ಬೆಳಗಾವಿ: ಭಾರತ ಮತ್ತು ಪಾಕಿಸ್ತಾನ ಮಧ್ಯೆ ಸದ್ಯ ಕದನವಿರಾಮ ಘೋಷಿಸಲಾಗಿದೆ. ಆದರೂ ಉದ್ವಿಗ್ನ ಪರಿಸ್ಥಿತಿ ಇದೆ. ಹೀಗಿರುವಾಗ ಕಿಡಿಗೇಡಿಗಳು ಈ ಸಂದರ್ಭದಲ್ಲಿ ಕೆಲ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಇದೀಗ ಬೆಳಗಾವಿಯ ಸೊಸೆ ಕರ್ನಲ್ ಸೋಫಿಯಾ ಖುರೇಷಿ ಕುರಿತು ಸುಳ್ಳು ಸುದ್ದಿಯೊಂದು ವೈರಲ್ ಆಗಿದೆ.
ಬೆಳಗಾವಿಯ ಸೋಫಿಯಾ ಪತಿ ಮನೆ ಮೇಲೆ ಆರ್ಎಸ್ಎಸ್ ಅಟ್ಯಾಕ್ ಮಾಡಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಆದರೆ ಇದು ಸಂಪೂರ್ಣ ಸುಳ್ಳು ಸುದ್ದಿ ಎಂದು ಎಸ್ಪಿ ಭೀಮಾಶಂಕರ್ ಗುಳೇದ್ ಸ್ಪಷ್ಟನೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಕರ್ನಲ್ ಸೋಫಿಯಾ ಖುರೇಷಿ ಅವರ ಪತಿ ತಾಜುದ್ದೀನ್ ಮನೆ ಇದೆ. ಅನಿಸ್ ಉದ್ದೀನ್ ಎಂಬಾತನಿಂದ ಟ್ವೀಟರ್ನಲ್ಲಿ ಸೋಫಿಯಾ ಪತಿ ಮನೆ ಮೇಲೆ ಆರ್ಎಸ್ಎಸ್ ಅಟ್ಯಾಕ್ ಮಾಡಿದೆ ಎಂದು ಮನೆ ಧ್ವಂಸದ ಯಾವುದೋ ಹಳೇ ಫೋಟೋವನ್ನು ಪೋಸ್ಟ್ ಮಾಡಿದ್ದಾನೆ.
ಗೋಕಾಕ ಸಿಪಿಐ ಸುರೇಶ್ ಆರ್.ಬಿ. ಅವರು ಕೊಣ್ಣೂರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಸೋಫಿಯಾ ಪತಿ ಕರ್ನಲ್ ತಾಜುದ್ದೀನ್ ಬಾಗೇವಾಡಿ ಅವರ ಮನೆ ಮೇಲೆ ಯಾವುದೇ ಅಟ್ಯಾಕ್ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ, ಸುರಕ್ಷತಾ ಕ್ರಮವಾಗಿ ಸೋಫಿಯಾ ಅವರ ಮನೆಗೆ ಗೋಕಾಕ ಪೊಲೀಸರು ರಕ್ಷಣೆ ಒದಗಿಸಿದ್ದಾರೆ.
ಸಾರ್ವಜನಿಕರು ಅನಗತ್ಯವಾಗಿ ಕುಟುಂಬವನ್ನು ಭೇಟಿಯಾಗದಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಇತ್ತ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಅನೀಸ್ ಉದ್ದೀನ್ ಸುಳ್ಳು ಸುದ್ದಿ ಪೋಸ್ಟ್ ಡಿಲಿಟ್ ಮಾಡಿದ್ದಾನೆ. ಸದ್ಯ ಪೊಲೀಸರು ಅನೀಸ್ ಉದ್ದೀನ್ ಪತ್ತೆಗೆ ಬಲೆ ಬೀಸಿದ್ದಾರೆ. ಜೊತೆಗೆ ಸುಳ್ಳು ಸುದ್ದಿ ಪೋಸ್ಟ್ ಕೂಡ ಡಿಲೀಟ್ ಮಾಡಲಾಗಿದೆ. ಸುಳ್ಳು ಸುದ್ದಿ ನಂಬದಂತೆ ಎಸ್ಪಿ ಭೀಮಾಶಂಕರ್ ಗುಳೇದ್ ಮನವಿ ಮಾಡಿದ್ದಾರೆ.