ಬಳ್ಳಾರಿ, ಮೇ 17, 2025:“ದೂರಸಂಪರ್ಕ ತಂತ್ರಜ್ಞಾನವು ಇಂದಿನ ದಿನಗಳಲ್ಲಿ ಜನಸಾಮಾನ್ಯರ ಬದುಕಿಗೆ ನಿಜವಾದ ವರದಾನವಾಗಿದೆ” ಎಂದು ಇನ್ಸ್ಟಿಟ್ಯೂಶನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ಮುನಿರಾಬಾದ್ ಸ್ಥಳೀಯ ಕೇಂದ್ರದ ಅಧ್ಯಕ್ಷ ಡಾ. ಎಸ್.ಎಂ. ಶಶಿಧರ್ ಹೇಳಿದರು.
ಅವರು ಇನ್ಸ್ಟಿಟ್ಯೂಶನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ಮುನಿರಾಬಾದ್ ಕೇಂದ್ರ ಮತ್ತು ವೀ.ವಿ.ಸಂಘದ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಸಹಯೋಗದಲ್ಲಿ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಶನಿವಾರದಂದು ಆಯೋಜಿಸಿದ್ದ ‘ವಿಶ್ವ ದೂರಸಂಪರ್ಕ ದಿನಾಚರಣೆ’ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
“5ಜಿ ಕೇವಲ ಸ್ಮಾರ್ಟ್ಫೋನ್ ಬಳಕೆಯನ್ನು ವೇಗಗೊಳಿಸುವುದಲ್ಲ. ಇವತ್ತಿನ ತಂತ್ರಜ್ಞಾನ ‘ಇಂಟರ್ನೆಟ್ ಆಫ್ ಥಿಂಗ್ಸ್’ ರೂಪದಲ್ಲಿ ಎಲ್ಲವನ್ನೂ ಜಾಲವಾಗಿ ಜೋಡಿಸುತ್ತಿದೆ. ನಾವು ಕನಸು ಕಂಡಿದ್ದ ಸ್ಮಾರ್ಟ್ ಜಗತ್ತು ನಮ್ಮ ಬೆರಳ ತುದಿಗೆ ಬಂದಿದೆಯೆಂದು ಹೇಳಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಈ ತಂತ್ರಜ್ಞಾನ ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಮತ್ತು ಜೀವನೋಪಾಯದಲ್ಲಿ ಹೊಸ ಅವಕಾಶಗಳನ್ನು ತರುತ್ತಿದೆ. 2030ರ ವೇಳೆಗೆ ಲಭ್ಯವಾಗುವ 6ಜಿ, 5ಜಿಗಿಂತ ಸುಮಾರು ಸಾವಿರ ಪಟ್ಟು ವೇಗವಾಗಿ ಡೇಟಾವನ್ನು ಸಾಗಿಸಲಿದೆ. ಇದು ಜನರ ಜೀವನಶೈಲಿಯನ್ನು ಪುನರ್ರೂಪಿಸುವ ಒಂದು ಕ್ರಾಂತಿಕಾರಿ ಬದಲಾವಣೆ” ಎಂದು ಡಾ. ಎಸ್.ಎಂ. ಶಶಿಧರ್ ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ಬಳ್ಳಾರಿಯ ಆರ್ವೈಎಂಇಸಿ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥೆ ಡಾ. ಎಸ್. ಪ್ರಭಾವತಿ “ತಂತ್ರಜ್ಞಾನದಲ್ಲಿ ಮಹಿಳೆಯರ ಭಾಗವಹಿಸುವಿಕೆ ಇಂದು ಅತ್ಯಗತ್ಯವಾಗಿದೆ. ಮಹಿಳೆಯರು ಡಿಜಿಟಲ್ ಕೌಶಲ್ಯಗಳನ್ನು ಕಲಿತು ತಮ್ಮ ಕುಟುಂಬ ಮತ್ತು ಸಮಾಜವನ್ನು ಮುನ್ನಡೆಸಬಹುದು” ಎಂದು ಹೇಳಿದರು. ಹೆಲ್ವೆಟ್ ಪ್ಯಾಕರ್ಡ್ ಕಂಪೆನಿಯ ಹಿರಿಯ ಎಂಜಿನಿಯರ್ ಕೆ.ಎಂ. ನಂದೀಶ್ ಮಾತನಾಡುತ್ತಾ, “ದೂರಸಂಪರ್ಕ ತಂತ್ರಜ್ಞಾನವು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಬೆಳವಣಿಗೆಗೆ ಶಕ್ತಿದಾಯಕ ಸಾಧನವಾಗಿದೆ. ಇದನ್ನು ಸಮರ್ಥವಾಗಿ ಬಳಸಿದಾಗ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಮಾರ್ಗ ಸಿದ್ಧವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ನ ಪ್ರಾಂಶುಪಾಲ ಬಿ ಶ್ರೀಶೈಲಗೌಡ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ಹೇಮಂತ್ ಕುಮಾರ್ ಅತಿಥಿಗಳನ್ನು ಪರಿಚಯಿಸಿದರು. ಉಮ್ಮೆ ಸಲ್ಮಾ ವಂದನಾರ್ಪಣೆ ಸಲ್ಲಿಸಿದರು. ಗೌಸಿಯಾ ಬೇಗಂ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪಾಲಿಟೆಕ್ನಿಕ್ನ ಸಿಬ್ಬಂದಿ ವರ್ಗ ಹಾಗೂ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.