ಪೋಷಕರು ಮಕ್ಕಳ ಕೈಗೆ ಮೊಬೈಲ್ ನೀಡಬೇಡಿ: ಎಂ.ಕೆ.ಪೂಜಾರ

Ravi Talawar
ಪೋಷಕರು ಮಕ್ಕಳ ಕೈಗೆ ಮೊಬೈಲ್ ನೀಡಬೇಡಿ: ಎಂ.ಕೆ.ಪೂಜಾರ
WhatsApp Group Join Now
Telegram Group Join Now
ಮೊಬೈಲ್ ಬಳಕೆಯಿಂದ ಮಕ್ಕಳ ಮಾನಸಿಕ ಹಾಗೂ ಬೌದ್ಧಿಕ ವಿಕಸನಕ್ಕೆ ಕುಂಠಿತವಾಗುತ್ತಿದ್ದು ಪೋಷಕರು ತಮ್ಮ ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರ ಇಡುವುದು ಉತ್ತಮವೆಂದು ಕವಿ, ಲೇಖಕ, ಕಥೆಗಾರ, ಚಿತ್ರ ನಿರ್ದೇಶಕ ಮತ್ತು ಲಿಂಗದಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಮಂಜುನಾಥ ಕೆ.ಪೂಜಾರ ತಿಳಿಸಿದರು.
ತಾಲೂಕಿನ ಶಹಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವದೆಹಲಿಯ ಕಲಿಕೆ ಟಾಟಾ ಟ್ರಸ್ಟ್ ಹಾಗೂ ಕೊಪ್ಪಳ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಹತ್ತು ದಿನಗಳ ಕಾಲ ಹಮ್ಮಿಕೊಂಡಿದ್ದ ಚಿತ್ರಕಥಾ ಪುಸ್ತಕ ರಚನಾ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಮೊಬೈಲ್ ಬಳಕೆಯಿಂದ ಮಕ್ಕಳು ವಿವಿಧ ರೀತಿಯ ಮಾನಸಿಕ ವ್ಯಾಧಿಗೆ ಒಳಗಾಗುತ್ತಾರೆ. ಮೊಬೈಲ್ ಒಂದು ಕೌಟುಂಬಿಕ ಹಾಗೂ ಸಾಮಾಜಿಕ ಜಾಡ್ಯವಾಗಿ ಪರಿಣಮಿಸಿದೆ. ಕಲಿಕೆಯೇ ಜೀವನವಲ್ಲ. ಶಿಕ್ಷಕರು ಬೋಧಿಸುವ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಮಕ್ಕಳು ರೂಢಿಸಿಕೊಳ್ಳಬೇಕು. ಇಂತಹ ಕಾರ್ಯಾಗಾರದಿಂದ ಸೂಕ್ತ ತರಬೇತಿ ಪಡೆದು ಉತ್ತಮ ವಿದ್ಯಾಭ್ಯಾಸ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದರು.
ಉದ್ಯಮಿ ಗಿರೀಶ್ ಹಿರೇಮಠ ಮಾತನಾಡಿ, ಮಕ್ಕಳು ಮನರಂಜನೆಯ ಜೊತೆಗೆ ವಿವಿಧ ಹಾಗೂ ವೈವಿಧ್ಯ ನಮೂನೆಯ ಕಲಿಕಾ ಸಾಮರ್ಥ್ಯವನ್ನು ಮೈಗೂಡಿಸಿಕೊಳ್ಳಲು ಈ ಕಾರ್ಯಾಗಾರ ಪೂರಕವಾಗಿದೆ. ಮೊಬೈಲ್ ನಿಂದ ದೂರ ಇದ್ದು ಪಠ್ಯ ಪುಸ್ತಕದ ಓದಿನಲ್ಲಿ ಮಗ್ನರಾದರೆ ಮುಂದಿನ ದಿನಗಳಲ್ಲಿ ಮಕ್ಕಳು ಉತ್ತಮ ನಾಗರಿಕರಷ್ಟೇ ಅಲ್ಲ, ಸಾಧಕರಾಗಿ ಹೊರ ಹೊಮ್ಮಲು ಸಾಧ್ಯ ಎಂದರು.
