ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಂದ ಅಭಿವೃದ್ಧಿಯ ಜೊತೆಗೆ ಸಮಾಜಮುಖೀ ಕೆಲಸ: ಸತೀಶ್ ಜಾರಕಿಹೊಳಿ ಪ್ರಶಂಸೆ

Ravi Talawar
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಂದ ಅಭಿವೃದ್ಧಿಯ ಜೊತೆಗೆ ಸಮಾಜಮುಖೀ ಕೆಲಸ: ಸತೀಶ್ ಜಾರಕಿಹೊಳಿ ಪ್ರಶಂಸೆ
WhatsApp Group Join Now
Telegram Group Join Now
ಸುಳೇಬಾವಿ (ಬೆಳಗಾವಿ): ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಅಭಿವೃದ್ಧಿ ಜತೆಗೆ ಸಮಾಜಮುಖಿ ಕೆಲಸಗಳನ್ನೂ ಮಾಡುತ್ತಿದ್ದಾರೆ ಎಂದು ಲೋಕೋಪಯೋಜಿ ಸಚಿವರೂ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸತೀಶ ಜಾರಕಿಹೊಳಿ ಪ್ರಸಂಸಿಸಿದರು.
 ಸುಳೇಭಾವಿ‌ ಗ್ರಾಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಸ್ವಂತ ಹಣದಿಂದ ಪ್ರತಿಷ್ಠಾಪಿಸಿರುವ ಛತ್ರಪತಿ ಶಿವಾಜಿ ಮಹಾರಾಜರ ನೂತನ ಮೂರ್ತಿಯನ್ನು ಭಾನುವಾರ ಸಂಜೆ ಅನಾವರಣಗೊಳಿಸಿ ಅವರು ಮಾತನಾಡಿದರು.
ಇದೊಂದು ಐತಿಹಾಸಿಕ ದಿನ. ಇಲ್ಲಿ ಶಿವಾಜಿ ಮಹಾರಾಜರ ಭವ್ಯ ಮೂರ್ತಿ ಆಗಬೇಕೆಂದು ಬಹಳ ವರ್ಷದ ಕನಸಿತ್ತು. ಅದನ್ನು  ಹೆಬ್ಬಾಳಕರ ಮತ್ತು ಹಟ್ಟಿಹೊಳಿ ನೆರವೇರಿಸಿದ್ದಾರೆ. ಸರ್ಕಾರದ ಹಣದಲ್ಲಿ ಇಂತಹ ಮೂರ್ತಿ ಸ್ಥಾಪಿಸಲು ಅವಕಾಶ ಕಡಿಮೆ. ಆದರೆ ಹೆಬ್ಬಾಳಕರ ಅವರು ಸ್ವಂತ ಹಣದಿಂದ ನೆರವೇರಿಸಿದ್ದಾರೆ. ಅಭಿವೃದ್ಧಿ ಜೊತೆಗೆ ಸಮಾಜಮುಖಿ ಕೆಲಸವನ್ನೂ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.
ನಮ್ಮ ಸರ್ಕಾರ ಜನಪರ ಕೆಲಸ ಮಾಡುತ್ತಿದ್ದು, ಗ್ಯಾರಂಟಿ ಯೋಜನೆಗಳು ಜನರ ಬದುಕು ಕಟ್ಟಲು ಸಹಕಾರಿಯಾಗಿವೆ. ಗೃಹಲಕ್ಷ್ಮೀ ಹಣವಂತೂ ಬಡವರ ಮಕ್ಕಳ ವಿದ್ಯಾಭ್ಯಾಸ, ವೈದ್ಯಕೀಯ ವೆಚ್ಚ ಸೇರಿದಂತೆ ಅನೇಕ ಕೆಲಸಗಳಿಗೆ ಸಹಕಾರಿಯಾಗಿದೆ.‌ ಬುದ್ಧ, ಬಸವಣ್ಣ, ಅಂಬೇಡ್ಕರ್ ನಮಗೆಲ್ಲರಿಗೂ ಆದರ್ಶ ಎಂದರು.
 ಛತ್ರಪತಿ ಶಿವಾಜಿ ಮಹಾರಾಜರ ತಂದೆ ಶಹಾಜಿ ಮಹಾರಾಜರ ಸಮಾಧಿ‌ ಇರುವ ಚನ್ನಗಿರಿ ತಾಲೂಕಿನ ಹೊದಗೆರೆ ಗ್ರಾಮದಲ್ಲಿ ಭವ್ಯ ಸ್ಮಾರಕ ಮಾಡಲು ಲೋಕೋಪಯೋಗಿ ಇಲಾಖೆಯಿಂದ 5 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಕೆಲಸ ಆರಂಭವಾಗಲಿದೆ ಎಂದು ಸತೀಶ ಜಾರಕಿಹೊಳಿ‌ ತಿಳಿಸಿದರು.
ಸುಳೇಭಾವಿ ಗ್ರಾಮದಲ್ಲಿ ಯಾವುದೇ ಜಾತಿ, ಧರ್ಮ‌ದ ಭೇದ ಭಾವ ಇಲ್ಲದೇ ಇರುವುದು ಹೆಮ್ಮೆಯ ವಿಷಯ. ‌ ಶಿವಾಜಿ ಮಹಾರಾಜರ ಹೋರಾಟ, ಆದರ್ಶ ನಮಗೆಲ್ಲರಿಗೂ ಪ್ರೇರಣೆ. ಇಂಥ ಕಾರ್ಯಕ್ರಮಗಳು ನಮಗೆ ದಾರಿದೀಪ ಆಗಬೇಕು.  ಸುಂದರವಾದ ಸ್ಮಾರಕ‌ ನಿರ್ಮಾಣ ಮಾಡಿರುವುದು ಸಂತೋಷದ ವಿಷಯ. ಇಡೀ ಜಿಲ್ಲೆಯಲ್ಲೇ ಇಂತಹ ಸುಂದರ ಮೂರ್ತಿ ಬೇರೆಲ್ಲೂ ಇಲ್ಲ ಎಂದರು.
ಲಕ್ಷ್ಮೀ ಹೆಬ್ಬಾಳಕರ್ ಮತ್ತು ಚನ್ನರಾಜ ಹಟ್ಟಿಹೊಳಿ ಅವರು ಸತೀಶ್ ಜಾರಕಿಹೊಳಿ ಅವರನ್ನು ಸನ್ಮಾನಿಸಿದರು.
WhatsApp Group Join Now
Telegram Group Join Now
Share This Article