ಪಟಿಯಾಲ (ಪಂಜಾಬ್): ಭಾರತೀಯ ವಾಯುಪಡೆಯ ಸಮವಸ್ತ್ರಗಳನ್ನು ಕದ್ದು ಧರಿಸಿಕೊಂಡು ಐಎಎಫ್ ಸಿಬ್ಬಂದಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಇಬ್ಬರನ್ನು ಪಂಜಾಬ್ನ ಪಟಿಯಾಲಾದ ಜಿರಾಕ್ಪುರದಲ್ಲಿ ಬಂಧಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಮಧ್ಯೆ ಸೇನಾ ಡ್ರೆಸ್ನಲ್ಲಿ ಅಧಿಕಾರಿಗಳಂತೆ ಸುತ್ತಾಡುತ್ತಿದ್ದ ಇಬ್ಬರು ಖದೀಮರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ವಾಯುಪಡೆಯ ಸಮವಸ್ತ್ರಗಳನ್ನು ಕದ್ದಿದ್ದ ಆರೋಪಿಗಳು, ಬಳಿಕ ಅದನ್ನು ಧರಿಸಿ ಬೀದಿಗಳಲ್ಲಿ ಸುತ್ತಾಡುತ್ತಿದ್ದರು. ಜಿರಾಕ್ಪುರ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಪಟಿಯಾಲದ ಜಿರಾಕ್ಪುರದ ಡಿಎಸ್ಪಿ ಜಸ್ಪಿಂದರ್ ಸಿಂಗ್ ಗಿಲ್ ಮಾಹಿತಿ ನೀಡಿದ್ದಾರೆ.
ಜಿರಾಕ್ಪುರ ನಿವಾಸಿಗಳಾದ ಸುಖ್ಪ್ರೀತ್ ಸಿಂಗ್ ಮತ್ತು ಸುಖ್ಬೀರ್ ಸಿಂಗ್ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಅವರಲ್ಲಿ ಸುಖ್ಪ್ರೀತ್ ಸಿಂಗ್ ವಾಯುಪಡೆಯ ಸಮವಸ್ತ್ರ ಧರಿಸಿದ್ದರು. ಈ ಸಮವಸ್ತ್ರವು ಗುಜರಾತ್ನ ವಾಯುಪಡೆ ಅಧಿಕಾರಿಯೊಬ್ಬರಿಗೆ ಸೇರಿದ್ದಾಗಿದೆ. ಸೇನೆ ಮತ್ತು ವಾಯುಪಡೆಯ ಸಮವಸ್ತ್ರಗಳನ್ನು ಹೊಲಿಯುವ ಜಿರಾಕ್ಪುರದ ಪಕ್ಕದಲ್ಲಿರುವ ಹಳ್ಳಿಯ ದರ್ಜಿಯೊಬ್ಬರು ಈ ಸಮವಸ್ತ್ರವನ್ನು ಕೊರಿಯರ್ ಮೂಲಕ ಕಳಿಸಿದ್ದರು. ಆದರೆ ಈ ಇಬ್ಬರೂ ಆರೋಪಿಗಳು ಮೇ 5ರ ರಾತ್ರಿ ಕೊರಿಯರ್ ಕಚೇರಿಯಿಂದಲೇ ಸಮವಸ್ತ್ರವನ್ನು ಕದ್ದಿದ್ದರು. ಇಬ್ಬರೂ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಇದೇ ವೇಳೆ, ಪೊಲೀಸರು ಕೊರಿಯರ್ ಸಿಬ್ಬಂದಿಯನ್ನೂ ವಿಚಾರಣೆ ಮಾಡುತ್ತಿದ್ದಾರೆ ಎಂದು ಡಿಎಸ್ಪಿ ಗಿಲ್ ಮಾಹಿತಿ ನೀಡಿದರು.