ಬೆಂಗಳೂರು: ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರು-ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸರಿಯಾಗಿ ಪಾಲನೆ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುರುವಾರ ವಿಧಾನಸೌಧದಲ್ಲಿ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಹಾಗೂ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಜಂಟಿ ಸಭೆಯಲ್ಲಿ ಭಾಗವಹಿಸಿ ಮುಖ್ಯಮಂತ್ರಿಗಳು ಮಾತನಾಡಿದರು.
ಈ ವೇಳೆ ಗ್ರಾಮ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಂವಿಧಾನದ (73)(74)ರ ಅನ್ವಯ ಮೀಸಲಾತಿ ಸರಿಯಾಗಿ ಪಾಲನೆ ಆಗುತ್ತಿಲ್ಲ. ಮಹಿಳಾ , ಹಿಂದುಳಿದವರಿಗೆ ಮೀಸಲಾತಿ ಸರಿಯಾಗಿ ಪಾಲನೆ ಆಗುತ್ತಿದೆಯೇ ಎಂಬ ಬಗ್ಗೆ ರಾಜ್ಯದ ನೀತಿ ಆಯೋಗದ ಉಪಾಧ್ಯಕ್ಷರು ಗಮನ ಹರಿಸಬೇಕು. ಇದಕ್ಕಾಗಿ ನಿಯಮಿತವಾಗಿ ರಾಜ್ಯ ಪ್ರವಾಸ ಮಾಡಬೇಕು ಎಂದು ನಿರ್ದೇಶಿಸಿದರು.
ಗ್ರಾಮಠಾಣಾ ಗಡಿಯನ್ನು ಬಹಳ ಹಿಂದೆ ನಿಗದಿಪಡಿಸಲಾಗಿದೆ. ಬಳಿಕ ವಿಸ್ತರಣೆಯಾಗಿರುವ ಪ್ರದೇಶವನ್ನು ಗ್ರಾಮಠಾಣಾ ಗಡಿಗೆ ಸೇರಿಸದ ಹಿನ್ನೆಲೆಯಲ್ಲಿ ವಿಸ್ತರಣೆಯಾಗಿರುವ ಪ್ರದೇಶವನ್ನು ಪುನರ್ ಸಮೀಕ್ಷೆ ನಡೆಸಿ ನಿಗದಿ ಮಾಡಬೇಕು. ಗಡಿ ಗುರುತಿಸುವಿಕೆ ಸಮೀಕ್ಷೆ ಬೇಗ ಪೂರ್ಣಗೊಳಿಸಬೇಕು. ಅನುಮತಿಗಾಗಿ ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ ವತಿಯಿಂದ ಪ್ರಸ್ತಾವನೆ ಕಳುಹಿಸಿ ಎಂದು ಸೂಚನೆ ನೀಡಿದರು.