ಹುಕ್ಕೇರಿ : ಸಮಾಜದಲ್ಲಿ ಸಮಾನತೆ ತರಲು ಅಂಬೇಡ್ಕರ್ ಅವರ ಚಿಂತನೆಗಳು ಇಂದಿಗೂ ಪ್ರಸ್ತುತ. ಅವರ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಾದರೆ ಶಿಕ್ಷಣವೇ ಪ್ರಮುಖ ಅಸ್ತ್ರ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅಭಿಪ್ರಾಯಪಟ್ಟರು.
ಎಲಿಮುನ್ನೋಳಿ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ ಡಾ. ಬಿ. ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಸುಧಾರಣೆ ತರಲು ಯುವ ಸಮುದಾಯ ಆಲೋಚಿಸುವ ಗುಣ ಬೆಳೆಸಿಕೊಳ್ಳಬೇಕು. ಇದರಿಂದ ಸರಿ ತಪ್ಪುಗಳನ್ನು ಪ್ರಶ್ನಿಸುವ ಮನೋಭಾವ ಬೆಳೆಯುತ್ತದೆ ಎಂದರು.
ಅಂಬೇಡ್ಕರ್ ಅವರು ಹೇಳಿದಂತೆ ಜ್ಞಾನವೇ ಶಕ್ತಿಯ ಮೂಲ ಎನ್ನುವುದನ್ನು ಸಂಪಾದಿಸಲು ಕಠಿಣ ಪರಿಶ್ರಮ ಪಡಬೇಕು. ಪುಸ್ತಕ ಮತ್ತು ಚಿಂತಕರ ಬರವಣಿಗಳನ್ನು ಓದುವ ಮೂಲಕ ಅಂಬೇಡ್ಕರರ ಹಾದಿಯಲ್ಲಿ ಸಾಗಬೇಕು ಎಂದು ಅವರು ಸಲಹೆ ಮಾಡಿದರು.
ಇದೇ ವೇಳೆ ಡಾ. ಬಿ.ಆರ್. ಅಂಬೇಡ್ಕರ್ ಪರಿವರ್ತನಾ ಸಮಾಜ ಸೇವಾ ಸಂಘ ಎಲಿಮುನ್ನೋಳಿ ಶಾಖೆಯ ಫಲಕವನ್ನು ಅನಾವರಣಗೊಳಿಸಲಾಯಿತು. ನಂತರ ಗ್ರಾಮದ ಶತಾಯುಷಿ ಅಜ್ಜಿಗೆ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಹುಣಸಿಕೊಳ್ಳಮಠದ ಸಿದ್ಧಬಸವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ತಹಶೀಲ್ದಾರ ಮಂಜುಳಾ ನಾಯಕ, ಗ್ರಾಪಂ ಅಧ್ಯಕ್ಷ ಮೀರಾಸಾಬ ಮುಲ್ತಾನಿ, ಸಿಪಿಐ ಮಹಾಂತೇಶ ಬಸ್ಸಾಪುರ, ಮುಖಂಡರಾದ ಪವನ ಕತ್ತಿ, ಸುರೇಶ ತಳವಾರ, ರಮೇಶ ಹುಂಜಿ, ಶಾನೂಲ್ ತಹಸೀಲ್ದಾರ್, ವೀರುಪಾಕ್ಷಿ ಮರೆನ್ನವರ, ಮುತ್ತು ವಿಜಯನ್ನವರ, ಶಿವಾನಂದ ಮರಿನಾಯಿಕ, ಸದಾಶಿವ ಕಾಂಬಳೆ, ಕಿರಣ ಬಾಗೇವಾಡಿ ಮತ್ತಿತರರು ಉಪಸ್ಥಿತರಿದ್ದರು.