ಮಾಲೆ(ಮಾಲ್ಡೀವ್ಸ್): ಅಧ್ಯಕ್ಷ ಮೊಹಮದ್ ಮುಯಿಜು ಅಸಹಕಾರ ನೀತಿ ಅನುಸರಿಸುತ್ತಿದ್ದರೂ, ನೆರೆಯ ದ್ವೀಪರಾಷ್ಟ್ರ ಮಾಲ್ಡೀವ್ಸ್ಗೆ ಭಾರತ ಆರ್ಥಿಕ ಬೆಂಬಲ ಘೋಷಿಸಿದೆ. ಕಳೆದ ವರ್ಷದಂತೆ ಈ ಬಾರಿಯೂ 50 ಮಿಲಿಯನ್ ಡಾಲರ್ ಬಡ್ಡಿರಹಿತ ಅನುದಾನ ಬಿಡುಗಡೆ ಮಾಡಿದೆ.
ಮಾಲ್ಡೀವ್ಸ್ ಸರ್ಕಾರದ ಕೋರಿಕೆಯ ಮೇರೆಗೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ (ಎಸ್ಬಿಐ) ಮಾಲ್ಡೀವ್ಸ್ನ ಹಣಕಾಸು ಸಚಿವಾಲಯಕ್ಕೆ 50 ಮಿಲಿಯನ್ ಡಾಲರ್ ಅನುದಾನವನ್ನು ಒಂದು ವರ್ಷದ ಅವಧಿಗೆ ನೀಡಲಾಗಿದೆ ಎಂದು ಅಲ್ಲಿನ ಭಾರತೀಯ ಹೈಕಮಿಷನ್ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.
ತುರ್ತು ಹಣಕಾಸು ನೆರವು: “ಮಾರ್ಚ್ 2019ರಿಂದ ಭಾರತ ಸರ್ಕಾರವು ಎಸ್ಬಿಐನಿಂದ ಇಂತಹ ಆರ್ಥಿಕ ನೆರವು ನೀಡುತ್ತಿದೆ. ಮಾಲ್ಡೀವ್ಸ್ ಸರ್ಕಾರಕ್ಕೆ ನೀಡಲಾಗುವ ವಾರ್ಷಿಕ ಅನುದಾನವು ಬಡ್ಡಿರಹಿತವಾಗಿರುತ್ತದೆ. ದ್ವೀಪರಾಷ್ಟ್ರದ ಅಭಿವೃದ್ಧಿಗಾಗಿ ನೀಡುವ ತುರ್ತು ಹಣಕಾಸು ಸಹಾಯ ಇದಾಗಿದೆ. ಸರ್ಕಾರಗಳ ನಡುವಿನ ವಿಶಿಷ್ಟ ವ್ಯವಸ್ಥೆಯಡಿ ಈ ಸಾಲ ಮಂಜೂರು ಮಾಡಲಾಗುತ್ತದೆ” ಎಂದು ಭಾರತೀಯ ಹೈಕಮಿಷನ್ ಮಾಹಿತಿ ನೀಡಿದೆ.