ವಿದ್ಯಾವರ್ಧಕ  ಸಂಘವನ್ನು ಮತ್ತೆ ಸದೃಢಗೊಳಿಸುವೆವು :ಮೋಹನ ಲಿಂಬಿಕಾಯಿ.

Ravi Talawar
 ವಿದ್ಯಾವರ್ಧಕ  ಸಂಘವನ್ನು ಮತ್ತೆ ಸದೃಢಗೊಳಿಸುವೆವು :ಮೋಹನ ಲಿಂಬಿಕಾಯಿ.
WhatsApp Group Join Now
Telegram Group Join Now
ಧಾರವಾಡ; ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆ ಮೇ ೨೫ರಂದು ನಡೆಯಲಿದ್ದು, ಪಾಪು ಅಭಿಮಾನಿ ಬಳಗದ ತಂಡ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಮೋಹನ ಲಿಂಬಿಕಾಯಿ ತಿಳಿಸಿದರು.
 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಟೀಲ ಪುಟ್ಟಪ್ಪ ನಿಧನದ  ಬಳಿಕ ಸಂಘದ ಅಭಿವೃದ್ಧಿ ಹೇಳಿಕೊಳ್ಳುವಷ್ಟು ಆಗಿಲ್ಲ. ಸರ್ಕಾರದಿಂದ ವಿಶೇಷ ಅನುದಾನ ತರುವಲ್ಲೂ ವಿಫಲವಾಗಿದೆ. ಹೀಗಾಗಿ ಸಂಘವನ್ನು ಮತ್ತೆ ಸದೃಢಗೊಳಿಸಲು, ಪಾಟೀಲ ಪುಟ್ಟಪ್ಪ ಆಶಯದಂತೆ ಕಾರ್ಯ ನಿರ್ವಹಿಸಲು ನಮ್ಮ ತಂಡ ಚುನಾವಣೆ ಕಣಕ್ಕಿಳಿದಿದೆ ಎಂದರು.
ನಾನು ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೂ ರಾಜಕೀಯೇತರ ಹಾಗೂ ಜಾತ್ಯತೀತವಾಗಿ ಚುನಾವಣೆ ನಡೆಸುತ್ತೇವೆ. ಇಷ್ಟು ವರ್ಷ ಸೇವೆ ಸಲ್ಲಿಸಿರುವ ಚಂದ್ರಕಾಂತ ಬೆಲ್ಲದ ವಿಶ್ರಾಂತಿ ಪಡೆಯುವ ಮೂಲಕ ಬೇರೆಯವರಿಗೆ ಅವಕಾಶ ಕಲ್ಪಿಸಿಕೊಡಲಿ ಎಂದು ಮನವಿ ಮಾಡಿದ ಲಿಂಬಿಕಾಯಿ, ಸಂಘವನ್ನು ಆರ್ಥಿಕವಾಗಿ ಸಬಲಗೊಳಿಸುವುದೇ ನಮ್ಮ ಉದ್ದೇಶ ಎಂದರು.
ಸಂಘದ ಅಧ್ಯಕ್ಷನಾಗಿ ಆಯ್ಕೆಯಾದರೆ ಕಿಂಚಿತ್ತು ತೊಂದರೆ ಆಗದಂತೆ, ಸಂಘದೊಳಗೆ ರಾಜಕೀಯ ನುಸುಳದಂತೆ ಎಚ್ಚರ ವಹಿಸಿ ಕೆಲಸ ಮಾಡುತ್ತೇನೆ. ಸಂಘಕ್ಕೆ ಹೊಸ ಚೈತನ್ಯ, ಹೊಸ ಕಾಯಕಲ್ಪ ನೀಡುವ ಕೆಲಸದ ಜತೆಗೆ ಸಂಘದ ಹೋರಾಟದ ಕಿಚ್ಚನ್ನು ಹೆಚ್ಚಿಸುವ, ಸಂಘಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಆರ್ಥಿಕವಾಗಿ ಬಲಿಷ್ಠಗೊಳಿಸುವ ಕೆಲಸ ಮಾಡುತ್ತೇವೆ ಎಂದರು.
ಪ್ರಕಾಶ ಉಡಿಕೇರಿ ಮಾತನಾಡಿ, ಪಾಟೀಲ ಪುಟ್ಟಪ್ಪ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನ ತರುತ್ತಿದ್ದರು. ಈಗ ಆ ಕೆಲಸ ನಡೆಯುತ್ತಿಲ್ಲ. ಸರ್ಕಾರ ಕಡಿತಗೊಳಿಸಿರುವ ಶೇ. ೫೦ರಷ್ಟು ಅನುದಾನವನ್ನು ಹೆಚ್ಚಿಸಲು ಸಾಧ್ಯವಾಗಿಲ್ಲ. ಈ ಹಿಂದೆ ಸಂಘದಲ್ಲಿ ಕೂಡಿಟ್ಟಿದ್ದ ಠೇವಣಿ ಸಹ ಕರಗುತ್ತಿದೆ. ಆದಾಗ್ಯೂ ಸಂಘ ಯಾವುದೇ ಅಭಿವೃದ್ಧಿ ಕಂಡಿಲ್ಲ ಎಂದರು.
ಸಂಘದ ಚುನಾವಣೆ ಘೋಷಣೆ ಬಳಿಕ ಸಂಘದಲ್ಲಿ ಯಾವುದೇ ಕಾರ್ಯಕ್ರಮ ನಡೆಯಬಾರದು. ಆದರೆ ನಿತ್ಯ, ನಿರಂತರವಾಗಿ ನಡೆಯುತ್ತಿವೆ. ಚುನಾವಣಾ ಅಧಿಕಾರಿಗಳು ಪಾರದರ್ಶಕವಾಗಿ ಚುನಾವಣೆ ನಡೆಸಲಿ ಎಂದು ಮನವಿ ಮಾಡಿದರು.
ಡಾ. ಶರಣಪ್ಪ ಕೊಟಗಿ, ಮನೋಜ ಪಾಟೀಲ, ಮಾರ್ತಾಂಡಪ್ಪ ಕತ್ತಿ, ರತ್ನಾ ಐರಸಂಗ, ಪ್ರೊ. ಹರ್ಷ ಡಂಬಳ, ಪ್ರಭು ಹಂಚಿನಾಳ, ಇತರರು ಇದ್ದರು.
WhatsApp Group Join Now
Telegram Group Join Now
Share This Article