ವಿಶ್ವವಿದ್ಯಾಲಯಗಳು ನಿರುದ್ಯೋಗ ಸಮಸ್ಯೆಯ ನಿವಾರಣೆಗೆ ಪರಿಹಾರ ಕಂಡುಕೊಳ್ಳುವಂತಾಗಲಿ – ಸಚಿವ ತಿಮ್ಮಾಪೂರ

Ravi Talawar
ವಿಶ್ವವಿದ್ಯಾಲಯಗಳು ನಿರುದ್ಯೋಗ ಸಮಸ್ಯೆಯ ನಿವಾರಣೆಗೆ ಪರಿಹಾರ ಕಂಡುಕೊಳ್ಳುವಂತಾಗಲಿ – ಸಚಿವ ತಿಮ್ಮಾಪೂರ
WhatsApp Group Join Now
Telegram Group Join Now
ಹಸಿರು ಕ್ರಾಂತಿ ವರದಿ, ಜಮಖಂಡಿ; ದೇಶದಲ್ಲಿ ನಿರುದ್ಯೋಗ ಸಮಸ್ಯೆಯ ಪರಿಹಾರಕ್ಕೆ ವಿಶ್ವವಿದ್ಯಾಲಯಗಳು ಮಾರ್ಗೋಪಾಯ ಕಂಡು ಕೊಳ್ಳಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಹೇಳಿದರು. ನಗರದಲ್ಲಿರುವ ಬಾಗಲಕೋಟೆ ವಿಶ್ವವಿದ್ಯಾಲಯದ 2 ನೇ ಸಂಸ್ಥಾಪನಾ ದಿನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಿತು ನಿರುದ್ಯೋಗಿಗಳಾಗಿ ಅನೇಕ ಯುವಕರು ಉದ್ಯೋಗ ವಿಲ್ಲದೆ ಗ್ರಾಮದಲ್ಲಿ ಜೀವನ ನಡೆಸುತ್ತಿದ್ದಾರೆ. ಅಂಥವರಿಗಾಗಿ ವಿಶ್ವವಿದ್ಯಾಲಯಗಳು ಯೋಚಿಸಬೇಕು, ಮರ್ಯಾದಾ ಹತ್ಯೆ, ಮಕ್ಕಳಿಂದ ತಂದೆತಾಯಿಗಳ ಹತ್ಯೆಯಂಥಹ ಪ್ರಕರಣಗಳು ನಡೆಯಬಾರದು ಅದಕ್ಕಾಗಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು ಸಭೆಗಳನ್ನು ನಡೆಸಿ ಪರಿಹಾರ ಕಂಡುಕೊಳ್ಳಬೇಕು, ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವಂತಾಗಬೇಕು ಎಂದು ಹೇಳಿದರು. ಜಾತಿ, ಧರ್ಮಕ್ಕೆ ವಿವಿಗಳು ಸೀಮಿತವಾಗಬಾರದು, ಈಗಿರುವ ಸ್ಥಿತಿಯನ್ನು ನೋಡಿದರೇ ದೇಶದ ಭವಿಷ್ಯದ ದಿನಗಳು ಹೇಗಿರುತ್ತವೆ ಎಂಬ ಚಿಂತೆ ಉಂಟಾಗುತ್ತದೆ. ಯುವಕರು ಕುಡಿತ, ಡ್ರಗ್ಸಸೇವನೆಯಂಥಹ ಕೆಟ್ಟ ಚಟಗಳ ದಾಸರಾಗುತ್ತಿದ್ದಾರೆ ಅದನ್ನು ನಿಯಂತ್ರಿಸುವಲ್ಲಿ ಪ್ರತಿಯೊಬ್ಬರು ತಮ್ಮ ಕೈಲಾದ ಸಹಕಾರ ನಿಡಬೇಕಾಗಿದೆ. ಮಕ್ಕಳಿಗೆ ಉತ್ತಮ ಮಾರ್ಗದರ್ಶನ, ಸಂಸ್ಕಾರ ನೀಡುವ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರು. ವಿವಿಗೆ ಎಲ್ಲ ರೀತಿಯ ಸಹಕಾರ ನೀಡುವದಾಗಿ ಹೇಳಿದ ಅವರು, ಸರ್ಕಾರಿ ಜಮೀನು ಇದ್ದರೇ ಹೇಳಿ ಅದನ್ನು ವಿವಿಗೆ ಹಸ್ತಾಂತರಿಸಲು ಎಲ್ಲರೀತಿಯಿಂದ ಪ್ರಯತ್ನ ಪಡುವುದಾಗಿ ತಿಳಿಸಿದರು. ಈ ಭಾಗದ ವಿವಿಯನ್ನು ಉಳಿಸಿ ಬೆಳೆಸಲು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ಶಾಸಕ ಜಗದೀಶ ಗುಡಗುಂಟಿ ಮಾತನಾಡಿದರು. ಶೇ.95 ಯಷ್ಟು ಸಂಖ್ಯೆಯ ಪ.