ದಾವಣಗೆರೆ: ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್, ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳನ್ನು ಸೇವಿಸುವುದು ಮಹಾ ಅಪರಾಧವೆಂದು ತಿಳಿದಿದ್ದರೂ ಸಹ ಅದನ್ನು ಉಲ್ಲಂಘನೆ ಮಾಡುವವರಿದ್ದಾರೆ. ಆದರೆ ಇನ್ನುಮುಂದೆ ಇದನ್ನು ಸಹಿಸಿಕೊಂಡು ಇರಬೇಕಾದ ಅಗತ್ಯವಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಜನಸಾಮಾನ್ಯರಿಗೆ ಧೂಮಪಾನ, ತಂಬಾಕಿನಿಂದ ತೊಂದರೆ ಆಗುತ್ತಿದ್ದರೆ, ಅಂತಹ ವ್ಯಕ್ತಿಯ ಫೋಟೋವನ್ನು ಸ್ಟಾಪ್ ಟೊಬ್ಯಾಕೋ ಆ್ಯಪ್ನಲ್ಲಿ ನೀವು ಅಪ್ಲೋಡ್ ಮಾಡಬಹುದಾಗಿದೆ.
ಹೀಗೆ ಫೋಟೋ ಅಪ್ಲೋಡ್ ಮಾಡಿದ ತಕ್ಷಣ ಹತ್ತಿರದಲ್ಲಿರುವ ಅಧಿಕಾರಿ ಸ್ಥಳಕ್ಕಾಗಮಿಸಿ ದಂಡ ವಿಧಿಸಲಿದ್ದಾರೆ. ಇದೇ ತಪ್ಪು ಪದೇ ಪದೆ ಮರುಕಳಿಸಿದರೆ ಅಂಗಡಿ ಹಾಗೂ ಸಿಗರೇಟ್ ಸೇದಿದ ವ್ಯಕ್ತಿಯ ಮೇಲೆ ಎಫ್ಐಆರ್ ಕೂಡ ದಾಖಲಿಸುವ ಅಧಿಕಾರವನ್ನು ಸರ್ಕಾರವು ಅಧಿಕಾರಿಗಳಿಗೆ ನೀಡಿದೆ. ಕೊಟ್ಪಾ ಕಾಯ್ದೆಯಡಿಯಲ್ಲಿ ಆ್ಯಪ್ ಕಾರ್ಯ ನಿರ್ವಹಿಸಲಿದೆ.
ಸರ್ಕಾರ ಆ್ಯಪ್ ನಿರ್ವಹಣೆ ಮಾಡಲು ಗೂಗಲ್ ಗ್ಲೋಬಲ್ ಟಿವಿಎಸ್ ಎಂಬ ಸಂಸ್ಥೆಗೆ ಜವಾಬ್ದಾರಿ ವಹಿಸಿದೆ. ಸದ್ಯ ನವೀಕರಣ ಹಾಗೂ AI ತಂತ್ರಜ್ಞಾನ ಅಳವಡಿಸುವ ಕುರಿತು ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆ್ಯಪ್ ಕಾರ್ಯವನ್ನು ನಿಲ್ಲಿಸಲಾಗಿದೆ. ಕೆಲ ದಿನಗಳಲ್ಲಿ ಸಾರ್ವಜನಿಕ ಬಳಕೆಗೆ ಈ ಆ್ಯಪ್ ಕಾರ್ಯಪ್ರವೃತ್ತಗೊಳ್ಳಲಿದೆ. ತಾಲೂಕು ಮಟ್ಟ, ಜಿಲ್ಲಾ ಮಟ್ಟದಲ್ಲಿ ತಂಬಾಕು ಮಾರಾಟ ಮಾಡುವ ಅಂಗಡಿಗಳ ಮೇಲೆ ಈಗಾಗಲೇ ದಾಳಿ ನಡೆಸಿ ದಂಡ ವಿಧಸುವ ಕೆಲಸವನ್ನು ಜಿಲ್ಲಾ ತಂಬಾಕು ಕೋಶದ ಅಧಿಕಾರಿಗಳು ಮಾಡುತ್ತಿದ್ದಾರೆ.