ಬಳ್ಳಾರಿ, ಮೇ 17:ಡೆಂಗ್ಯೂ ಜ್ವರದ ಅಪಾಯಗಳು ಮತ್ತು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ರೋಗ ಲಕ್ಷಣ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದೇಶದಲ್ಲಿ ಪ್ರತಿ ವರ್ಷ ಮೇ 16 ರಂದು ರಾಷ್ಟ್ರೀಯ ಡೆಂಗ್ಯೂ ದಿನ ಆಚರಿಸಲಾಗುತ್ತದೆ ಎಂದು ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ಡಿ.ಸುಕುಂ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ “ಡೆಂಗ್ಯೂ ಸೋಲಿಸಲು ಹೆಜ್ಜೆಗಳು: ಪರಿಶೀಲಿಸಿ, ಸ್ವಚ್ಚಗೊಳಿಸಿ, ಮುಚ್ಚಿಡಿ” ಎಂಬ ಘೋಷವಾಕ್ಯದಡಿ “ರಾಷ್ಟ್ರೀಯ ಡೆಂಗ್ಯೂ” ದಿನಾಚರಣೆ ಅಂಗವಾಗಿ ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಮೇಲ್ವಿಚಾರಕರು ಹಾಗೂ ಪೌರ ಕಾರ್ಮಿಕರಿಗೆ ಜಿಲ್ಲಾ ಮಟ್ಟದ ಪುನರ್ ಮನನ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡೆಂಗ್ಯೂ ಜ್ವರದ ಬಗ್ಗೆ ಭಯ ಬೇಡ ಆದರೆ ಎಚ್ಚರವಿರಲಿ. ಎಲ್ಲರೂ ನಮ್ಮ ಸುತ್ತ ಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಂಡು ಡೆಂಗ್ಯೂ ರೋಗ ಹರಡದಂತೆ ತಡೆಯೋಣ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಮಾತನಾಡಿ, ಜಿಲ್ಲೆಯಾದ್ಯಂತ ಡೆಂಗ್ಯೂ ಜ್ವರ ಹರಡುವುದನ್ನು ಎದುರಿಸಲು ಮತ್ತು ನಿಯಂತ್ರಿಸಲು ಆರೋಗ್ಯ ಇಲಾಖೆಯು ಮಾಡುತ್ತಿರುವ ನಿರಂತರ ಪ್ರಯತ್ನಗಳ ಭಾಗವಾಗಿ ಪ್ರತಿ ವರ್ಷ ಮೇ 16 ರಂದು ರಾಷ್ಟಿçಯ ಡೆಂಗ್ಯೂ ದಿನವನ್ನು ಆಚರಿಸಲಾಗುತ್ತದೆ.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾ ಕಛೇರಿಯ ವಾರ್ಷಿಕವಾಗಿ ಆಯೋಜಿಸುವ ಈ ದಿನವು ಡೆಂಗ್ಯೂ (ಸೊಳ್ಳೆಯಿಂದ ಹರಡುವ ವೈರಸ್) ಬಗ್ಗೆ ಜಾಗೃತಿ ಮೂಡಿಸಲು ಮತ್ತು ತಡೆಗಟ್ಟುವಿಕೆ, ಶಿಕ್ಷಣ ಮತ್ತು ಆರಂಭಿಕ ಹಸ್ತಕ್ಷೇಪ ತಂತ್ರಗಳ ಮೂಲಕ ಸಾಮೂಹಿಕ ಕ್ರಮವನ್ನು ಉತ್ತೇಜಿಸಲು ಸಮರ್ಪಿಸಲಾಗಿದೆ ಹಾಗೂ ಜಿಲ್ಲೆಯಲ್ಲಿ ಯಾವುದೇ ಡೆಂಗಿ ಮರಣ ಪ್ರಕರಣಗಳು ವರದಿಯಾಗದಂತೆ ಸಮಯೋಚಿತರಾಗಿ ಕಾರ್ಯನಿರ್ವಹಿಸಲು ಹಾಗೂ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಶಸ್ತç ಚಿಕಿತ್ಸರಾದ ಡಾ.ಎನ್.ಬಸರೆಡ್ಡಿ ಮಾತನಾಡಿ, ಡೆಂಗ್ಯೂ ಎಂಬುದು ಸೋಂಕಿತ ಈಡಿಸ್ ಈಜಿಪ್ಟಿ ಸೊಳ್ಳೆಯ ಕಡಿತದಿಂದ ಹರಡುವ ವೈರಸ್ ಆಗಿದ್ದು, ಇದನ್ನು ಸಾಮಾನ್ಯವಾಗಿ ಡೆಂಗ್ಯೂ ಸೊಳ್ಳೆ ಎಂದು ಕರೆಯಲಾಗುತ್ತದೆ.
