ನೆಲಮಂಗಲ ತಾಲೂಕಿನ ಅಡಕಮಾರನಹಳ್ಳಿ ಬಳಿ ಆಯಿಲ್ ಗೋಡೌನ್​ಗೆ ಬೆಂಕಿ

Ravi Talawar
ನೆಲಮಂಗಲ ತಾಲೂಕಿನ ಅಡಕಮಾರನಹಳ್ಳಿ ಬಳಿ ಆಯಿಲ್ ಗೋಡೌನ್​ಗೆ ಬೆಂಕಿ
WhatsApp Group Join Now
Telegram Group Join Now

ಬೆಂಗಳೂರು, ಮೇ 13: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಅಡಕಮಾರನಹಳ್ಳಿ ಬಳಿ ಆಯಿಲ್ ಗೋಡೌನ್​ಗೆ ಬೆಂಕಿ ತಗುಲಿ ಹೊತ್ತಿ ಉರಿದಿದೆ. ಸುಮಾರು 40 ಸಾವಿರ ಅಡಿಯ ಗೋದಾಮಿನಲ್ಲಿ ಬೆಂಕಿಯ ಕೆನ್ನಾಲಗೆ ವ್ಯಾಪಿಸಿದ್ದು, ಸುಮಾರು 30 ಕೋಟಿ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ ಎಂದು ಅಂದಾಜಿಸಲಾಗಿದೆ. ಮಾಜಿ ಸಚಿವ ಎಚ್​​ಸಿ ಶ್ರೀಕಂಠಯ್ಯ ಅಳಿಯ ಕೃಷ್ಣಪ್ಪಗೆ ಸೇರಿದ ಗೋದಾಮು ಇದಾಗಿದೆ. 20ಕ್ಕೂ ಹೆಚ್ಚು ಅಗ್ನಿಶಾಮಕದಳದ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ.

ಶೆಲ್ ಕಂಪನಿಗೆ ಸೇರಿದ ಆಯಿಲ್ ಉತ್ಪನ್ನಗಳನ್ನು ಗೋದಾಮಿನಲ್ಲಿ ಇರಿಸಲಾಗಿತ್ತು. ನೆಲಮಂಗಲ, ಪೀಣ್ಯ, ಹೆಬ್ಬಾಳ, ರಾಜಾಜಿನಗರ, ಥಣಿಸಂದ್ರ, ಸುಂಕದಕಟ್ಟೆ ಮತ್ತು ಯಶವಂತಪುರ ಅಗ್ನಿಶಾಮಕ ಠಾಣಾ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸುಮಾರು 60 ರಿಂದ 70 ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ನಸುಕಿನ ಮೂರು ಗಂಟೆ ಸಮಯದಲ್ಲಿ ಬೆಂಕಿ ಅವಘಡ ಸುದ್ದಿ ತಿಳಿದ ತಕ್ಷಣದಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಆಯಿಲ್ ಸಂಬಂಧಿತ ಗೋದಾಮು ಆಗಿರುವ ಕಾರಣಕ್ಕೆ ಬೆಂಕಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯರಾತ್ರಿ ಸಮಯದಲ್ಲಿ ಗೋದಾಮಿನಲ್ಲಿ ಶಾರ್ಟ್ ಸರ್ಕ್ಯೂಟ್​​ನಿಂದ ಬೆಂಕಿ ಅವಘಡ ಸಂಭವಿಸಿದೆ. ಸ್ಥಳದಲ್ಲಿ ಯಾರೂ ಇಲ್ಲದ ಕಾರಣಕ್ಕೆ ಬೆಂಕಿ ಇಡೀ ಗೋದಾಮಿಗೆ ವ್ಯಾಪಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬೆಂಕಿ ಅವಘಡದ ದೃಶ್ಯಗಳು 10 ಕಿ.ಮೀ ದೂರದಿಂದಲೂ ಕಾಣಿಸುತ್ತಿದ್ದು, ದಟ್ಟವಾದ ಹೊಗೆ ಆಕಾಶವನ್ನ ಅವರಿಸಿದೆ, ಇದು ಸ್ಥಳೀಯರ ಆತಂಕಕ್ಕೂ ಕಾರಣವಾಗಿದೆ.

WhatsApp Group Join Now
Telegram Group Join Now
Share This Article