ನವದೆಹಲಿ, ಮೇ 12: ಸಿಂಧೂ ನದಿ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿ, ಆಪರೇಷನ್ ಸಿಂಧೂರ್(Operation Sindoor) ಆರಂಭಿಸುವ ಮೂಲಕ ಭಾರತ ರಕ್ತ ಮತ್ತು ನೀರಿನ ಹರಿವನ್ನು ನಿಲ್ಲಿಸಿದೆ ಎಂದು ಬಿಜೆಪಿ ಸಂಸದ ಸಂಬಿತ್ ಪಾತ್ರ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ. ಇದು ಅಸಾಧಾರಣ ಸಾಧನೆ. ಪಾಕಿಸ್ತಾನದೊಳಗೆ ನುಗ್ಗಿ ದಾಳಿ ಮಾಡಿ ಅವರ ಭಯೋತ್ಪಾದಕ ಶಿಬಿರಗಳನ್ನು ನಿರ್ಮೂಲನೆ ಮಾಡುವುದು ಸುಲಭವಲ್ಲ.
ಇದು ನೂತನ ಭಾರತ, ನಾವು ಅವರ ನೆಲಕ್ಕೆ ತೆರಳಿ ಅವರ ಮೇಲೆ ದಾಳಿ ಮಾಡಿದ್ದೇವೆ ಎಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಾತ್ರಾ ಹೇಳಿದ್ದಾರೆ. ಒಂದು ದೇಶವು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರದೊಳಗೆ ಆಳವಾಗಿ ದಾಳಿ ಮಾಡಿರುವುದು ಇದೇ ಮೊದಲು. ಎರಡೂ ಕಡೆಯ ನಡುವಿನ ಪ್ರಸ್ತುತ ಪರಿಸ್ಥಿತಿ ಕದನ ವಿರಾಮವಲ್ಲ, ಬದಲಾಗಿ ಒಂದು ತಿಳಿವಳಿಕೆಯಾಗಿದೆ ಎಂದು ಬಿಜೆಪಿ ನಾಯಕ ಸ್ಪಷ್ಟಪಡಿಸಿದರು.