ಈ ರೋಗವು ಸೊಳ್ಳೆಗಳ ಸಂತಾನೋತ್ಪತ್ತಿ ಪರಿಸ್ಥಿತಿಗಳು ಸೂಕ್ತವಾಗಿರುವ ಮಳೆಗಾಲ ಮತ್ತು ನಂತರ ಹೆಚ್ಚಾಗುತ್ತದೆ. ಡೆಂಗ್ಯೂ ತಡೆಗಟ್ಟುವ ಕಾರ್ಯಕ್ರಮಗಳಲ್ಲಿ ಸಮುದಾಯ ಭಾಗವಹಿಸುವಿಕೆಯನ್ನುಉತ್ತೇಜಿಸುವುದು.
ಚಿಕಿತ್ಸೆ ಮತ್ತು ನಿಯಂತ್ರಣ ಕ್ರಮಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಹರಡುವುದು.
ಸರ್ಕಾರದ ಉಪಕ್ರಮಗಳು ಮತ್ತು ಆರೋಗ್ಯ ಸೇವೆಯ ಲಭ್ಯತೆಯನ್ನು ಎತ್ತಿತೋರಿಸುವುದು.
ಡೆಂಗ್ಯೂ ಋತುವಿಗೆ ಮುನ್ನ ಮುಂಜಾಗ್ರತಾ ಕ್ರಮಕೈಗೊಳ್ಳಲು ಸ್ಥಳೀಯ ಅಧಿಕಾರಿಗಳನ್ನು ಸಜ್ಜುಗೊಳಿಸುವುದು ಎಂದು ತಿಳಿಸಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾ ಕಾರ್ಯಕ್ರಮ ಅನುಷ್ಟಾನಾಧಿಕಾರಿ ಡಾ.ಆರ್.ಅಬ್ದುಲ್ಲಾ ಅವರು ಪ್ರಾಸ್ತವಿಕವಾಗಿ ಮಾತನಾಡಿ, ರಾಜ್ಯಾದ್ಯಂತ ಡೆಂಗ್ಯೂ ಈಗ ಸ್ಥಳೀಯ ರೋಗವಾಗಿರುವುದರಿಂದ ಹೆಚ್ಚಿನ ಜನರು ಡೆಂಗ್ಯು ಸೋಂಕಿನ ಅಪಾಯದಲ್ಲಿದ್ದಾರೆ. ರಾಷ್ಟ್ರೀಯ ಡೆಂಗ್ಯೂ ದಿನ-2025 ನ್ನು ಡೆಂಗ್ಯೂ ಸೋಲಿಸುವ ಹೆಜ್ಜೆಗಳು: ಪರಿಶೀಲಿಸಿ, ಸ್ವಚ್ಛಗೊಳಿಸಿ, ಮುಚ್ಚಿಡಿ ಎಂಬ ಘೋಷಾವಾಕ್ಯದೊಂದಿಗೆ ಪ್ರಸ್ತುತ ಜಿಲ್ಲೆಯಲ್ಲಿ ಬೀಳುತ್ತಿರುವ ಬೇಸಿಗೆ ಮಳೆ ಹಾಗೂ ಮುಂಬರುವ ಮಳೆಗಾಲದ ದಿನಗಳಲ್ಲಿ ಡೆಂಗಿ ಜ್ವರ ಹರಡುವ ಈಡೀಸ್ ಸೊಳ್ಳೆಗಳ ಉತ್ಪತ್ತಿ ತಾಣಗಳು ಹೆಚ್ಚಾಗಿದ್ದು, ಡೆಂಗ್ಯೂ ಜ್ವರ ಪ್ರಕÀರಣವು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸುವ ಸಾಧ್ಯತೆ ಅಧಿಕವಾಗಿರುವ ಹಿನ್ನಲೆಯಲ್ಲಿ ಡೆಂಗ್ಯೂ ನಿಯಂತ್ರಣದ ಸಂಬAಧ ಈಡೀಸ್ ಲಾರ್ವ ನಿರ್ಮೂಲನೆಯನ್ನು ತೀರ್ವಗೊಳಿಸುವುದು ಪ್ರಮುಖ ಗುರಿಯಾಗಿದೆ.
