚ್ಚುಗೆಗೆ ಪಾತ್ರವಾಯಿತು.