ಮಂಗಳೂರು: ರೌಡಿಶೀಟರ್ ಮತ್ತು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರನ್ನು ಅಜರುದ್ದೀನ್ (29), ಅಬ್ದುಲ್ ಖಾದರ್ (24) ಮತ್ತು ನೌಶಾದ್ (39) ಎಂದು ಗುರ್ತಿಸಲಾಗಿದೆ. ಅಜರುದ್ದೀನ್ ಮತ್ತು ಖಾದರ್ ಮಂಗಳೂರು ಮೂಲದವರಾಗಿದ್ದರೆ, ನೌಶಾದ್ ಹಾಸನದ ಮೂಲದವನಾಗಿದ್ದಾನೆಂದು ತಿಳಿದುಬಂದಿದೆ.
ಬಜಪೆ ಬಳಿಯ ಕಿನ್ನಿಪದವಿನಲ್ಲಿ ಮೇ 1ರಂದು ರಾತ್ರಿ ಸುಹಾಸ್ ಶೆಟ್ಟಿ ಕೊಲೆ ನಡೆದಿತ್ತು. ಮೇ 3ರಂದು 3 ಆರೊಪಿಗಳನ್ನು ಬಂಧಿಸಲಾಗಿತ್ತು.
ಇದೀಗ ಬಂಧಿತರಾಗಿರುವ ಮೂವರ ಪೈಕಿ ಅಜರುದ್ದೀನ್ ಮೇಲೆ ಪಣಂಬೂರು, ಸುರತ್ಕಲ್ ಮತ್ತು ಮುಲ್ಕಿ ರಾಣೆಗಳಲ್ಲಿ 3 ಕಳವು ಪ್ರಕರಣಗಳು ದಾಖಲಾಗಿವೆ.
ಈತ ಸುಹಾಸ್ ಶೆಟ್ಟಿಯ ಚಲನವಲನದ ಬಗ್ಗೆ ಮಾಹಿತಿ ನೀಡುತ್ತಿದ್ದ. ಅಬ್ದುಲ್ ಖಾದರ್ ಆರೋಪಿಗಳಿಗೆ ಕಾರಿನಲ್ಲಿ ಪರಾರಿಯಾಗಲು ಸಹಕರಿಸಿದ್ದ. ನೌಶಾದ್ ಕೊಲೆಗೆ ಸಂಚು ರೂಪಿಸಲು ನೆರವಾಗಿದ್ದ ಎಂದು ತಿಳಿದುಬಂದಿದೆ.
ನೌಶಾದ್ ವಿರುದ್ಧ ಸುರತ್ಕಲ್, ಬಜ್ಪೆ, ಮೂಡುಬಿದಿರೆ, ಮಂಗಳೂರು ಉತ್ತರ, ಬಂಟ್ವಾಳ ಗ್ರಾಮಾಂತರ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ದರೋಡೆಗೆ ಸಂಚು ಸೇರಿ 6 ಪ್ರಕರಣಗಳು ದಾಖಲಾಗಿವೆ.
ಅಜರುದ್ದೀನ್ಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಅಬ್ದುಲ್ ಖಾದರ್ ಮತ್ತು ನೌಷಾದ್ನನ್ನು ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರರನ್ನು ಬಂಧಿಸಲು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.