ಡೆಂಗ್ಯೂ ಜ್ವರ ನಿಯಂತ್ರಣದಲ್ಲಿ ಈಡೀಸ್ ಲಾರ್ವ ನಿರ್ಮೂಲನೆಯೇ ಅಸ್ತ್ರವಾಗಿದ್ದು, ಈಡೀಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ಪರಿಶೀಲಿಸಿ, ಸ್ವಚ್ಚಗೊಳಿಸಿ, ಮುಚ್ಚಿಡುವುದರ ಮೂಲಕ ಈಡೀಸ್ ಉತ್ಪತ್ತಿಯನ್ನು ನಿಯಂತ್ರಿಸಬಹುದಾಗಿದೆ. ಈ ಸರಳ ವಿಧಾನದಿಂದ ಡೆಂಗ್ಯೂ ಜ್ವರ ಪ್ರಕÀರಣವನ್ನು ತಡೆಗಟ್ಟಬಹುದಾಗಿದ್ದು, ಸದರಿ ಚಟುವಟಿಕೆಯನ್ನು ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಹಾಗೂ ತಮ್ಮ ದೈನಂದಿನ ಕರ್ತವ್ಯದ ಭಾಗವಾಗಿ ಕೈಗೊಳ್ಳುವಂತೆ ಮಾಡುವುದು ಅಗತ್ಯವಾಗಿದೆ ಎಂದು ಹೇಳಿದರು.
*ಡೆಂಗ್ಯೂ ಜ್ವರದ ಲಕ್ಷಣಗಳು:*
ತೀವ್ರಜ್ವರ, ತೀವ್ರ ತಲೆನೋವು, ಕಣ್ಣುಗಳ ಹಿಂದೆ ನೋವು, ಸ್ನಾಯು ಮತ್ತು ಕೀಲುನೋವು, ವಾಕರಿಕೆ ಮತ್ತು ವಾಂತಿ, ಚರ್ಮದ ದದ್ದು, ಸೌಮ್ಯ ರಕ್ತಸ್ರಾವ (ಉದಾ: ಮೂಗಿನ ರಕ್ತಸ್ರಾವ, ಒಸಡುಗಳಿಂದ ರಕ್ತಸ್ರಾವ).
ಹೆಚ್ಚಿನ ಡೆಂಗ್ಯೂ ಪ್ರಕರಣಗಳು ಸೌಮ್ಯವಾಗಿರುತ್ತವೆ. ಆದರೆ ಕೆಲವು ಸಂದರ್ಭಗಳಲ್ಲಿ ಇದು ತೀವ್ರವಾದ ಡೆಂಗ್ಯೂಆಗಿ ಮುಂದುವರಿಯಬಹುದು. ಇದನ್ನು ಡೆಂಗ್ಯೂ ಹೆಮರಾಜಿಕ್ಜ್ವರ ಎಂದೂ ಕರೆಯುತ್ತಾರೆ. ಇದು ಆಂತರಿಕ ರಕ್ತಸ್ರಾವ, ಅಂಗಾAಗ ವೈಫಲ್ಯ ಮತ್ತು ಸಾವಿಗೆ ಕಾರಣವಾಗಬಹುದೆಂದು ತಿಳಿಸಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಡೆಂಗ್ಯೂ ನಿಯಂತ್ರಣ ನಮ್ಮೆಲ್ಲರ ಜವಬ್ದಾರಿ ಎಂಬ ಭಿತ್ತಿ ಪತ್ರವನ್ನು ಬಿಡುಗಡೆಗೊಳಿಸಿದರು.
ಬಳಿಕ ಜಿಲ್ಲಾ ವಿಬಿಡಿಸಿ ಸಮಾಲೋಚಕರಾದ ಪ್ರತಾಪ್.ಹೆಚ್ ಅವರು ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಣಾಧಿಕಾರಿಗಳಿಗೆ, ಮೇಲ್ವಿಚಾರಕರಿಗೆ ಹಾಗೂ ಪೌರ ಕಾರ್ಮಿಕರಿಗೆ ಈಡೀಸ್ ಲಾರ್ವ ಉತ್ಪತ್ತಿ ತಾಣಗಳ ನಾಶ ಕಾರ್ಯದ ಕುರಿತು ತರಬೇತಿ ನೀಡಿದರು.
ಡೆಂಗ್ಯೂ ದಿನಾಚರಣೆ ಅಂಗವಾಗಿ ಜಿಲ್ಲಾ ಆಸ್ಪತ್ರೆ ಮುಂಭಾಗದಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳಾದ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ವೀರೇಂದ್ರಕುಮಾರ್, ಆರ್.ಸಿ.ಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ವಿಬಿಡಿಸಿ ಕಾರ್ಯಕ್ರಮ ಅನುಷ್ಠನಾ ಅಧಿಕಾರಿಗಳಾದ ಡಾ.ಪೂರ್ಣೀಮಾ ಕಟ್ಟಿಮನಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಈಶ್ವರ ದಾಸಪ್ಪನವರ ಸೇರಿದಂತೆ ರವೀಂದ್ರ ಜಿನಗಾ, ಮರಿಬಸವನ ಗೌಡ ಚಾನಾಳ್ ಹಾಗೂ ಶಕುಂತಲಾ.ಬಿ, ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ವಿಬಿಡಿಸಿ ಸಿಬ್ಬಂದಿ ವರ್ಗದವರು ಇತರರು ಉಪಸ್ಥಿತರಿದ್ದರು.