ಸಮಾಜ ಸೇವಕ ವೀರಣ್ಣ ಕೋಮಲಾಪುರ ಮಾತನಾಡಿ, ನಮ್ಮ ಗ್ರಾಮ ಪ್ರಕೃತಿ ದತ್ತವಾಗಿರುವ ಸಂಪನ್ಮೂಲಗಳನ್ನು ಹೊಂದಿದೆ. ಹತ್ತಿರದಲ್ಲಿಯೇ ಇರುವ ಐತಿಹಾಸಿಕ ಸ್ಮಾರಕಗಳ ವೀಕ್ಷಣೆ ಪಡೆದು ಅಂದಿನ ಗತಕಾಲದ ವೈಭವಗಳ ಪ್ರೇರಣೆ ಪಡೆಯಬೇಕು. ಸ್ಕಂದ ಪುರಾಣದಲ್ಲಿ ಉಲ್ಲೇಖಿತವಾಗಿರುವ ಅಂದಿಗಾಲೀಶ ಬೆಟ್ಟ, ಐತಿಹಾಸಿಕ ತಿರುಗಲ್ ತಿಮ್ಮ ಬೆಟ್ಟ ಸೇರಿದಂತೆ ಅನೇಕ ಐತಿಹಾಸಿಕ ತಾಣಗಳನ್ನು ವೀಕ್ಷಿಸಬೇಕು. ಶಾಲಾ ಶಿಕ್ಷಕರು ನಮ್ಮ ಗ್ರಾಮದ ಸುತ್ತಮುತ್ತಲಿರುವ ಗುಡ್ಡ, ಗಹ್ವರಗಳು ಮತ್ತು ಐತಿಹಾಸಿಕ ಸ್ಮಾರಕಗಳ ಪರಿಚಯವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕು. ಮಕ್ಕಳು ಕೂಡ ಶಿಕ್ಷಕರು ಬೋಧಿಸುವ ಪ್ರತಿಯೊಂದು ಪಾಠವನ್ನು ಮನನ ಮಾಡಿಕೊಳ್ಳಬೇಕೆಂದರು.
ಪತ್ರಕರ್ತ ಮಲ್ಲಿಕಾರ್ಜುನ ಜೋಷಿ ಕಾರ್ಯಕ್ರಮವನ್ನು ಊದನಕಡ್ಡಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮದ ಪೂಜ್ಯರೆನಿಸಿದ್ದ ಗೋವಿಂದರಾವ್ ಕುಲಕರ್ಣಿ ಅವರು ಬಾಲ್ಯದಲ್ಲಿದ್ದಾಗ ನಮಗೆಲ್ಲ ಧಾರ್ಮಿಕತೆ, ಸಮಾಜ ಸೇವೆ, ಗುರು ಹಿರಿಯರು ಮತ್ತು ದೇವರ ಮೇಲೆ ಭಕ್ತಿ ಹೊಂದಬೇಕೆAದು ಹೇಳುತ್ತಿದ್ದರು. ಕೋಮು ಸೌಹಾರ್ದತೆ ಮತ್ತು ಐಕ್ಯತೆಗೆ ಶಹಪುರ ಗ್ರಾಮ ಶತಮಾನಗಳಿಂದಲೂ ತನ್ನದೇ ಆದ ಮಹತ್ವ ಹೊಂದಿದೆ. ಅವರ ಶಿಷ್ಯರಲ್ಲಿ ಅನೇಕರು ಸಾಮಾಜಿಕ, ಔದ್ಯಮಿಕ, ರಾಜಕೀಯ, ಶೈಕ್ಷಣಿಕ, ಪೊಲೀಸ್ ಇಲಾಖೆ, ಪತ್ರಿಕೋದ್ಯಮ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದಾರೆ. ಶಾಲೆಯ ಮಕ್ಕಳು ಗ್ರಾಮದ ಸುತ್ತಮುತ್ತಲಿನ ಪರಿಸರವನ್ನು ಪ್ರೀತಿಸಬೇಕು. ಸೂರ್ಯೋದಯ, ಸೂರ್ಯಾಸ್ತಗಳನ್ನು ಕಣ್ತುಂಬಿಸಿಕೊಳ್ಳಲು ಗ್ರಾಮದ ಹೊರ ವಲಯದಲ್ಲಿರುವ ಸವುಳು ಹಳ್ಳದ ಕೆರೆ, ಸಿಹಿ ನೀರಿನ ಹಳ್ಳ, ಕೋಡಿ ಹಳ್ಳಗಳ ಜುಳು ಜುಳು ನಿನಾದ ಆಲಿಸಬೇಕು. ಹಕ್ಕಿಗಳ ಕಲರವ, ಇಂಚರಗಳನ್ನು ಆಸ್ವಾದಿಸಿ ಪ್ರಕೃತಿಯ ಸೊಬಗನ್ನು ಸವಿಯಬೇಕಂದರು. ಅಲ್ಲದೆ, ಇದೇವೇಳೆ ಪೂಜ್ಯ ಗೋವಿಂದರಾವ್ ಕುಲಕರ್ಣಿ ಅವರು ಬಾಲ್ಯದಲ್ಲಿ ತಮಗೆ ಕಲಿಸಿದ್ದ ದೇವರ ನಾಮಗಳನ್ನು ಮಕ್ಕಳಿಂದ ಹಾಡಿಸಿದರು.
ಕಲಿಕೆ ಟಾಟಾ ಟ್ರಸ್ಟ್ ನ ಸಂಪನ್ಮೂಲ ವ್ಯಕ್ತಿಗಳಾದ ಟಿವಿ ಸೀರಿಯಲ್ ನಟರು, ಮಕ್ಕಳ ಸಾಹಿತ್ಯ ರಚನಾಕಾರರು, ಲೇಖಕರಾದ ಕೈಲಾಸ್ ಟಿ.ವಿ. ಅವರು ಮಕ್ಕಳನ್ನುದ್ದೇಶಿಸಿ ಮಾತನಾಡಿ ಕಾರ್ಯಾಗಾರದ ಮಹತ್ವವನ್ನು ತಿಳಿಸಿದರು. ಕಲಾ ಶಿಕ್ಷಕಿ, ಮಕ್ಕಳ ಸಾಹಿತ್ಯ ರಚನೆಕಾರ್ತಿ, ಲೇಖಕಿ ವನಿತಾ ಯಾಜಿ ಅವರು ಗಿಣಿಗೇರಾ, ಬುಡಶೆಟ್ಟನಾಳ ಮತ್ತು ಶಹಪುರ ಗ್ರಾಮದಲ್ಲಿ ತಮ್ಮ ಪತಿಯೊಂದಿಗೆ ಕಾರ್ಯಾಗಾರವನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟರು.
ಕಲಿಕೆ ಟಾಟಾ ಟ್ರಸ್ಟ್ ನ ಸಂಯೋಜಕರಾದ ಆಂಜನೇಯ ಮತ್ತು ಸಂಪನ್ಮೂಲ ವ್ಯಕ್ತಿಗಳಿಗೆ ಶಾಲೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಹುಲ್ಲೇಶ್ ಸಿಂದೋಗಿ, ಉಪಾಧ್ಯಕ್ಷೆ ರೇವತಿ ಗೋನಾಳ್, ಟ್ರಸ್ಟ್ ಸಹಾಯಕಿ ಜ್ಯೋತಿ ನರೇಗಲ್, ಗ್ರಾಮದ ಮುಖಂಡರಾದ ನಾಗರಾಜ ಹಳ್ಳಿಗುಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಮುಖ್ಯೋಪಾಧ್ಯಾಯರಾದ ದೇವರಾಜ್ ಅವರು ಕಾರ್ಯಕ್ರಮಕ್ಕೆ ಅತಿಥಿಗಳನ್ನು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಸಹ ಶಿಕ್ಷಕರಾದ ಶರಣಬಸಪ್ಪ ಜವಳಿ ಅವರು ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಕಾರ್ಯಾಗಾರದಲ್ಲಿ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article