ರಾಯಪುರ (ಛತ್ತೀಸ್‌ಗಢ): ಛತ್ತೀಸ್‌ಗಢದ ರಾಯಪುರದಲ್ಲಿ ಟ್ರೇಲರ್ ಟ್ರಕ್ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿ ಭೀಕರ ಅಪಘಾತ ಸಂಭವಿಸಿದ್ದು, 13 ಮಂದಿ ಸಾವನ್ನಪ್ಪಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ರಾಯ್ಪುರ ಜಿಲ್ಲೆಯ ರಾಯ್ಪುರ-ಬಲೋದಬಜಾರ್ ರಸ್ತೆಯ ಸರಗಾಂವ್ ಬಳಿ ಅಪಘಾತ ಸಂಭವಿಸಿದ್ದು, ದುರ್ಘಟನೆಯಲ್ಲಿ ನಾಲ್ಕು ಮಕ್ಕಳು ಮತ್ತು ಒಂಬತ್ತು ಮಹಿಳೆಯರು ಸಾವನ್ನಪ್ಪಿದ್ದಾರೆ.
ಚಟೌಡ್ ಗ್ರಾಮದ ಕುಟುಂಬವೊಂದು ಕುಟುಂಬದ ಸಮಾರಂಭದಲ್ಲಿ ಭಾಗವಹಿಸಲು ಬನ್ಸಾರಿ ಗ್ರಾಮಕ್ಕೆ ತೆರಳಿತ್ತು. ಕಾರ್ಯಕ್ರಮ ಮುಗಿಸಿ ವಾಪಸ್ ತಡರಾತ್ರಿ ಟ್ರಕ್ನಲ್ಲಿ ಹಿಂತಿರುಗುವಾಗ ಖರೋರಾ ಪೊಲೀಸ್ ಠಾಣೆ ಪ್ರದೇಶದ ಸರಗಾಂವ್ ಬಳಿ ಟ್ರೇಲರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಬಗ್ಗೆ ಮಾಹಿತಿ ಬಂದ ನಂತರ, ಪೊಲೀಸ್ ತಂಡವನ್ನು ಸ್ಥಳಕ್ಕೆ ಕಳುಹಿಸಲಾಯಿತು ಮತ್ತು ಗಾಯಾಳುಗಳನ್ನು ರಾಯ್ಪುರದ ಡಾ. ಭೀಮರಾವ್ ಅಂಬೇಡ್ಕರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಜಿಲ್ಲಾಡಳಿತದ ಅಧಿಕಾರಿಗಳು ಸಹ ಸ್ಥಳಕ್ಕೆ ಆಗಮಸಿದ್ದಾರೆ ಎಂದು ರಾಯ್ಪುರ ಜಿಲ್ಲಾಧಿಕಾರಿ ಗೌರವ್ ಸಿಂಗ್ ಹೇಳಿದರು.
ಅಪಘಾತದಲ್ಲಿ 13 ಜನರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತತಿದ್ದಾರೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.