ಜಾತಿ. ಪ.ಪಂಗಡದ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುವ ವಿವಿಗೆ ಸರ್ಕಾರ ಸೂಕ್ತವಾದ ಅನುದಾನ ಬಿಡುಗಡೆ ಮಾಡಬೇಕು, ಜಮೀನು ನೀಡಿ ಹೊಸಕಟ್ಟಡದ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಬೇಕು, ವಿವಿಯ ಕುಲಪತಿಗಳಿಗೆ ವಾಹನ ಸೌಲಭ್ಯಕಲ್ಪಿಸಿಕೊಡಬೇಕೆಂದು ಸಚಿವರಿಗೆ ಮನವಿ ಮಾಡಿದರು. ವಿವಿಯ ಕುಲಪತಿ ಆನಂದ ದೇಶಪಾಂಡೆ ಮಾತನಾಡಿ, ವಿಶ್ವವಿದ್ಯಾಲಯವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಉತ್ತಮ ಉಪನ್ಯಾಸಕರ ಬಳಗ ದಿಂದ ವಿದ್ಯಾರ್ಥಿಗಳ ಸರ್ವತೋನ್ಮುಖ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಸೈಕ್ಲಿಂಗ್‌ ಮತ್ತು ಮಲ್ಲಖಂಭದ ವಿದ್ಯಾರ್ಥಿಗಳು ರಾಷ್ಟ್ರಮಟ್ಟ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ವಿವಿಗೆ ಗೌರವ ತಂದಿದ್ದಾರೆ. ವಿವಿಯಿಂದ ಸಂಶೋಧನೆಗೆ ಕ್ರಮ ಜರುಗಿಸಿದ್ದೇವೆ. 32 ಗೈಡ್‌ಗಳನ್ನು ಬರಮಾಡಿಕೊಂಡು ಸಂಶೋಧನೆಗೆ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. ಹಾಸನ ವಿವಿಯ ಕುಲಪತಿ ಡಾ.ತರಿಕೇರೆ ತಾರಾನಾಥ, ಹಾವೇರಿ ವಿವಿಯ ಕುಲಪತಿ ಸುರೇಶ ಜಂಗಮಶೆಟ್ಟಿ, ಕೊಪ್ಪಳ ವಿವಿಯ ಕುಲಪತಿ ಬಿ.ಕೆ.ರವಿ, ವೇದಿಕೆಯಲ್ಲಿದ್ದರು.ಕುಲಸಚಿವ ಡಾ. ದಯಾನಂದ ಸೌಕಾರ, ಸ್ವಾಗತಿಸಿದರು, ಅಭಿವೃದ್ಧಿ ಮಂಡಲಿಯ ನಿರ್ದೇಶಕ ಡಾ. ಚಿದಾನಂದ ಢವಳೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಣಕಾಸು ಅಧಿಕಾರಿ ಡಾ.ಮಲ್ಲಿಕಾರ್ಜುನ ಮರಡಿ ವಂದಿಸಿದರು. ಅವರುಣ ಕುಮಾರ ಶಾ, ಸಂದೀಪ ಬೆಳಗಲಿ, ತಹಸೀಲ್ದಾರ ಸದಾಶಿವ ಮಕ್ಕೊಜಿ, ಸಿಂಡಿಕೇಟ್‌ ಸದಸ್ಯರು ,ಸಿಬ್ಬಂದಿಗಳು, ವಿದ್ಯಾರ್ಥಿಗ ಳು, ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article